ಶಾಲೆಗಳಲ್ಲಿ ಬಿಸಿಯೂಟ ತಯಾರಕರಿಗೆ ಸೂಕ್ತ ವೇತನ ಕೋರಿ ಅರ್ಜಿ:ಕೇಂದ್ರ ಸರಕಾರವನ್ನು ಪ್ರತಿವಾದಿಯಾಗಿಸಲು ಹೈಕೋರ್ಟ್ ಸೂಚನೆ

Update: 2021-03-23 17:56 GMT

ಬೆಂಗಳೂರು: ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಅಡುಗೆಯವರಿಗೆ ಮತ್ತು ಸಹಾಯಕರಿಗೆ ಸೂಕ್ತ ವೇತನ ನೀಡಲು ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ಕೇಂದ್ರ ಸರಕಾರವನ್ನೂ ಪ್ರತಿವಾದಿಯಾಗಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿದೆ.

ಈ ಕುರಿತು ಎಮ್.ಎಸ್.ನೌಹೇರಾ ಶೇಖ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಸರಕಾರದ ಪರ ವಕೀಲರು ಮಾಹಿತಿ ನೀಡಿ, ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಮುಖ್ಯ ಅಡುಗೆಯವರಿಗೆ 2700 ರೂ. ಹಾಗೂ ಸಹಾಯಕರಿಗೆ 2600 ರೂ. ನೀಡಲಾಗುತ್ತಿದೆ.

ಇತ್ತೀಚೆಗೆ ಮುಖ್ಯ ಅಡುಗೆ ತಯಾರಕರಿಗೆ 6 ಸಾವಿರ ಹಾಗೂ ಸಹಾಯಕರಿಗೆ 5 ಸಾವಿರ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆ ಪರಿಗಣಿಸಿದರೆ ಸರಕಾರಕ್ಕೆ ಹೆಚ್ಚುವರಿಯಾಗಿ 325.7 ಕೋಟಿ ವೆಚ್ಚ ತಗುಲಲಿದೆ. ಪ್ರಸ್ತುತ ಆರ್ಥಿಕ ಸಂಕಷ್ಟದಲ್ಲಿರುವ ಸರಕಾರಕ್ಕೆ ಇದನ್ನು ಪರಿಗಣಿಸುವುದು ಕಷ್ಟ. ಇನ್ನು ಬಿಸಿಯೂಟ ಯೋಜನೆಯಲ್ಲಿ ಕೇಂದ್ರ ಹಾಗೂ ರಾಜ್ಯಗಳೆರಡರ ಪಾಲೂ ಇದ್ದು, ಅಡುಗೆ ತಯಾರಕರ ವೇತನದಲ್ಲಿ ರಾಜ್ಯದ ಪಾಲು ಹೆಚ್ಚಿಸಲಾಗಿದೆ ಎಂದರು.

ಅರ್ಜಿದಾರರ ಪರ ವಕೀಲರಾದ ಆಶಿಶ್ ಕೃಪಾಕರ್ ವಾದಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾಕರರ ಪಾತ್ರವೂ ಇದೆ. ಇದೊಂದೇ ಕೆಲಸವನ್ನು ನಂಬಿಕೊಂಡಿರುವ ಕೆಲಸಗಾರರೂ ಇದ್ದಾರೆ. ಸರಕಾರದ ಪರ ವಕೀಲರು ಹೇಳುವಂತೆ 325 ಕೋಟಿ ರಾಜ್ಯ ಸರಕಾರಕ್ಕೆ ದೊಡ್ಡ ಹೊರೆಯಾಗದು ಎಂದರು.

ವಕೀಲರ ವಾದ ಆಲಿಸಿದ ನ್ಯಾಯಪೀಠ, ರಾಜ್ಯದ ನಿಲುವಿನ ಬಗ್ಗೆ ಮುಂದೆ ಚರ್ಚಿಸೋಣ. ಸದ್ಯಕ್ಕೆ ಕೇಂದ್ರದ ಪಾಲು ಕಡಿಮೆ ಇದೆ ಎಂದು ರಾಜ್ಯದ ಪರ ವಕೀಲರು ಹೇಳಿರುವುದರಿಂದ ಯೋಜನೆಗೆ ಸಂಬಂಧಿದಂತೆ ಕೇಂದ್ರ ಸರಕಾರದ ಇಲಾಖೆಯನ್ನೂ ಪ್ರತಿವಾದಿ ಪಟ್ಟಿಗೆ ಸೇರಿಸಿ ಎಂದು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಎ.9ಕ್ಕೆ ಮುಂದೂಡಿತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News