ಡಾ.ಕೆ.ಸುಧಾಕರ್ ಹೇಳಿಕೆಗೆ ವ್ಯಾಪಕ ಆಕ್ರೋಶ: ವಿವಾದದ ಬೆನ್ನಲ್ಲೆ ವಿಷಾದ ವ್ಯಕ್ತಪಡಿಸಿದ ಸಚಿವ

Update: 2021-03-24 12:12 GMT

ಬೆಂಗಳೂರು, ಮಾ. 24: ‘ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮುನಿಯಪ್ಪ ಸೇರಿದಂತೆ ರಾಜ್ಯದ 224 ಮಂದಿ ಶಾಸಕರ ವೈಯಕ್ತಿಕ ಜೀವನದ ಬಗ್ಗೆ ತನಿಖೆಯಾಗಲಿ. ಯಾರಿಗೆ ಅನೈತಿಕ-ವಿವಾಹೇತರ ಸಂಬಂಧವಿದೆ ಎಂಬುವುದು ಗೊತ್ತಾಗಲಿ' ಎಂಬ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಹೇಳಿಕೆಗೆ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸುಧಾಕರ್ ಹೇಳಿಕೆಗೆ ಮಹಿಳೆ ಮತ್ತು ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಆಕ್ಷೇಪಿಸಿದ್ದು, ‘ಸದನಕ್ಕೆ ಕೇವಲ ಪುರುಷ ಶಾಸಕರಷ್ಟೇ ಅಲ್ಲ, ಶಾಸಕಿಯರಾದ ನಾವೂ ಬರುತ್ತೇವೆ. ಹೀಗಿರುವಾಗ ಎಲ್ಲ ಶಾಸಕರ ಮೇಲೆ ಆರೋಪ ಮಾಡಿ ಸಚಿವ ಸುಧಾಕರ್ ಅವರು ಆ ರೀತಿ ಹೇಳಿಕೆ ನೀಡಿರುವುದು ತಪ್ಪು' ಎಂದು ಸುಧಾಕರ್ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವ ಸುಧಾಕರ್ ಅವರು, ತಮ್ಮ ಹೇಳಿಕೆ ರಾಜ್ಯದ 224 ಮಂದಿ ಶಾಸಕರು ಮತ್ತು ಮಹಿಳಾ ಶಾಸಕಿಯರಿಗೆ ಅವಮಾನ. ಹೀಗಾಗಿ ಕೂಡಲೇ 224 ಮಂದಿ ಶಾಸಕರು ಹಾಗೂ ರಾಜ್ಯದ ಜನತೆ ಬಹಿರಂಗ ಕ್ಷಮೆ ಕೋರಬೇಕು' ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಇಂದಿಲ್ಲಿ ಆಗ್ರಹಿಸಿದ್ದಾರೆ.

‘ಸಿಡಿ ಪ್ರಕರಣ' ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಉಸ್ತುವಾರಿಯಲ್ಲಿ ತನಿಖೆ ನಡೆಸಬೇಕು. ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬೇಕು. ಸಂತ್ರಸ್ತ ಯುವತಿಗೆ ಸೂಕ್ತ ರಕ್ಷಣೆ ನೀಡಬೇಕು. ಕೋರ್ಟ್ ಮೆಟ್ಟಿಲೇರಿದ ಆರು ಮಂದಿ ಸಚಿವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು' ಎಂದು ಆಗ್ರಹಿಸಿ ಪ್ರತಿಪಕ್ಷ ನಾಯಕ ಸದನದಲ್ಲಿ ಮೂರು ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದೆ.

ಬುಧವಾರ ಇಲ್ಲಿನ ಸದಾಶಿವನಗರದಲ್ಲಿನ ತನ್ನ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಡಾ.ಸುಧಾಕರ್, ‘ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಏಕಪತ್ನಿ ವ್ರತಸ್ಥರೇ? ಎಂದು ಇದೇ ವೇಳೆ ಖಾರವಾಗಿ ಪ್ರಶ್ನಿಸಿದರು.

‘ಕಾನೂನಿನ ಪ್ರಕಾರ ನಾವು ಕೋರ್ಟ್‍ನಿಂದ ರಕ್ಷಣೆ ಪಡೆದಿದ್ದೇವೆ. ಆರೋಪಗಳನ್ನ ಮಾಡುವ ನಾಯಕರು ಸಂವಿಧಾನಕ್ಕೆ ಗೌರವ ನೀಡಬೇಕು. ರಾಷ್ಟ್ರೀಯ ನಾಯಕರೂ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮರ್ಯಾದೆ ಪುರುಷರು, ಶ್ರೀರಾಮಚಂದ್ರ ಎಂದು ಭಾವಿಸಿದಂತಿದೆ. ನೀವು ನಿಮ್ಮ ಜೀವನದಲ್ಲಿ ಅನೈತಿಕ ಸಂಬಂಧ ಇಟ್ಟುಕೊಂಡಿಲ್ವಾ?' ಎಂದು ಸುಧಾಕರ್ ವಾಗ್ದಾಳಿ ನಡೆಸಿದರು.

‘ನೈತಿಕತೆ ಬಗ್ಗೆ ಬಹಳ ಮಾತನಾಡುವ ಎಲ್ಲ ದೊಡ್ಡ ನಾಯಕರು ಮಾದರಿಯಾಗಿದ್ದರೆ ತನಿಖೆಗೆ ಎಲ್ಲರೂ ಒಪ್ಪಿಕೊಳ್ಳಲಿ' ಎಂದು ಡಾ.ಕೆ.ಸುಧಾಕರ್ ಸವಾಲು ಹಾಕಿದರು. ಈ ಮಧ್ಯೆ ತಮ್ಮ ಹೇಳಿಕೆ ವಿವಾದಕ್ಕೆ ಗ್ರಾಸವಾಗುತ್ತಿದ್ದಂತೆ ಟ್ವೀಟ್ ಮಾಡಿದ ಸುಧಾಕರ್, ‘ನನ್ನ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳಬೇಕಾದ ಮಹಾನಾಯಕರುಗಳು ಅರ್ಥ ಮಾಡಿಕೊಂಡರೆ ಸಾಕು. ಇಡೀ ರಾಜ್ಯದ ಜನರನ್ನು ತಪ್ಪು ದಾರಿಗೆ ಎಳೆದು ರಾಜಕೀಯ ದ್ವೇಷ ಸಾಧಿಸಲು ಹೊರಟಿರುವ ಮಹಾನಾಯಕರ ಮುಖವಾಡ ಕಳಚುವ ಉದ್ದೇಶ ನನ್ನ ಹೇಳಿಕೆಯ ಹಿಂದೆ ಇತ್ತು ಅಷ್ಟೇ. ನಮ್ಮಗಳ ತೇಜೋವಧೆ ಮಾಡಲು ಹೊರಟವರ ಉದ್ದೇಶ ಈಡೇರಲ್ಲ' ತಿರುಗೇಟು ನೀಡಿದ್ದಾರೆ.

ಒಬ್ಬಳೆ ಪತ್ನಿ, ಒಂದೇ ಸಂಸಾರ: ‘ನನಗಿರೋದು ಒಬ್ಬಳೇ ಹೆಂಡತಿ, ಒಂದೇ ಸಂಸಾರ. ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿಕೆ ನೀಡುವ ಮೂಲಕ ನೈತಿಕ ದಿವಾಳಿತನದ ಪ್ರದರ್ಶನ. ಈ ವಿಚಾರ ಸಂಬಂಧ ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚಿಸುವ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಇನ್ನಿತರರ ಜೊತೆ ಚರ್ಚಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟಣೆ ನೀಡಿದರು.

ಇವರಿಗೆ ಕೆಲಸ ಇಲ್ವೆ: ‘ಸಚಿವ ಸುಧಾಕರ್ ಅವರಿಗೆ ಮಾಡೋಕೆ ಬೇರೆ ಏನೂ ಕೆಲಸ ಇಲ್ವಾ? ಓರ್ವ ಹೆಣ್ಣು ಮಗಳಿಗೆ ಅನ್ಯಾಯ ಆಗಿದೆ ಎಂದು ನಾವು ಸದನದಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಹೋರಾಟದ ಬಗ್ಗೆ ಸರಕಾರ ಅರ್ಥ ಮಾಡಿಕೊಳ್ಳಬೇಕು. ಸುಧಾಕರ್ ಹೇಳಿಕೆಯನ್ನು ನೋಡಿ ಜನರು ನಗುತ್ತಿದ್ದಾರೆ. ಶಾಸಕಿಯರಿಗೂ ಪತ್ನಿ ಇರುತ್ತಾರಂತಾ?' ಎಂದು ಶಾಸಕಿ ಸೌಮ್ಯ ರೆಡ್ಡಿ ಲೇವಡಿ ಮಾಡಿದರು.

ಎಲ್ಲರ ಮನೆ ದೋಸೆನೂ ತೂತು: ‘ಭೂಮಿ ಮೇಲೆ ಹುಟ್ಟಿರುವ ಹಾಗೂ ಜೀವ ಇರುವ ಪ್ರತಿಯೊಂದು ಜೀವಿಗೂ ಸಹಜ ಪ್ರಕ್ರಿಯೆಗಳು ಇರುತ್ತವೆ. ಇವನ್ನು ಅವರು ಅರ್ಥ ಮಾಡಿಕೊಳ್ಳಬೇಕು. ವಿನಾಕಾರಣ ನನ್ನ ಹೆಸರನ್ನು ಸುಧಾಕರ್ ಏಕೆ ಎಳೆದು ತರಬೇಕು? ಇಲ್ಲಿ ಎಲ್ಲರ ಮನೆ ದೋಸೆನೂ ತೂತು, ಯಾರೂ ಸತ್ಯಹರಿಶ್ಚಂದ್ರರಲ್ಲ' ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಡಿಸಿದರು.

‘ನಾನು ಈಗಾಗಲೇ ಸದನದ ಒಳಗೆ ಮಾಡಿರುವ ತಪ್ಪು ಒಪ್ಪಿಕೊಂಡಿರುವಾಗ ಮತ್ತೆ ನನ್ನ ಹೆಸರನ್ನು ಏಕೆ ಎಳೆದು ತರುತ್ತೀರಿ? ಇಂತಹ ವಿಚಾರಗಳನ್ನು ಚರ್ಚೆ ಮಾಡಿ ಯಾಕೆ ನಗೆಪಾಟಲಾಗುತ್ತೀರಾ? ನಿಮ್ಮ ಸಮಸ್ಯೆ ತಂದು ಬೇರೆಯವರ ಮೇಲೆ ಕೆಸರು ಎರಚುವುದನ್ನು ಬಿಟ್ಟು ಜನರ ಸಮಸ್ಯೆಗಳನ್ನು ಬಗೆಹರಿಸುವುದರ ಕಡೆ ಗಮನ ನೀಡಿ, ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಸಮಯ ವ್ಯರ್ಥ ಮಾಡಬೇಡಿ' ಎಂದು ಕುಮಾರಸ್ವಾಮಿ ಸಲಹೆ ಮಾಡಿದರು.

ವಿಷಾದ ವ್ಯಕ್ತಪಡಿಸಿದ ಸಚಿವ ಡಾ.ಕೆ.ಸುಧಾಕರ್
‘ಕೆಲ ನಾಯಕರ ಏಕಪಕ್ಷೀಯ, ಪೂರ್ವಗ್ರಹ ಪೀಡಿತ ಹೇಳಿಕೆಗಳಿಂದ ಬೇಸತ್ತು ಅವರ ನೈತಿಕತೆಯನ್ನು ಪ್ರಶ್ನಿಸಿ ಬೆಳಗ್ಗೆ ನಾನು ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಂಡಿದೆ. ಎಲ್ಲ ಶಾಸಕ ಮಿತ್ರರ ಬಗ್ಗೆ ನನಗೆ ಅಪಾರವಾದ ಗೌರವ ಇಟ್ಟುಕೊಂಡಿದ್ದೇನೆ. ಹೀಗಾಗಿ ಯಾರಿಗಾದರೂ ನನ್ನ ಹೇಳಿಕೆಯಿಂದ ನೋವಾಗಿದ್ದಲ್ಲಿ ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ. ನಮ್ಮ ಹದಿನೇಳು ಜನರ ವಿರುದ್ದ ತೇಜೋವಧೆ ಯತ್ನ ನಡೆಸಿದ್ದ ಕೆಲ ನಾಯಕರ ವಿರುದ್ಧ ಮಾತ್ರವೇ ನಾನು ಹೇಳಿಕೆ ನೀಡುವ ಯತ್ನ ಮಾಡಿದ್ದೇನೆಯೇ ಹೊರತು ಎಲ್ಲ ಶಾಸಕರಿಗೆ ನೋವು ಉಂಟು ಮಾಡುವ ಉದ್ದೇಶ ನನಗಿಲ್ಲ'
-ಡಾ.ಕೆ.ಸುಧಾಕರ್, ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News