×
Ad

ನ್ಯಾಯಾಲಯದ ಆದೇಶದ ಮೇರೆಗೆ ಜಾಗ, ಕಟ್ಟಡ ವಶಕ್ಕೆ ಪಡೆದ ಅಧಿಕಾರಿಗಳ ತಂಡ

Update: 2021-03-23 22:57 IST

ಚಿಕ್ಕಮಗಳೂರು, ಮಾ.23: ಗ್ರಾಮ ಪಂಚಾಯತ್‍ಗೆ ಸೇರಿದ್ದ ಗ್ರಾಮ ಠಾಣಾ ಜಾಗವನ್ನು ಒತ್ತುವರಿ ಮಾಡಿದ್ದಲ್ಲದೇ ಆ ಜಾಗದಲ್ಲಿ ವಾಣಿಜ್ಯ ಕಟ್ಟಡ  ನಿರ್ಮಿಸಿಕೊಂಡಿದ್ದ ಜಾಗವನ್ನು ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರ ಬಿಗಿ ಭದ್ರತೆಯಲ್ಲಿ ಗ್ರಾಪಂ ವಶಕ್ಕೆ ಪಡೆದ ಘಟನೆ ಮೂಡಿಗೆರೆ ತಾಲೂಕಿನ ಹಿರೇಬೈಲು ಗ್ರಾಮದಲ್ಲಿ ಮಂಗಳವಾರ ನಡೆಯಿತು.

ಮೂಡಿಗೆರೆ ತಾಲೂಕಿನ ಇಡಕಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಹಿರೇಬೈಲ್ ಗ್ರಾಮದಲ್ಲಿದ್ದ 11 ಗುಂಟೆ ಗ್ರಾಮ ಠಾಣಾ ಜಾಗವನ್ನು ಸ್ಥಳೀಯರೊಬ್ಬರು ಒತ್ತುವರಿ ಮಾಡಿಕೊಂಡಿದ್ದಲ್ಲದೇ ಅದನ್ನು ರಾಜಕೀಯ ಪಕ್ಷವೊಂದರಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದರೆನ್ನಲಾಗಿದೆ. ಜಾಗ ಖರೀದಿ ಮಾಡಿದ್ದವರು 11 ಗುಂಟೆ ಗ್ರಾಮ ಠಾಣಾ ಜಾಗದಲ್ಲಿ ಲಕ್ಷಾಂತರ ರೂ. ಮೌಲ್ಯದ ವಾಣಿಜ್ಯ ಮಳಿಗೆ ನಿರ್ಮಿಸಿದ್ದರು ಎಂದು ತಿಳಿದು ಬಂದಿದೆ.

ಈ ಸಂಬಂದ ಕೆಲ ನಾಗರಿಕರು ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ನ್ಯಾಯಾಲಯ ಹಾಗೂ ಹೈಕೋರ್ಟ್‍ಗೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ದೂರಿನ ಮೇರೆಗೆ ತಾಪಂ, ಜಿಪಂ ನ್ಯಾಯಾಲಯ ಸೇರಿದಂತೆ ಹೈಕೋರ್ಟ್‍ನಲ್ಲೂ ವಾಣಿಜ್ಯ ಕಟ್ಟಡ ನಿರ್ಮಿಸಿರುವ ಜಾಗ ಇಡಕಣಿ ಗ್ರಾಮ ಪಂಚಾಯತ್‍ಗೆ ಸೇರಿದ್ದ ಗ್ರಾಮ ಠಾಣಾ ಜಾಗ ಎಂದು ತೀರ್ಪು ಬಂದಿತ್ತು. ಅಲ್ಲದೇ ಒತ್ತುವರಿ ತೆರವು ಮಾಡಿ ಜಾಗವನ್ನು ವಶಕ್ಕೆ ಪಡೆಯಲು ನ್ಯಾಯಾಲಯ ಆದೇಶ ನೀಡಿತ್ತು.

ಈ ಹಿನ್ನೆಲೆಯಲ್ಲಿ ಮಂಗಳವಾರ ಮೂಡಿಗೆರೆ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಪ್ರಕಾಶ್, ಇಡಕಣಿ ಗ್ರಾಪಂ ಕಾರ್ಯದರ್ಶಿ ಶ್ರೀನಿವಾಸ್ ಹಾಗೂ ಮೂಡಿಗೆರೆ ತಾಲೂಕು ಕಚೇರಿಯ ಕಂದಾಯಾಧಿಕಾರಿಗಳ ತಂಡ ಪೊಲೀಸ್ ಇಲಾಖೆಯ ಬಿಗಿ ಭದ್ರತೆಯಲ್ಲಿ ಒತ್ತುವರಿ ಮಾಡಿದ್ದ ಜಾಗ ಹಾಗೂ ವಾಣಿಜ್ಯ ಕಟ್ಟಡವನ್ನು ವಶಕ್ಕೆ ಪಡೆದು ಗ್ರಾಪಂ ಸುಪರ್ದಿಗೆ ಒಪ್ಪಿಸಿದರು.

ಈ ವೇಳೆ ಸ್ಥಳದಲ್ಲಿ ಜಾಗ ಒತ್ತುವರಿದಾರರು, ಕಟ್ಟಡ ನಿರ್ಮಿಸಿದ್ದ ವ್ಯಕ್ತಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನೆರದಿದ್ದರಿಂದ ಪೊಲೀಸರು ಬಿಗಿ ಭದ್ರತೆ ನಿಯೋಜಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News