×
Ad

ಮೈಸೂರು: ಪೊಲೀಸರ ಮೇಲೆ ಹಲ್ಲೆ; 8 ಮಂದಿ ಆರೋಪಿಗಳ ಬಂಧನ

Update: 2021-03-23 22:43 IST

ಮೈಸೂರು,ಮಾ.23: ನಗರದ ಹೊರವಲಯದ ಹಿನಕಲ್ ರಿಂಗ್ ರಸ್ತೆಯಲ್ಲಿ ಮೈಸೂರು ನಗರ ವಿ.ವಿ.ಪುರಂ ಸಂಚಾರಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ವಿಜಯನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೈಕ್ ತಪಾಸಣೆ ವೇಳೆ ಪೊಲೀಸರು ಲಾಠಿಯಿಂದ ಹೊಡೆದು ಕೆಳಕ್ಕೆ ಬಿದ್ದ ವ್ಯಕ್ತಿ ಮೇಲೆ ಲಾರಿ ಹರಿದು ಸಾವನ್ನಪ್ಪಿದ್ದರು ಎಂದು ಆರೋಪಿಸಿ ಪೊಲೀಸರ ಮೇಲೆ ಸಾರ್ವಜನಿಕರು ಹಲ್ಲೆ ನಡೆಸಿದ್ದರು. ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ ಜಖಂಗೊಳಿಸಿದ್ದರು. ಜೊತೆಗೆ ಎಎಸ್‍ಐ ಮಾದೇಗೌಡ, ಪೊಲೀಸ್ ಕಾನ್ಸ್‍ಟೇಬಲ್ ಮಂಜು ಮತ್ತು ಸ್ವಾಮಿನಾಯಕ ಮೇಲೆ ಹಲ್ಲೆ ನಡೆಸಲಾಗಿತ್ತು.

ಈ ಸಬಂಧ ಪ್ರಕರಣ ದಾಖಲಿಸಿಕೊಂಡ ವಿಜಯನಗ ಪೊಲೀಸರು ಸರ್ಕಾರಿ ವಾಹನ ಧ್ವಂಸ, ಕರ್ತವ್ಯಕ್ಕೆ ಅಡ್ಡಿ ಆರೊಪದಡಿ ಮೂರು ದೂರುಗಳನ್ನು ದಾಖಲಿಸಿಕೊಂಡಿದ್ದಾರೆ. ಈ ದೂರಿನ ಆಧಾರದ ಮೇಲೆ ಹಲ್ಲೆ ಮಾಡಿದ್ದ 8 ಜನರನ್ನು ಬಂಧಿಸಿದ್ದಾರೆ. ಇನ್ನೂ ಉಳಿದ ವ್ಯಕ್ತಿಗಳಿಗೆ ಸಾಮಾಜಿಕ ಜಾಲತಾಣದ ವೀಡೀಯೊ ಮತ್ತು ಸ್ಥಳೀಯರ ಮಾಹಿತಿ ಮೇಲೆ ಶೋಧ ನಡೆಸುತ್ತಿದ್ದಾರೆ.

ನಿನ್ನೆಯ ಘಟನೆಯಲ್ಲಿ ಪೊಲೀಸರ ತಪ್ಪಿಲ್ಲ: ಡಿಸಿಪಿ ಗೀತಾ ಪ್ರಸನ್ನ
ನಗರದ ಹಿನಕಲ್ ರಿಂಗ್ ರಸ್ತೆಯಲ್ಲಿ ಸಂಚಾರಿ ಪೊಲೀಸರ ತಪಾಸಣೆ ವೇಳೆ ಅಯತಪ್ಪಿ ಬಿದ್ದು ಬೈಕ್ ಸವಾರ ಸಾವನ್ನಪ್ಪಿದ ಪ್ರಕರಣ ಸಂಬಂಧ ಘಟನೆಯಲ್ಲಿ ಪೊಲೀಸರ ತಪ್ಪಿಲ್ಲ. ನಿನ್ನೆಯ ಘಟನೆಯಲ್ಲಿ ನಮ್ಮ ಇಬ್ಬರು ಪೊಲೀಸರಿಗೆ ಹಲ್ಲೆಯಾಗಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಸಿಪಿ ಗೀತಾ ಪ್ರಸನ್ನ ಹೇಳಿದ್ದಾರೆ.

ಘಟನೆ ಕುರಿತು ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಘಟನೆಯಲ್ಲಿ ಪೊಲೀಸರ ತಪ್ಪಿಲ್ಲ. ವಾಹನ ತಪಾಸಣೆ ಮಾಡುವ ಜಾಗದಿಂದ ಅವರು ದೂರದಲ್ಲೆ ಇದ್ದರು. ಹಿಂಬದಿಯಿಂದ ಬಂದ ಟಿಪ್ಪರ್‍ನಿಂದ ಘಟನೆ ಜರುಗಿದೆ. ಪೊಲೀಸರು ತಮ್ಮ ಕರ್ತವ್ಯವನ್ನಷ್ಟೆ ನಿರ್ವಹಿಸಿದ್ದಾರೆ. ಸರ್ಕಾರ ಸೂಚಿಸಿದ ದಂಡವನ್ನಷ್ಟೆ ನಾವು ವಸೂಲಿ ಮಾಡುತ್ತಿದ್ದೇವೆ. ಕಾನೂನು ಪಾಲನೆ ಎಲ್ಲರ ಜವಾಬ್ದಾರಿ. ಅದನ್ನ ಜನರಿಗೆ ತೊಂದರೆಯಾಗದಂತೆ ಜಾರಿಗೆ ತರೋದೆ ನಮ್ಮ ಕೆಲಸ ಎಂದು ತಿಳಿಸಿದರು.

ನಿನ್ನೆ ಘಟನೆ ನಂತರ ಹಲವು ದೂರುಗಳು ಬಂದಿದೆ. ಆ ದೂರುಗಳನ್ನ ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ. ಇಂದು ಎಲ್ಲ ಸಿಬ್ಬಂದಿಗಳ ಸಭೆ ಕರೆದು ಮಾಹಿತಿ ಪಡೆಯುತ್ತೇವೆ. ಸಿಬ್ಬಂದಿ ಸಮಸ್ಯೆ ಹಾಗೂ ಜನರ ಸಮಸ್ಯೆ ಎರಡನ್ನು ಅಲಿಸಿ ಪರಿಹಾರ ಹುಡುಕುತ್ತೇವೆ ಎಂದು ಡಿಸಿಪಿ ಗೀತಾ ಪ್ರಸನ್ನ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News