"ಟಿಕಾಯತ್‌ ವಿರುದ್ಧ ಕೇಸು ದಾಖಲಿಸಿದ್ದು ‌ಪ್ರಜಾಸತ್ತಾತ್ಮಕ ಧ್ವನಿ ನಿಗ್ರಹಿಸುವ ಪ್ರಯತ್ನ": ಪಾಪ್ಯುಲರ್‌ ಫ್ರಂಟ್

Update: 2021-03-24 12:00 GMT

ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ರೈತ ಮಹಾ ಪಂಚಾಯತ್ ನಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕ ರಾಕೇಶ್ ಟಿಕಾಯತ್ ರ ಮೇಲೆ ಪ್ರಕರಣ ದಾಖಲಿಸಿರುವುದು ಪ್ರಜಾಸತ್ತಾತ್ಮಕ ಧ್ವನಿಯನ್ನು ನಿಗ್ರಹಿಸುವ ಪ್ರಯತ್ನವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್ ಹೇಳಿದ್ದಾರೆ.

ಈ ದೇಶದ ರೈತರು ಕೃಷಿ ವಿರೋಧಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ನೂರು ದಿನಗಳಿಗೂ ಹೆಚ್ಚು ಸಮಯದಿಂದ ದಿಲ್ಲಿಯ ಗಡಿ ಭಾಗದಲ್ಲಿ ಫ್ರತಿಭಟನೆ ನಡೆಸುತ್ತಿದ್ದಾರೆ. ರೈತರ  ಪ್ರತಿಭಟನೆ ಕೇಂದ್ರ ಸರಕಾರಕ್ಕೆ ಮುಜುಗರ ಉಂಟು ಮಾಡಿದ್ದರೂ, ಅದು ತನ್ನ ದುರಹಂಕಾರದ ಕಾರಣದಿಂದಾಗಿ ಪ್ರತಿಭಟನೆಯ ಧ್ವನಿಯನ್ನು ಆಲಿಸಲು ಮುಂದಾಗುತ್ತಿಲ್ಲ. ಈ ನಡುವೆ ಪ್ರತಿಭಟನೆಯ ದಿಕ್ಕು ತಪ್ಪಿಸಲು ಹಲವು ಪ್ರಯತ್ನಗಳು ನಡೆಯಿತಾದರೂ, ಮೋದಿ ಸರಕಾರವು ಅದರಲ್ಲಿ ಯಶಸ್ಸು ಕಾಣಲು ಸಾಧ್ಯವಾಗಿಲ್ಲ. ಇದೀಗ ಟಿಕಾಯತ್ ಅವರ ಮೇಲೆ ದಾಖಲಿಸಿರುವ ಪ್ರಕರಣವು ಇದೇ ರೀತಿಯ ಕುತ್ಸಿತ ಪ್ರಯತ್ನಗಳ ಮುಂದುವರಿದ ಭಾಗವಾಗಿದೆ. ಭಿನ್ನಾಭಿಪ್ರಾಯದ ಧ್ವನಿಗಳನ್ನು ನಿಗ್ರಹಿಸಲು ಬಿಜೆಪಿ ಸರಕಾರವು ಇದೇ ಮಾದರಿಯನ್ನು ಅನುಕರಿಸುತ್ತಾ ಬಂದಿರುವುದು ಬಹಿರಂಗ ವಾಸ್ತವವಾಗಿದೆ.

ಪ್ರಸಕ್ತ ದೇಶದಲ್ಲಿ ಸರ್ವಾಧಿಕಾರಿ ಸರಕಾರವು ಅಭಿವ್ಯಕ್ತಿ ಸ್ವಾತಂತ್ರ್ಯದ ಕತ್ತು ಹಿಸುಕುವ ಮೂಲಕ ಹೋರಾಟದ ಎಲ್ಲಾ ಧ್ವನಿಗಳನ್ನು ನಿಗ್ರಹಿಸಲು ಪ್ರಯತ್ನಿಸುತ್ತಿದೆ. ಫ್ಯಾಶಿಸ್ಟ್ ಶಕ್ತಿಗಳ ಇಂತಹ ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವದ ವಿರೋಧಿ ನಡೆಗಳನ್ನು ತಡೆಯಲು ಎಲ್ಲಾ ನಾಗರಿಕರು ಒಂದಾಗಿ ಹೋರಾಡಬೇಕೆಂದು ಎ.ಕೆ.ಅಶ್ರಫ್ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News