ಶಾಸಕರ ನೈತಿಕತೆಯನ್ನು ಪ್ರಶ್ನಿಸಿದ ಡಾ.ಸುಧಾಕರ್: ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಆಗ್ರಹ

Update: 2021-03-24 15:13 GMT

ಬೆಂಗಳೂರು, ಮಾ.24: ಡಾ.ಸುಧಾಕರ್ ಸಾಮಾನ್ಯ ವ್ಯಕ್ತಿಯಲ್ಲ. ರಾಜ್ಯದ ಸಚಿವರಾಗಿರುವವರು. ಅವರ ಹೇಳಿಕೆ ಗಂಭೀರ ಸ್ವರೂಪದ್ದಾಗಿದೆ. ಎಲ್ಲ ಶಾಸಕರ ನೈತಿಕತೆಯನ್ನು ಪ್ರಶ್ನಿಸುವಂಥದ್ದಾಗಿದೆ. ಸದನ ನಡೆಯುತ್ತಿರುವಾಗ ಸಚಿವರು ಮಾಡಿರುವ ಈ ಹೇಳಿಕೆ ಸದನದ ನಿಂದನೆಯಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಆಯಾ ಶಾಸಕರ ಕುಟುಂಬದ ಸದಸ್ಯರಲ್ಲಿ ಅನುಮಾನ ಮೂಡಲು ಆಸ್ಪದ ಮಾಡಿಕೊಟ್ಟಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಸೇರಿದಂತೆ ಇನ್ನಿತರ ಕಾಂಗ್ರೆಸ್ ಶಾಸಕರು, ಸ್ಪೀಕರ್ ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ಸುಧಾಕರ್ ಹೇಳಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಈಗಾಗಲೆ ಕಾಂಗ್ರೆಸ್ ಪಕ್ಷ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಹಾಗೂ ಡಾ.ಸುಧಾಕರ್ ಸೇರಿದಂತೆ ಆರು ಮಂದಿ ಸಚಿವರು ಸುದ್ದಿ ಮಾಧ್ಯಮಗಳಲ್ಲಿ ತಮ್ಮ ಮಾನ ಹಾನಿ ಸುದ್ದಿ ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದನ್ನು ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್‍ಐಟಿ ತನಿಖೆಗೆ ಒತ್ತಾಯಿಸಿದೆ. ಸುಧಾಕರ್ ಹೆಸರಿಸಿರುವವರ ಪೈಕಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ರಮೇಶ್ ಕುಮಾರ್ ಆದ ನಾವು ಕೋರ್ಟ್ ಉಸ್ತುವಾರಿಯ ಎಸ್.ಐ.ಟಿ ತನಿಖೆಗೆ ಒಳಪಡಲು ಸಿದ್ಧರಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಇದರ ಜೊತೆಗೆ ಡಾ.ಸುಧಾಕರ್ ಹೇಳಿರುವಂತೆ 225 ಸದಸ್ಯರ ಪೈಕಿ ತಾವೂ ಕೂಡ ಒಬ್ಬರಾಗಿರುವುದರಿಂದ ಈ ತನಿಖೆಗೆ ಸಿದ್ಧರಿದ್ದೀರಾ ಎಂದು ತಿಳಿಯಲಿಚ್ಛಿಸುತ್ತೇವೆ. ಜೊತೆಗೆ ಸುಧಾಕರ್ ಅವರ ಹೇಳಿಕೆ ಕುರಿತು ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಗೆ ತಕ್ಷಣವೇ ಆದೇಶ ಹೊರಡಿಸಬೇಕು ಎಂದು ಸಿಎಂ ಹಾಗೂ ಸ್ಪೀಕರ್‍ಗೆ ಬರೆದ ಪತ್ರದಲ್ಲಿ ಶಾಸಕರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News