×
Ad

ನಾವು ಸಾಲ ಮಾಡಿ ತುಪ್ಪ ತಿಂದಿಲ್ಲ, ರಾಜ್ಯದ ಅಭಿವೃದ್ಧಿಗಾಗಿ ಸಾಲ ಮಾಡಲಾಗಿದೆ: ಸಿಎಂ ಯಡಿಯೂರಪ್ಪ

Update: 2021-03-24 17:21 IST

ಬೆಂಗಳೂರು, ಮಾ. 24: ‘ಸಾಲ ಮಾಡಿ ನಾವೇನು ತುಪ್ಪ ತಿಂದಿಲ್ಲ ಅಥವಾ ಮೋಜಿಗಾಗಿ, ಔತಣ ನಡೆಸಲು ಸಾಲದ ಹಣ ಬಳಸಿಲ್ಲ. ಕೊರೋನ ಸಾಂಕ್ರಾಮಿಕದಿಂದ ಜನರ ಜೀವ ರಕ್ಷಣೆ ಮತ್ತು ಪ್ರಕೃತಿ ವಿಕೋಪ ತಂದಿತ್ತ ಸಂಕಷ್ಟ ನಿವಾರಣೆಗಾಗಿ ಅಗತ್ಯವಾದ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಅಭಿವೃದ್ದಿ ಚಕ್ರವನ್ನು ಚಾಲನೆಯಲ್ಲಿ ಇರಿಸಿಕೊಳ್ಳಲು ಸಾಲ ಮಾಡಲಾಗಿದೆ' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ‘ಸಿಡಿ ಪ್ರಕರಣ' ಹೈಕೋರ್ಟ್ ನ್ಯಾಯಮೂರ್ತಿ ಉಸ್ತುವಾರಿಯಲ್ಲಿ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್ ಸದಸ್ಯರ ಧರಣಿ ಸತ್ಯಾಗ್ರಹ, ಧಿಕ್ಕಾರದ ಘೋಷಣೆ, ಗದ್ದಲ-ಕೋಲಾಹಲದ ನಡುವೆಯೇ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ‘ಅಭಿವೃದ್ಧಿಗಾಗಿ ಸಾಲ ಮಾಡಿದ್ದೇವೆ. ಸಾಲ ಮಾಡದೇ ಯಾವ ಸರಕಾರಗಳು ಯೋಜನೆಗಳ ಅನುಷ್ಠಾನ ಮಾಡಿದ ಉದಾಹರಣೆಗಳಿಲ್ಲ' ಎಂದು ತಿಳಿಸಿದರು.

‘ಇದೊಂದು ಅಭಿವೃದ್ಧಿ ವಿರೋಧಿ, ಜನವಿರೋಧಿ ಬಜೆಟ್, ರಾಜಸ್ವ ಕೊರತೆ ಬಜೆಟ್ ಎಂದೆಲ್ಲಾ ಟೀಕಿಸಿ, ಅಭಿವೃದ್ಧಿಗೆ ಅನುದಾನ ದೊರೆಯದಿರುವ ಅಪಾಯವಿದೆ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಆದರೆ, ಸಮೃದ್ಧಿಯ ಸಂದರ್ಭಗಳಲ್ಲೇ ಸರಕಾರಗಳು ಸಾಲ ಮಾಡಿರುವಾಗ ಸಾಂಕ್ರಾಮಿಕರ ಸಂಕಷ್ಟ, ಪ್ರವಾಹ ಮತ್ತಿತರ ಪ್ರಕೃತಿ ವಿಕೋಪ ಸೃಷ್ಟಿಸಿದ ಪ್ರತಿಕೂಲ ಪರಿಸ್ಥಿತಿಯಲ್ಲಿ ಸಾಲ ಮಾಡದೆ ಅಭಿವೃದ್ಧಿ ಕಾರ್ಯಕೈಗೊಳ್ಳುವುದು ಹೇಗೇ ಸಾಧ್ಯ? ಆರ್ಥಿಕತೆಗೆ ಚೈತನ್ಯ ನೀಡಲು ಹೇಗೆ ಸಾಧ್ಯ?' ಎಂದು ಯಡಿಯೂರಪ್ಪ ಪ್ರಶ್ನಿಸಿದರು.

‘ಕೇಂದ್ರ ಸರಕಾರ 2021-22ನೆ ಸಾಲಿಗೆ ರಾಜ್ಯಗಳಿಗೆ ಜಿಎಸ್‍ಡಿಪಿಯ ಶೇ.4ರವರೆಗೆ ಸಾಲ ಪಡೆಯಲು ಅನುಮತಿ ನೀಡಿದೆ. ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ 2002ಕ್ಕೆ ತಿದ್ದುಪಡಿ ಮಾಡಿ ಈ ಅವಕಾಶವನ್ನು ಬಳಸಿಕೊಳ್ಳಲಾಗುವುದು. ಸಹಜವಾಗಿ ಆರ್ಥಿಕತೆಯ ಸ್ಥಗಿತದಿಂದಾಗಿ ಜಿಡಿಪಿ ಬೆಳವಣಿಗೆ ಕುಂಠಿತಗೊಂಡಿದೆ. ತೆರಿಗೆ ಸಂಗ್ರಹಣೆಯಲ್ಲಿ ಕೊರತೆ ಉಂಟಾಗಿದೆ. ಆದರೂ, ಬದ್ಧ ವೆಚ್ಚಗಳ ನಿರ್ವಹಣೆ ಜತೆಗೆ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಕೈಗೊಂಡಿದ್ದೇವೆ' ಎಂದು ಅವರು ವಿವರಿಸಿದರು.

‘2020-21ನೆ ಸಾಲಿನ ಆಯವ್ಯಯದ ಅಂದಾಜಿಗೆ ಎದುರಾಗಿ ಶೇ.94ರಷ್ಟು ವೆಚ್ಚವನ್ನು ಸಾಧಿಸುವ ಭರವಸೆ ತಮಗಿದೆ. ಈ ಮೊದಲು ಇದು ಶೇ.85ರಷ್ಟಾಗಬಹುದು ಎಂದು ಅಂದಾಜು ಮಾಡಲಾಗಿತ್ತು ಎಂದ ಅವರು, ಹಿಂದಿನ ತಿಂಗಳುಗಳಲ್ಲಿ ವಿತ್ತೀಯ ಶಿಸ್ತನ್ನು ಕಾಪಾಡಿಕೊಂಡಿದ್ದರ ಫಲ ಮತ್ತು ಕಳೆದ ತ್ರೈಮಾಸಿಕದಲ್ಲಿ ಆರ್ಥಿಕ ಚಟುವಟಿಕೆಗಳು ಸುಧಾರಿಸಿದ ಕಾರಣ ಇದು ಸಾಧ್ಯವಾಗಿದೆ. ಆದರೂ 10 ತಿಂಗಳ ಕಾಲ ನಿಸ್ತೇಜನಗೊಂಡಿದ್ದ ಆರ್ಥಿಕತೆ ಕೇವಲ 3 ತಿಂಗಳಲ್ಲಿ ಪರಿಪೂರ್ಣವಾಗಿ ಚೇತರಿಸಿಕೊಳ್ಳಲು ಸುಲಭ ಸಾಧ್ಯವಲ್ಲ. ಕಳೆದ ತ್ರೈಮಾಸಿಕದಲ್ಲಿ ಕಂಡ ಚೇತರಿಕೆಯಿಂದಾಗಿ ಭರವಸೆಯ ಆಶಾಕಿರಣ ಕಂಡಿದೆ' ಎಂದರು.

‘ಹಿಂದಿನ ವರ್ಷ ಅನುಭವಿಸಿದ ಕಷ್ಟ-ನಷ್ಟಗಳು ಮರುಕಳುಹಿಸದಂತೆ ನೋಡಿಕೊಳ್ಳುವ ಜತೆಗೆ ಅಭಿವೃದ್ಧಿ ಚಕ್ರ 2021-22ನೆ ಸಾಲಿನ ಆರ್ಥಿಕ ವರ್ಷವಿಡೀ ಚಲನೆಯಲ್ಲಿರುವಂತೆ ನೋಡಿಕೊಳ್ಳುವ ಹೊಣೆ ನಮ್ಮದು. 2021-22ನೆ ಸಾಲಿನ ಮುಂಗಡ ಪತ್ರ ಯಶಸ್ವಿಯಾಗಿ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದು ಎಂದ ಅವರು, ಕೋವಿಡ್ ಅನಿರೀಕ್ಷಿತವಾಗಿ ಬಂದೆರಗಿದಾಗ ಯಾವುದೇ ಸರಕಾರದ ಬಳಿ ದಿಢೀರ್ ಎಂದು ಪರಿಹಾರ ನೀಡಲು ಯಾವುದೇ ಮಂತ್ರದಂಡ ಇರುವುದಿಲ್ಲ ಅಥವಾ ಸರಕಾರದ ಬೊಕ್ಕಸ ಅಕ್ಷಯ ಪಾತ್ರೆಯೇನಲ್ಲ, ಇದು ಪ್ರತಿಪಕ್ಷ ಮತ್ತು ಆಡಳಿತ ಪಕ್ಷದವರಿಗೆ ತಿಳಿದ ವಿಚಾರ' ಎಂದು ಹೇಳಿದರು.

‘ವಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸುವಂತೆ ಯಾವುದೇ ಸರಕಾರ ಯಾವುದೇ ವಿಚಾರಗಳನ್ನು ಬಜೆಟ್‍ನಲ್ಲಿ ಮುಚ್ಚಿಲ್ಲ. ಮುಂಗಡ ಪತ್ರ ಮತ್ತು ಮಧ್ಯಮಾವಧಿ ವಿತ್ತೀಯ ಯೋಜನೆ ದಾಖಲೆಗಳಲ್ಲಿ ಎಲ್ಲ್ಲ ವಿಚಾರಗಳನ್ನು ವಿವರವಾಗಿ ಹಂಚಿಕೊಳ್ಳಲಾಗಿದೆ. ಹೊಸ ತೆರಿಗೆ ಹೇರಿಲ್ಲ, ತೆರಿಗೆ ವಸೂಲಿ ಜಾಲದ ವಿಸ್ತರಣೆ, ಸರಕಾರಿ ಸಾಲಗಳ ವಸೂಲಾತಿ, ತೆರಿಗೆಯೇತರ ಆದಾಯ ಸಂಗ್ರಹಣೆಯಲ್ಲಿ ಹೆಚ್ಚಳಕ್ಕೆ ಕ್ರಮ ವಹಿಸಲಾಗಿದೆ' ಎಂದು ಅವರು ವಿವರ ನೀಡಿದರು.

‘ಈ ಸಾಲಿನ ಬಜೆಟ್‍ನ ಒಟ್ಟು ಗಾತ್ರ 2,46,2078 ಕೋಟಿ ರೂ.ಗಳಾಗಿದೆ. ಈ ಮೊತ್ತವು 2020-21ನೆ ಸಾಲಿನ ಬಜೆಟ್‍ಗೆ ಹೋಲಿಸಿದರೆ ಶೇ.3.5ರಷ್ಟು ಹೆಚ್ಚಾಗಿದೆ. ಇದರಲ್ಲಿ ರಾಜ್ಯಸ್ವ ವೆಚ್ಚ 1,87,405 ಕೋಟಿ ರೂ.ಗಳು ಮತ್ತು ಬಂಡವಾಳ ವೆಚ್ಚ 44,237 ಕೋಟಿ ರೂ ಹಾಗೂ ಸಾರ್ವಜನಿಕ ಋಣ 14,565 ಕೋಟಿ ರೂ.ಗಳಾಗಿರುತ್ತವೆ' ಎಂದು ಯಡಿಯೂರಪ್ಪ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News