ಬೈಕ್‍ನಿಂದ ಬಿದ್ದು ಸವಾರ ಸಾವು ಪ್ರಕರಣ: ಪೊಲೀಸರದೇನು ತಪ್ಪಿಲ್ಲ; ಸಹಸವಾರ ಸ್ಪಷ್ಟನೆ
ಮೈಸೂರು,ಮಾ.23: ಸಂಚಾರಿ ಪೊಲೀಸ್ ತಪಾಸಣೆ ವೇಳೆ ಆಯತಪ್ಪಿ ಬಿದ್ದ ಪರಿಣಾಮ ಹಿಂಬದಿಯಿಂದ ಬರುತ್ತಿದ್ದ ವಾಹನ ಹರಿದು ಬೈಕ್ ಸವಾರ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಹಿನಕಲ್ ರಿಂಗ್ ರಸ್ತೆಯಲ್ಲಿ ಪೊಲೀಸರನ್ನು ಸಾರ್ವಜನಿಕರು ಥಳಿಸಿದ್ದರು. ಆದರೆ ಘಟನೆ ಹಾಗೆ ನಡೆದಿದ್ದಲ್ಲ ಎಂದು ಹಿಂಬದಿಯಲ್ಲಿ ಕುಳಿತಿದ್ದ ಸವಾರ ಸುರೇಶ್ ಸ್ಪಷ್ಟನೆ ನೀಡಿದ್ದಾರೆ.
ನಾನು ನನ್ನ ಸ್ನೇಹಿತ ಹಿನಕಲ್ ರಿಂಗ್ ರಸ್ತೆಯಲ್ಲಿ ಬೈಕ್ ನಲ್ಲಿ ಬರುತ್ತಿದ್ದೆವು. 100 ಮೀಟರ್ ಅಂತರದಲ್ಲಿ ವಿವಿ ಪುರಂ ಸಂಚಾರಿ ಪೊಲೀಸರು ತಪಾಸಣೆ ನಡೆಸುತ್ತಿದ್ದರು. ನಾವಿಬ್ಬರೂ ಸಹ ಹೆಲ್ಮೆಟ್ ಹಾಕಿದ್ದೆವು. ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್ ಲಾರಿ ನಮ್ಮ ಬೈಕ್ ಗೆ ಗುದ್ದಿದೆ. ನಂತರ ನಾವು ಬೈಕ್ ನಿಂದ ಕೆಳಗೆ ಬಿದಿದ್ದೇವೆ. ನನ್ನ ಸ್ನೇಹಿತನಿಗೆ ವಾಹನ ಹರಿದು ಬಿಟ್ಟು ಚಿಂತಾಜನಕವಾಗಿದೆ ಎಂದು ತಿಳಿಸಿದರು. ಆಗ ನನಗೆ ಪ್ರಜ್ಞೆ ತಪ್ಪಿತ್ತು. ಅಲ್ಲೇ ಇದ್ದ ಪೊಲೀಸರು ಓಡಿ ಬಂದು ನನ್ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ನಾವಿಬ್ಬರು ಹೆಲ್ಮೆಟ್ ಧರಿಸಿಯೇ ವಾಹನ ಚಲಾಯಿಸುತ್ತಿದ್ದೆವು. ಈ ಘಟನೆಗೂ ಪೊಲೀಸರಿಗೂ ಯಾವುದೇ ಸಂಬಂಧವಿಲ್ಲ. ಅವರು ನಮ್ಮನ್ನು ತಪಾಸಣೆ ಮಾಡಿಲ್ಲ. ರಭಸವಾಗಿ ಬಂದ ಲಾರಿ ಚಾಲಕ ನಿಯಂತ್ರಣ ಮಾಡಲಾಗದೇ ನಮ್ಮ ಬೈಕಿಗೆ ಗುದ್ದಿದ್ದಾನೆ ಎಂದು ಹಿಂಬದಿ ಸವಾರ ವಿಡೀಯೊ ಮೂಲಕ ತಿಳಿಸಿದ್ದಾರೆ.