ನೆಹರೂ ದುಬಾರಿ ಪ್ರಧಾನಿ: ಎಂ.ಪಿ.ನಾಡಗೌಡ

Update: 2021-03-23 18:08 GMT

ಬೆಂಗಳೂರು, ಮಾ.23: ದೇಶದ ಮೊಟ್ಟಮೊದಲ ಪ್ರಧಾನ ಮಂತ್ರಿಯಾಗಿದ್ದ ಜವಾಹರಲಾಲ್ ನೆಹರೂ ಅವರು ದುಬಾರಿ ಪ್ರಧಾನಿಯಾಗಿದ್ದು, ಇದನ್ನು ಸಮಾಜವಾದಿ ನಾಯಕ ರಾಮಮನೋಹರ ಲೋಹಿಯಾ ಅವರು ತಮ್ಮ ಪತ್ರದಲ್ಲಿಯೇ ಉಲ್ಲೇಖಿಸಿದ್ದಾರೆ ಎಂದು ವಿಧಾನಪರಿಷತ್ತಿನ ಮಾಜಿ ಸದಸ್ಯ ಎಂ.ಪಿ.ನಾಡಗೌಡ ನುಡಿದರು.

ಮಂಗಳವಾರ ನಗರದಲ್ಲಿ ಭಾರತ ಯಾತ್ರಾ ಕೇಂದ್ರ, ಲೋಕನಾಯಕ ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆ, ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಹಾಗೂ ಡಾ.ರಾಮಮನೋಹರ ಲೋಹಿಯಾ ಸಮತಾ ವಿಚಾರ ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ್ದ ಲೋಹಿಯಾ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಪ್ರತಿನಿತ್ಯ 25 ಸಾವಿರ ರೂಪಾಯಿ ಪ್ರಧಾನಿ ನೆಹರೂ ಅವರಿಗಾಗಿಯೇ ಖರ್ಚು ಮಾಡಲಾಗುತ್ತಿದೆ. ಇದರಿಂದ ಜನಸಾಮಾನ್ಯರಿಗೆ ಹೊರೆಯಾಗುತ್ತಿದೆ ಎಂದು ನೇರವಾಗಿ ಪ್ರಧಾನಿಗಳಿಗೆ ರಾಮಮನೋಹರ ಲೋಹಿಯಾ ಪತ್ರ ಬರೆದಿದ್ದರು. ಇದರಿಂದಲೇ ಅವರ ನೇರ, ನುಡಿಯ ವ್ಯಕ್ತಿತ್ವ ಬೆಳಕಿಗೆ ಬರುತ್ತದೆ ಎಂದು ನೆನದರು.

ಹಿರಿಯ ಸಾಹಿತಿ ಮಂಗ್ಳೂರು ವಿಜಯ ಮಾತನಾಡಿ, ಲೋಹಿಯಾ ಅವರ ತತ್ವ, ಆದರ್ಶಗಳನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು. ಅದನ್ನು ಮುಂದಿನ ಪೀಳಿಗೆಯವರಿಗೂ ವರ್ಗಾಯಿಸಬೇಕು. ಈ ಉದ್ದೇಶ ಸಾಕಾರಗೊಳ್ಳಬೇಕಾದರೆ ನಾವು ಮೊದಲು ಯುವಕರನ್ನು ಒಗ್ಗೂಡಿಸಬೇಕು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಚಿಂತಕ ಕೆ.ಎಸ್.ನಾಗರಾಜ್, ಕೆ.ವಿ.ನಾಗರಾಜಮೂರ್ತಿ, ದಯಾನಂದ್ ಕೋಲಾರ, ಟಿ.ಪ್ರಭಾಕರ್, ಪ್ರದೀಪ್ ವೆಂಕಟ್, ನರೇಂದ್ರ ಹಾಗೂ ಸುಷ್ಮಿತಾ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News