ನಿರ್ಲಕ್ಷ್ಯ ಮಾಡುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಚಿವ ಶ್ರೀಮಂತ್ ಪಾಟೀಲ್

Update: 2021-03-23 18:20 GMT

ಬೆಂಗಳೂರು, ಮಾ.23: ರಾಜ್ಯ ಸರಕಾರವು ಅಲ್ಪಸಂಖ್ಯಾತ ಸಮುದಾಯದಲ್ಲಿರುವ ಬಡವರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಮೈಕ್ರೋ ಸಾಲ ಯೋಜನೆ ರೂಪಿಸಿದೆ. ಅರ್ಹ ಫಲಾನುಭವಿಗಳಿಗೆ ಸರಕಾರದ ಈ ಯೋಜನೆಯ ಪ್ರತಿಫಲ ಸಿಗಬೇಕಾದರೆ ಜಿಲ್ಲಾ ಮಟ್ಟದಲ್ಲಿರುವ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ್ ಪಾಟೀಲ್ ತಿಳಿಸಿದರು.

ಮಂಗಳವಾರ ವಿಕಾಸಸೌಧದಲ್ಲಿ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ಕೆಎಂಡಿಸಿ)ದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ 2020-21ನೆ ಸಾಲಿನ ಮೈಕ್ರೋ ಸಾಲ(ವೈಯಕ್ತಿಕ) ಯೋಜನೆಯ ಫಲಾನುಭವಿಗಳನ್ನು ಆನ್‍ಲೈನ್ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸರಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ನಿರ್ಲಕ್ಷ್ಯ ಅಥವಾ ಅಸಡ್ಡೆ ತೋರುವ ಪ್ರವೃತಿಯನ್ನು ಯಾವುದೆ ಯಾರಣಕ್ಕೂ ಸಹಿಸಿಕೊಳ್ಳುವುದಿಲ್ಲ. ಅಂತಹ ಜಿಲ್ಲಾ ಮಟ್ಟದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಶ್ರೀಮಂತ್ ಪಾಟೀಲ್ ಎಚ್ಚರಿಕೆ ನೀಡಿದರು.

ಬಡವರು ಸರಕಾರದ ಯೋಜನೆಗಳ ಲಾಭ ಪಡೆದುಕೊಳ್ಳಲು, ಸಣ್ಣ ಸಣ್ಣ ಕೆಲಸಗಳಿಗೂ ದೂರದ ಊರುಗಳಿಂದ ಬೆಂಗಳೂರಿನ ಕಚೇರಿಗಳಿಗೆ ಬಂದು ಅಲೆಯುವಂತಹ ಪರಿಸ್ಥಿತಿಯಿದೆ. 10 ಸಾವಿರ ರೂ.ಗಳ ಕಿರು ಸಾಲ ಯೋಜನೆಗೆ ಸಿಗುವ ಎರಡು ಸಾವಿರ ರೂ.ಗಳ ಸಹಾಯಧನಕ್ಕಾಗಿ, ಅಧಿಕಾರಿಗಳು ತೋರುವ ನಿರ್ಲಕ್ಷ್ಯದಿಂದ ಅದಕ್ಕಿಂತ ಎರಡುಪಟ್ಟು ಹಣವನ್ನು ವ್ಯಯ ಮಾಡುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರವಾಸ ಮಾಡಿದಾಗ, ಸಾರ್ವಜನಿಕರಿಂದ ಈ ಬಗ್ಗೆ ನನಗೆ ಅನೇಕ ದೂರುಗಳು ಬಂದಿವೆ. ಇನ್ನು ಮುಂದೆ ಯಾವುದೆ ಕಾರಣಕ್ಕೂ ಇಂತಹ ದೂರುಗಳು ಬರದಂತೆ ಎಚ್ಚರ ವಹಿಸಿ, ನಿಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ, ಇಲ್ಲವೇ ಕ್ರಮ ಎದುರಿಸಲು ಸಿದ್ಧವಾಗಿರಿ ಎಂದು ಶ್ರೀಮಂತ್ ಪಾಟೀಲ್, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕೆಎಂಡಿಸಿ ವತಿಯಿಂದ ನೀಡುವ ಈ ಮೈಕ್ರೋ ಸಾಲ ಯೋಜನೆಯಡಿ ಒಬ್ಬ ಫಲಾನುಭವಿಗೆ 10 ಸಾವಿರ ರೂ. ಆರ್ಥಿಕ ನೆರವು ನೀಡಲಾಗುತ್ತದೆ. ಇದರಲ್ಲಿ 8 ಸಾವಿರ ಸಾಲದ ರೂಪದಲ್ಲಿದ್ದರೆ, ಇನ್ನುಳಿದ ಎರಡು ಸಾವಿರ ರೂ.ಸಬ್ಸಿಡಿ ಇರುತ್ತದೆ. 2020-21ನೇ ಸಾಲಿನಲ್ಲಿ ಸಾಲಕ್ಕಾಗಿ ನಿಗಮಕ್ಕೆ 44,862 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 42,501 ಅರ್ಜಿಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.

ಮೈಕ್ರೋ ಸಾಲ ಯೋಜನೆಗೆ ಈ ವರ್ಷ 18.79 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ. ಆದುದರಿಂದ, 18,790 ಫಲಾನುಭವಿಗಳಿಗೆ ಸಾಲ ನೀಡುವ ಗುರಿ ಹೊಂದಿರುವುದರಿಂದ, ಮಧ್ಯವರ್ತಿಗಳಿಗೆ ಅವಕಾಶವಿಲ್ಲದಂತೆ, ಅತ್ಯಂತ ಪಾರದರ್ಶಕವಾಗಿ ಆನ್‍ಲೈನ್ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ಶ್ರೀಮಂತ್ ಪಾಟೀಲ್ ಹೇಳಿದರು.

ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಖ್ತಾರ್ ಹುಸೇನ್ ಪಠಾಣ್, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್, ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕ ಮಹಿಬೂಬ್ ಸಾಬ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News