×
Ad

ಸಿಡಿ ಚರ್ಚೆಗೆ ಕಾಂಗ್ರೆಸ್ ಸದಸ್ಯರ ಪಟ್ಟು: ಸದನ ಅನಿರ್ದಿಷ್ಟಾವಧಿ ಮುಂದೂಡಿದ ಸಭಾಪತಿ ಬಸವರಾಜ ಹೊರಟ್ಟಿ

Update: 2021-03-24 18:52 IST

ಬೆಂಗಳೂರು, ಮಾ.23: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಆರು ಸಚಿವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ಕೊಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಸದನವನ್ನು ಅನಿರ್ದಿಷ್ಟಾವಧಿ ಮುಂದೂಡಿದರು. 

ಬುಧವಾರ ವಿಧಾನಪರಿಷತ್‍ನ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ರಾಜ್ಯದಲ್ಲಿ ಸಿಡಿ ಪ್ರಕರಣವು ಚರ್ಚಾಸ್ಪದ ವಿಷಯವಾಗಿದ್ದು, ಜನತೆಗೆ ಸ್ಪಷ್ಟನೆ ಕೊಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಿಗದಿಪಡಿಸಿದ ಎಲ್ಲ ವಿಷಯಗಳನ್ನು ಬದಿಗಿಟ್ಟು ಸಿಡಿ ಕುರಿತ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ ಬಸವರಾಜ ಹೊರಟ್ಟಿ, ನೀವು ಹೇಳಿದ ತಕ್ಷಣ ಕೊಡುವುದಕ್ಕೆ ಬರುವುದಿಲ್ಲ. ಸದನವನ್ನು ನಿಯಮದ ಪ್ರಕಾರ ನಡೆಸಬೇಕಾಗುತ್ತದೆ ಎಂದರು. ಇದಕ್ಕೆ ಪೂರಕವಾಗಿ ಸಭಾನಾಯಕ ಶ್ರೀನಿವಾಸ ಪೂಜಾರಿ, ಸದನ ನಿಯಮದ ಪ್ರಕಾರ ನಡೆಯಲಿ ಎಂದು ತಿಳಿಸಿದರು.

ಈ ವೇಳೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಸಿಡಿ ಪ್ರಕರಣದ ಕುರಿತು ಚರ್ಚೆಗೆ ಅವಕಾಶ ಕೊಡಬೇಕೆಂದು ಪ್ರತಿಭಟನೆ ನಡೆಸಿದರು. ಇದರ ಮಧ್ಯೆ ಸಭಾಪತಿ ಬಸವರಾಜ ಹೊರಟ್ಟಿ, ವಿಧೇಯಕಗಳನ್ನು ಓದಿ ಅಂಗೀಕರಿಸಿದರು. ಇದರಿಂದ ಸಿಟ್ಟಿಗೆದ್ದ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ, ಸಿಡಿ ಕುರಿತು ಚರ್ಚೆಗೆ ಅವಕಾಶ ಕೊಡದಿದ್ದರಿಂದ ಸಭಾತ್ಯಾಗ ಮಾಡುತ್ತಿರುವುದಾಗಿ ಹೇಳಿ ಹೊರ ನಡೆದರು. ಸಭಾಪತಿ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.

ಮಧ್ಯಾಹ್ನದ ಕಲಾಪ ಆರಂಭವಾಗುತ್ತಿದ್ದಂತೆ, ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಸಿಡಿ ಕುರಿತ ಚರ್ಚೆಗೆ ಅವಕಾಶ ಕೊಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮುಂದುವರೆಸಿ, ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು. ಈ ವೇಳೆ ಆಡಳಿತ ಪಕ್ಷದ ಸದಸ್ಯರು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು. 

ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಸದಸ್ಯ ಸಿ.ಎಂ.ಇಬ್ರಾಹಿಂ ಮಾತನಾಡಿ, ರಾಜ್ಯ ಸರಕಾರ ಆರು ಸಚಿವರು ತಮಗೆ ಸಂಬಂಧಿಸಿದ ಯಾವುದೇ ರೀತಿಯ ಸಿಡಿ ಬಿಡುಗಡೆ ಮಾಡಬಾರದೆಂದು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ಆ ಸಿಡಿಯಲ್ಲಿ ನೋಡಬಾರದಂತಹದ್ದು ಏನಿದೆ ಎಂಬುದು ರಾಜ್ಯದ ಜನತೆಗೆ ಗೊತ್ತಾಗಬೇಕು. ಈ ಹಿನ್ನೆಲೆಯಲ್ಲಿ ಈ ಕುರಿತ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಪಟ್ಟು ಹಿಡಿದರು. ಈ ನಡುವೆ ಸಭಾನಾಯಕ ಕಾಗದ ಪತ್ರಗಳನ್ನು ಮಂಡಿಸಿದರು. ನಂತರ ಸಭಾಪತಿ ಕಾರ್ಯಕಲಾಪಗಳ ವಿವರಗಳನ್ನು ಸದನಕ್ಕೆ ಒಪ್ಪಿಸಿ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

ಸಚಿವರಿಗೆ ಸಂಬಂಧಿಸಿದ ಸಿಡಿ ಕುರಿತ ಚರ್ಚೆಗೆ ಅವಕಾಶ ಕೊಡಬೇಕೆಂದು ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಬಿಜೆಪಿಯ ಮಹಿಳಾ ಸದಸ್ಯೆಯರಾದ ಭಾರತಿ ಶೆಟ್ಟಿ ಹಾಗೂ ತೇಜಸ್ವಿನಿ ಗೌಡ, ಸಿಡಿ ಕುರಿತು ಚರ್ಚೆ ಮಾಡುವುದಾದರೆ ನಾವು ಸಭಾತ್ಯಾಗ ಮಾಡುತ್ತೇವೆಂದು ಸದನದಿಂದ ಹೊರ ನಡೆದರು.

ಈ ವೇಳೆ ತೇಜಸ್ವಿನಿ ಗೌಡ, ಕಾಂಗ್ರೆಸ್ ಸದಸ್ಯರು ಸಚಿವರಿಗೆ ಸಂಬಂಧಿಸಿದ ಸಿಡಿ ಕುರಿತು ಚರ್ಚೆ ಮಾಡುವುದಾದರೆ ತಮ್ಮ ಪತ್ನಿ ಹಾಗೂ ಮಕ್ಕಳನ್ನು ಸದನದ ಗ್ಯಾಲರಿಯಲ್ಲಿ ಕುಳಿತು ಚರ್ಚೆ ನಡೆಸಲಿ ಎಂದು ತಿಳಿಸಿ ಸಭಾತ್ಯಾಗ ಮಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News