ಧರ್ಮಗುರು ಮೇಲೆ ಹಲ್ಲೆ ಪ್ರಕರಣ: ಅರ್ಚಕರು, ಫಾಧರ್ ಸೇರಿದಂತೆ ಪ್ರಮುಖರ ಖಂಡನೆ

Update: 2021-03-23 17:54 GMT

ಸಕಲೇಶಪುರ:  ತಾಲೂಕಿನ ಸುಂಡೆಕೆರೆ ಗ್ರಾಮದ ಮಸೀದಿ ಧರ್ಮಗುರು ಮೇಲೆ ನಾಲ್ವರು ಕಿಡಿಗೇಡಿಗಳು ನಡೆಸಿರುವ ಹಲ್ಲೆಯನ್ನು ಸರ್ವಧರ್ಮದ ಪ್ರಮುಖರು ಖಂಡಿಸಿದ್ದಾರೆ.

ಇಲ್ಲಿಯ ಗ್ರಾಮದ ಗಣಪತಿ ದೇವಾಲಯ ಸಮಿತಿ ಅರ್ಚಕರಾದ ನಾಗರಾಜ್ ಭಟ್ಟರು, ಚರ್ಚ್ ಫಾದರ್ ಜರಮ್ ಮಚಾದೊ, ಗ್ರಾಮದ ಪ್ರಮುಖರಾದ ನಾಗರಾಜ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಮಧು ಮಣಿ, ಮಾಜಿ ಅಧ್ಯಕ್ಷೆ ವನಜಾಕ್ಷಿ ಗ್ರಾಪಂ ಸದಸ್ಯ  ಸತೀಶ್ ಸೇರಿದಂತೆ ಅನೇಕರು ಈ ಘಟನೆಯನ್ನು ಖಂಡಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಇಲ್ಲಿಯ ಗಣಪತಿ ದೇವಸ್ಥಾನದ ಸಮಿತಿ ಅರ್ಚಕ ನಾಗರಾಜ್ ಬಟ್ಟರು ವಿಷಾದ ವ್ಯಕ್ತಪಡಿಸಿದರು. ಇಂತಹ ಘಟನೆಗಳು ನಡೆಯಬಾರದು ನಡೆದಿರುವುದು ನನಗೆ ಬಹಳ ದುಃಖ ತಂದಿದೆ ಇಂತಹ ಕೃತ್ಯ ಎಸಗಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಚರ್ಚ್ ಫಾದರ್ ಚರನ್ ಮಚಾದೊ ಮಾತನಾಡಿ, ಈ ಘಟನೆ ನಡೆಯಬಾರದಿತ್ತು. ಇಲ್ಲಿ ಎಲ್ಲರೂ ಸೌಹಾರ್ದವಾಗಿ ಬದುಕುತ್ತಿದ್ದಾರೆ. ಸರ್ವಧರ್ಮದ ಕೇಂದ್ರಗಳು ಅಕ್ಕಪಕ್ಕದಲ್ಲೇ ಇದೆ. ನಾವು ಹೇಗೆ ಇರಬೇಕು ಎಂಬುದನ್ನು ಈ ಸ್ಥಳವೇ ನಮಗೆ ಸಾಕ್ಷಿಯಾಗಿದೆ ಎಂದು ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯತಿಯ ಅಧ್ಯಕ್ಷೆ ಮಧು ಮಣಿ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಈ ಕೃತ್ಯವನ್ನು ಯಾರು ಮಾಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಆದರೆ ಈ ಘಟನೆಯನ್ನು ನಾನು ಖಂಡಿಸುತ್ತೇನೆ ಯಾವುದೇ ಧರ್ಮದ ಗುರುಗಳಾಗಿ ಇರಲಿ ಅವರಿಗೆ ನಾವು ಗೌರವವನ್ನು ನೀಡಬೇಕು. ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಶಾಂತಿ ನೆಮ್ಮದಿ ತರುವ ವ್ಯಕ್ತಿಗಳಿಗೆ ಪಾಠವಾಗಬೇಕು ಎಂದರು.

 ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ವನಜಾಕ್ಷಿ  ಮಾತನಾಡಿ, ನಮ್ಮೂರಿನ ಸೌಹಾರ್ದಕ್ಕೆ ಹಾಗೂ ಶಾಂತಿಭಂಗಕ್ಕೆ ಪ್ರಯತ್ನಿಸುವರು ಯಾರೇ ಆಗಿರಲಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಘಟನೆಗೆ ನಾನು ಖಂಡನೆ ವ್ಯಕ್ತಪಡಿಸುತ್ತೇನೆ ಎಂದರು.

ಪಂಚಾಯಿತಿ ಸದಸ್ಯ ಸತೀಶ್ ಮಾತನಾಡಿ, ಘಟನೆ ನಡೆದ ಸಂದರ್ಭದಲ್ಲಿ ಊರಿನಲ್ಲಿ ಇರಲಿಲ್ಲ.  ನಂತರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರ ತಿಳಿದುಕೊಂಡೆ. ನನಗೆ ಬಹಳ ದುಖಃವಾಯಿತು ನಡೆಯಬಾರದ ಘಟನೆ ಇಲ್ಲಿ ನಡೆದುಹೋಗಿದೆ. ನಾನು ಘಟನೆಯನ್ನು ಖಂಡಿಸುತ್ತೇನೆ. ಹಲ್ಲೆ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ ಎಂದರು. ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News