2025ರ ವೇಳೆಗೆ ಶಿವಮೊಗ್ಗ ಜಿಲ್ಲೆಯನ್ನು ಕ್ಷಯ ಮುಕ್ತ ಮಾಡಲು ಎಲ್ಲರ ಸಹಕಾರ ಅತ್ಯಗತ್ಯ: ರಾಜೇಶ್ ಸುರಗೀಹಳ್ಳಿ
ಶಿವಮೊಗ್ಗ: ಕ್ಷಯರೋಗವು ಮೈಕೋಬ್ಯಾಕ್ಟಿರಿಯಂ ಟ್ಯೂಬರ್‌ಕುಲೆ ಎಂಬ ಸೂಕ್ಷ್ಮಾಣುವಿನಿಂದ ಬರುವ ಕಾಯಿಲೆ ಇದು ಹೃದಯ, ಅಸ್ತಿಪಂಜರ, ಜಠರ, ಕರಳು, ಜನನಾಂಗ, ಮೆದುಳು ಮತ್ತು ಇತರೆ ಅಂಗಾಂಗಳಲ್ಲಿ ಕಾಣಿಸಿಕೊಂಡು ಹಾನಿ ಉಂಟು ಮಾಡುವ ಮಾರಣಾಂತಿಕ ಕಾಯಿಲೆ. ಈ ಕಾಯಿಲೆಯನ್ನು 2025 ರ ವೇಳೆಗೆ ಕೊನೆಗಾಣಿಸಲೇಬೇಕಾಗಿದೆ. ಆದ್ದರಿಂದ ಜಿಲ್ಲೆಯ ಎಲ್ಲಾ ಸಾರ್ವಜನಿಕರು, ಜನಪ್ರತಿನಿಧಿಗಳು, ಇಲಾಖೆಗಳ ಸಹಕಾರ ಅತ್ಯಗತ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು,ಆದರೂ ಭಯ ಬೇಡ. ಇದಕ್ಕೆ ಚಿಕಿತ್ಸೆ ಇದ್ದು, ಚಿಕಿತ್ಸೆ ಪಡೆದಲ್ಲಿ ಸಂಪೂರ್ಣ ಗುಣಮುಖರಾಗಬಹುದು. ಭಾರತದಲ್ಲಿ ಪ್ರತಿ ದಿನ 60000 ಜನರಿಗೆ ಈ ರೋಗವು ಗಾಳಿಯ ಮೂಲಕ ದೇಹವನ್ನು ಪ್ರವೇಶ ಮಾಡುತ್ತದೆ ಎಂದರು.
೬೦೦೦ ಜನರಿಗೆ ರೋಗ ಉಲ್ಬಣಗೊಂಡು ಪ್ರತಿ ನಿತ್ಯ ೬೦೦ ಜನ ಮರಣ ಹೊಂದುತ್ತಿದ್ದಾರೆ. ಒಂದು ವರ್ಷದಲ್ಲಿ ೧ ಲಕ್ಷಜನ ಸಂಖ್ಯೆಗೆ ೧೯೭ ಜನ ಕ್ಷಯ ರೋಗಿಗಳಿರುತ್ತಾರೆ. ವಿಶ್ವದ ಜನ ಸಂಖ್ಯೆಯ ನಾಲ್ಕನೇ ಒಂದು ಭಾಗ ಕ್ಷಯ ರೋಗಿಗಳಿದ್ದಾರೆ. ೨.೨ ಲಕ್ಷ ಜನರು ಕ್ಷಯದಿಂದ ಮರಣ ಹೊಂದುತ್ತಿದ್ದಾರೆ. ಪ್ರತಿ ೩ ನಿಮಿಷಕ್ಕೆ ಇಬ್ಬರು ಕ್ಷಯರೋಗಿಗಳು ಮರಣ ಹೊಂದುತ್ತಿದ್ದಾರೆ. ಇದು ಭವಿಷ್ಯದಲ್ಲಿ ಅಪಾಯದ ಮುನ್ಸೂಚನೆಯಾಗಿದೆ ಎಂದು ಅವರು ಎಚ್ಚರಿಸಿದರು.
ಎರಡು ವಾರಕ್ಕಿಂತ ಹೆಚ್ಚು ಕೆಮ್ಮು. ಕೆಮ್ಮಿದಾಗ ಕಫ ಬರುವುದು. ಕಫದಲ್ಲಿ ರಕ್ತ ಬೀಳುವುದು. ಸಂಜೆ ವೇಳೆ ಜ್ವರ ಬರುವುದು. ಮೈ ಬೆವರುವುದು. ತೂಕ ಕಡಿಮೆಯಾಗುವುದು. ಹಸಿವಾಗದೇ ಇರುವುದು, ಎದೆ ನೋವು. ಶರೀರ ಯಾವುದೇ ಭಾಗದಲ್ಲಿ ಗಂಟು ಕಾಣಿಸಿಕೊಳ್ಳುವುದು. ಈ ಲಕ್ಷಣಗಳಲ್ಲಿ ಯಾವುದಾದರೂ ಒಂದು ಲಕ್ಷಣವಿದ್ದರೂ ಅದು ಕ್ಷಯ ರೋಗವಾಗಿರಬಹುದು. ಅದನ್ನು ಖಚಿತಪಡಿಸಿಕೊಳ್ಳಲು ಸಮೀಪದ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಕಫ ಪರೀಕ್ಷೆ ಮಾಡಿಸಿಕೊಳ್ಳಿ. ತಾಲ್ಲೂಕು, ಜಿಲ್ಲಾ ಆಸ್ಪತ್ರೆಗಳಲ್ಲಿ ಎಕ್ಸ-ರೇ ಮಾಡಿಸುವ ಮೂಲಕ ದೃಢಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ರೋಗದ ಚಿಕಿತ್ಸೆಯಲ್ಲಿ ೬ ತಿಂಗಳು ರೋಗಿಯ ತೂಕಕ್ಕೆ ಅನುಗುಣವಾಗಿ ಮಾತ್ರೆ ನೀಡಲಾಗುವುದು. ಹಾಗೂ ರೋಗಿಯು ಪೌಷ್ಠಿಕ ಆಹಾರ ಸೇವಿಸಲು ೬ ತಿಂಗಳವರೆಗೆ ಪ್ರತಿ ತಿಂಗಳೂ ರೂ. ೫೦೦ ಗಳ ಪ್ರೋತ್ಸಾಹ ಧನವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಟಿ.ಬಿ ಗೆ ಸಂಬಂಧಿಸಿದ ಎಲ್ಲಾ ವಿಧದ ತಪಾಸಣೆಗಳು, ಪರೀಕ್ಷೆಗಳು ಮತ್ತು ಚಿಕಿತ್ಸೆ ಸಂಪೂರ್ಣವಾಗಿ ಉಚಿತವಾಗಿ ದೊರೆಯುತ್ತದೆ ಎಂದರು.
ಪರೀಕ್ಷೆ ಹಾಗೂ ಚಿಕಿತ್ಸೆಯಿಂದ ತಪ್ಪಿಸಿಕೊಂಡ ಕ್ಷಯರೋಗಿಯು ಕೆಮ್ಮುವುದರಿಂದ, ಸೀನುವುದರಿಂದ ಮತ್ತು ಉಗುಳುವುದರಿಂದ ಗಾಳಿಯ ಮೂಲಕ ಒಂದು ವರ್ಷದಲ್ಲಿ ೧೦ ರಿಂದ ೧೫ ಜನರಿಗೆ ರೋಗ ಹರಡುವ ಸಾಧ್ಯತೆ ಇರುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಇದು ಸಮಾಜದ ಎಲ್ಲಾ ಜನರಿಗೂ ಆರೋಗ್ಯ ಸಮಸ್ಯೆಯಾಗುವ ಕಾರಣ ಇದರ ನಿವಾರಣೆ ಪ್ರತಿಯೊಬ್ಬರ ಜವಾಬ್ದಾರಿ ಕೂಡ ಆಗಿದೆ. ಆದುದರಿಂದ ಮೇಲ್ಕಂಡ ಲಕ್ಷಣಗಳಿರುವ ರೋಗಿಗಳು ಕಂಡುಬಂದಲ್ಲಿ ಆರೋಗ್ಯ ಕಾರ್ಯಕರ್ತೆಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಜನ ಪ್ರತಿನಿಧಿಗಳು, ಸಂಘ ಸಂಸ್ಥೆಗಳು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಡುವ ಜವಾಬ್ದಾರಿ ತೆಗೆದುಕೊಳ್ಳಲು ಹಾಗೂ 2025 ರ ವೇಳೆಗೆ ಶಿವಮೊಗ್ಗ ಜಿಲ್ಲೆಯನ್ನು ಕ್ಷಯ ಮುಕ್ತ ಮಾಡಲು ಸಮಾಜದ ಎಲ್ಲರ ಸಹಕಾರ ಅತ್ಯಗತ್ಯ ಎಂದು ಅವರು ಮನವಿ ಮಾಡಿದ್ದಾರೆ.