ಬಿಜೆಪಿ ಆಡಳಿತದಲ್ಲಿ ರಾಜ್ಯ ದಿವಾಳಿಯಾಗುತ್ತಿದೆ: ಸಿದ್ದರಾಮಯ್ಯ
ಬೆಂಗಳೂರು, ಮಾ.24: ಬಜೆಟ್ ಮೇಲಿನ ನಮ್ಮ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ತರಾತುರಿಯಲ್ಲಿ 24 ಪುಟಗಳ ಉತ್ತರ ಓದಿರುವುದು ‘ಸಂತೆಯಲ್ಲಿ ಮಾನ ಉಳಿಸಿಕೊಳ್ಳಲು ಸೊಪ್ಪು-ಸದೆಗಳನ್ನು ಮೈಗೆ ಕಟ್ಟಿಕೊಂಡಂತೆ’ ಇದೆ. ನಮ್ಮ ಅನೇಕ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಉತ್ತರವನ್ನೇ ನೀಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದೂರಿದರು.
ಬುಧವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತಿದೆ ಎಂಬ ನಮ್ಮ ಆರೋಪಕ್ಕೆ ಮುಖ್ಯಮಂತ್ರಿ ಉತ್ತರಿಸಿಲ್ಲ. ರಾಜ್ಯದ ಬದ್ಧತಾ ವೆಚ್ಚ ಶೇ.102 ಆಗಿರುವುದನ್ನು ಮುಖ್ಯಮಂತ್ರಿಗಳೆ ಒಪ್ಪಿಕೊಂಡಿದ್ದಾರೆ. ಈ ವರ್ಷ 19,485 ಕೋಟಿ ರೂ.ರಾಜಸ್ವ ಕೊರತೆ ಇದೆ. ಕಳೆದ ಬಾರಿ ಬಜೆಟ್ ಮಂಡಿಸುವಾಗ 143 ಕೋಟಿ ರೂ.ರಾಜಸ್ವ ಹೆಚ್ಚುವರಿಯಾಗಿತ್ತು. ಈಗ ರಾಜಸ್ವ ಕೊರತೆಯ ಬಜೆಟ್ ಮಂಡಿಸಿದ್ದಾರೆ ಎಂದು ಟೀಕಿಸಿದರು.
2021-22ನೆ ಸಾಲಿನಲ್ಲಿ 15,133 ಕೋಟಿ ರೂ.ರಾಜಸ್ವ ಕೊರತೆ ಆಗಲಿದೆ ಎಂದು ಅಂದಾಜಿಸಲಾಗಿದೆ. ನನ್ನ ಪ್ರಕಾರ ಇದು 20 ಸಾವಿರ ಕೋಟಿ ರೂ.ಮೀರಲಿದೆ. 2022-23ಕ್ಕೆ 28,088 ಕೋಟಿ ರೂ., 2023-24ಕ್ಕೆ 47,062 ಕೋಟಿ ರೂ. ಹಾಗೂ 2024-25ಕ್ಕೆ 57,993 ಕೋಟಿ ರೂ.ರಾಜಸ್ವ ಕೊರತೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಅಂದರೆ ವರ್ಷದಿಂದ ವರ್ಷಕ್ಕೆ ರಾಜಸ್ವ ಕೊರತೆ ಏರಿಕೆಯಾಗುತ್ತಿದೆ. ಈ ಕೊರತೆಯ ಹಣವನ್ನು ಸಾಲ ಎತ್ತಿ ತುಂಬಿಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಈ ವರ್ಷ ಮಾಡಿರುವ 70 ಸಾವಿರ ಕೋಟಿ ರೂ.ಸಾಲದಲ್ಲಿ 20 ಸಾವಿರ ಕೋಟಿ ರೂ.ರಾಜಸ್ವ ಕೊರತೆಯನ್ನು ತುಂಬಿಸಿಕೊಳ್ಳಲು ಬಳಕೆ ಮಾಡಲಾಗುತ್ತಿದೆ. ಬದ್ಧತಾ ಖರ್ಚು ಹೀಗೆ ಏರುತ್ತಾ ಹೋದರೆ ರಾಜ್ಯ ದಿವಾಳಿಯಾಗಲಿದೆ ಎಂದು ನಾನು ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಹೇಳಿದ್ದೆ. ಇಂತಹಾ ಪರಿಸ್ಥಿತಿ ರಾಜ್ಯಕ್ಕೆ ಇದೇ ಮೊದಲು ಬಂದಿರುವುದು. ಇಂಥವರ ಕೈಲಿ ಸರಕಾರ ನಡೆಸಲು ಆಗುತ್ತಾ? ಎಂದು ಅವರು ಪ್ರಶ್ನಿಸಿದರು.
ನಮ್ಮ ಸರಕಾರ ಆಡಳಿತದಲ್ಲಿ ಇದ್ದಾಗ ಶೇ.74-78ರಷ್ಟು ಬದ್ಧತಾ ವೆಚ್ಚ ಇತ್ತು. ಈಗ ಶೇ.102ರಷ್ಟು ಆಗಿದೆ. ಬದ್ಧ ಖರ್ಚನ್ನು ಕಡಿಮೆ ಮಾಡುವ ಯೋಜನೆಗಳ ಬಗ್ಗೆ ಮುಖ್ಯಮಂತ್ರಿಯ ಭಾಷಣದಲ್ಲಿ ಯಾವ ಉಲ್ಲೇಖವೂ ಇಲ್ಲ. ಬದ್ಧ ವೆಚ್ಚ ಹೆಚ್ಚಾಗಲು ಅನ್ನಭಾಗ್ಯದ ಅಕ್ಕಿ ನೀಡಿರುವುದು, ರೈತರಿಗೆ ಸಬ್ಸಿಡಿಯಲ್ಲಿ ವಿದ್ಯುತ್, ಕ್ಷೀರಧಾರೆ ಯೋಜನೆಯಡಿ ಸಹಾಯಧನ ನೀಡುತ್ತಿರುವುದು ಕಾರಣ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಈ ಎಲ್ಲ ಯೋಜನೆಗಳು ನಮ್ಮ ಸರಕಾರದ ಅವಧಿಯಲ್ಲಿಯೂ ಇತ್ತು, ಆಗ ಆಗದ ಸಮಸ್ಯೆ ಈಗ ಉದ್ಭವಿಸಿದ್ದು ಹೇಗೆ? ಎಂದು ಸಿದ್ದರಾಮಯ್ಯ ಕೇಳಿದರು.
ಕೆಲವು ಹೊಸ ನಿಗಮಗಳನ್ನು ಸ್ಥಾಪನೆ ಮಾಡಿದ್ದು ಬಿಟ್ಟರೆ ಈ ಸರಕಾರ ಯಾವ ಹೊಸ ಕಾರ್ಯಕ್ರಮಗಳನ್ನೂ ಆರಂಭಿಸಿಲ್ಲ. ಬಹುತೇಕ ನಿಗಮಗಳಿಗೆ ಹಣವನ್ನೇ ನೀಡಿಲ್ಲ. ಒಟ್ಟಾರೆ ಯಡಿಯೂರಪ್ಪ ತಪ್ಪು ಮಾಹಿತಿ ನೀಡಿ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರಕಾರದಿಂದ ನಮಗೆ ತೆರಿಗೆ ಪಾಲು 28,591 ಕೋಟಿ ರೂ.ಬರಬೇಕಿತ್ತು, ಆದರೆ ಬಂದಿದ್ದು 20,053 ಕೋಟಿ ರೂ.ಮಾತ್ರ. ಸಹಾಯಧನ 15,538 ಕೋಟಿ ರೂ.ಬರಬೇಕಿತ್ತು, ಬಂದಿದ್ದು 14,140 ಕೋಟಿ ರೂ., 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ 5,495 ಕೋಟಿ ರೂ.ವಿಶೇಷ ಅನುದಾನ ಬಂದಿಲ್ಲ. ಜಿ.ಎಸ್.ಟಿ ಪರಿಹಾರಕ್ಕಾಗಿ ರಾಜ್ಯವೇ ಸಾಲ ಮಾಡಿದೆ. ಬಿಜೆಪಿಯ 25 ಸಂಸದರಿದ್ದಾರೆ, ಒಬ್ಬರೂ ಈ ಬಗ್ಗೆ ಮಾತನಾಡಲ್ಲ. ಯಾರಿಗೂ ರಾಜ್ಯದ ಹಿತ ಕಾಯುವ ಬದ್ಧತೆಯಿಲ್ಲದಾಗಿದೆ. ಯಾವ ಅಭಿವೃದ್ಧಿ ಕಾರ್ಯಗಳಿಗೆ ಹಣ ಕೇಳಿದರೂ ಸರಕಾರ ಕೊರೋನ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ರಾಜ್ಯದಿಂದ ಸಂಗ್ರಹವಾಗಿರುವ ಎಲ್ಲ ತೆರಿಗೆಗಳ ಒಟ್ಟು ಮೊತ್ತ ಸುಮಾರು 2.50 ಲಕ್ಷ ಕೋಟಿ ರೂ. ಇದರಲ್ಲಿ ನಮಗೆ ವಾಪಾಸು ಬಂದಿರುವುದು 34,198 ಕೋಟಿ ರೂ.ಮಾತ್ರ. ರಾಜ್ಯದಿಂದ ಬರೀ ಪೆಟ್ರೋಲಿಯಂ ಉತ್ಪನ್ನಗಳಿಂದಲೇ 30,000 ಕೋಟಿ ರೂ.ಗಳಿಗೂ ಅಧಿಕ ತೆರಿಗೆ ಕೇಂದ್ರ ಸರಕಾರಕ್ಕೆ ಸಂಗ್ರಹವಾಗುತ್ತಿದೆ. ಪೆಟ್ರೋಲ್, ಡಿಸೇಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿ ಅಂದರೆ ನರೇಂದ್ರ ಮೋದಿ ಸಿದ್ಧವಿಲ್ಲ. ಕೇಂದ್ರ ಸರಕಾರದಿಂದ ನಮ್ಮ ರಾಜ್ಯಕ್ಕೆ ಬಹುದೊಡ್ಡ ಅನ್ಯಾಯವಾಗಿದೆ ಎಂದು ಅವರು ದೂರಿದರು.
ಸಾಲ ಜಿ.ಎಸ್.ಡಿ.ಪಿಯ ಶೇ.25ಗಿಂತ ಕಡಿಮೆ ಇರಬೇಕಿತ್ತು, ಇದನ್ನು ಶೇ.2 ಹೆಚ್ಚಳ ಮಾಡಿಕೊಂಡಿದ್ದಾರೆ. ಈಗ ಜಿ.ಎಸ್.ಡಿ.ಪಿಯ ಶೇ.26.90ರಷ್ಟು ಸಾಲ ಮಾಡಿದ್ದಾರೆ. ಇದರಿಂದ ರಾಜ್ಯ ದಿವಾಳಿಯಾಗಲಿದೆ. ನಮ್ಮ ಆಡಳಿತಾವಧಿಯಲ್ಲಿ ಸಾಲದ ಹಣವನ್ನು ಸರಕಾರಿ ಆಸ್ತಿಗಳ ವೃದ್ಧಿಗೆ ಬಳಕೆ ಮಾಡುತ್ತಿದ್ದೆವು, ಬಿಜೆಪಿ ಸರಕಾರ ಸಾಲ ಮಾಡಿ ಸಂಬಳ ಕೊಡುವ ಸ್ಥಿತಿಗೆ ಬಂದು ನಿಂತಿದೆ. ಬದ್ಧತಾ ಖರ್ಚನ್ನು ಕಡಿಮೆ ಮಾಡಲು ಮುಖ್ಯಮಂತ್ರಿ ಸಮಗ್ರ ಯೋಜನೆಗಳನ್ನು ರೂಪಿಸಬೇಕಾದ ಅನಿವಾರ್ಯ ಸ್ಥಿತಿ ಇದೆ. ಜೂನ್ 2022 ರಿಂದ ಜಿ.ಎಸ್.ಟಿ ಪರಿಹಾರ ಬರುವುದು ನಿಂತು ಹೋಗಲಿದೆ, ಆಗ ಇನ್ನಷ್ಟು ಹೊರೆಯಾಗಲಿದೆ. ಇದಕ್ಕೆ ಯಡಿಯೂರಪ್ಪ ಬಳಿ ಪರಿಹಾರ ಇದೆಯೇ? ಎಂದು ಅವರು ಪ್ರಶ್ನಿಸಿದರು.
ದಿಲ್ಲಿಯಲ್ಲಿ ಬಿಜೆಪಿ ಸರಕಾರ, ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದರೆ ಡಬಲ್ ಇಂಜಿನ್ ಸರಕಾರವಾಗುತ್ತದೆ, ಕರ್ನಾಟಕ ಸ್ವರ್ಗವಾಗುತ್ತದೆ ಎಂದು ಜನರಿಗೆ ಸುಳ್ಳು ಭರವಸೆ ನೀಡಿದ್ದರು. ಈಗ ನೋಡಿದರೆ ಎರಡೂ ಇಂಜಿನ್‍ಗಳೂ ರಿವರ್ಸ್ ಹೋಗುತ್ತಿವೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ನಮ್ಮ ಸರಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ಜನರಿಗೆ 50 ಲಕ್ಷ ರೂ. ವರೆಗಿನ ಸರಕಾರಿ ಟೆಂಡರ್‍ಗಳಲ್ಲಿ ಮೀಸಲಾತಿ ನೀಡಿದ್ದೆವು. ಇಂದು ನಾವು ಸದನದಲ್ಲಿ ಧರಣಿ ಮಾಡುವ ವೇಳೆ ಸರಕಾರ ಪಾರದರ್ಶಕ ಕಾಯ್ದೆಗೆ ತಿದ್ದುಪಡಿ ತಂದು ಈ ವರ್ಗದ ಜನರಿಗೆ ಟೆಂಡರ್‍ಗಳಲ್ಲಿ ಇದ್ದ ಮೀಸಲಾತಿಯನ್ನು ತಪ್ಪಿಸುವ ಹುನ್ನಾರ ಮಾಡಿದೆ. ಇದರಿಂದ ಬಿಜೆಪಿ ಪಕ್ಷ ಮೀಸಲಾತಿ ವಿರೋಧಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.