‘ಲಾಕ್‍ಡೌನ್' ಅನಿವಾರ್ಯ ಸ್ಥಿತಿ ನಿರ್ಮಿಸಬೇಡಿ: ಆರೋಗ್ಯ ಸಚಿವ ಡಾ.ಸುಧಾಕರ್

Update: 2021-03-24 15:32 GMT

ಬೆಂಗಳೂರು, ಮಾ. 24: ಕೋವಿಡ್-19 ಎರಡನೆ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ತಪ್ಪದೆ ಮಾರ್ಗಸೂಚಿ ಕ್ರಮಗಳನ್ನು ಪಾಲಿಸಬೇಕು. ಯಾವುದೇ ರೀತಿಯ ಲಾಕ್‍ಡೌನ್ ಮಾಡುವ ಉದ್ದೇಶ ಸರಕಾರಕ್ಕೆ ಇಲ್ಲ. ಆದರೆ, ಲಾಕ್‍ಡೌನ್ ಮಾಡುವಂತಹ ಅನಿವಾರ್ಯ ಸ್ಥಿತಿ ನಿರ್ಮಾಣ ಮಾಡಬಾರದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಬುಧವಾರ ಇಲ್ಲಿನ ಸದಾಶಿವನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೊರೋನ ಎರಡನೆ ಅಲೆ ಹಿನ್ನೆಲೆಯಲ್ಲಿ ಲಾಕ್‍ಡೌನ್ ಮಾಡಬೇಕೆಂಬ ಖುಷಿ ಸರಕಾರಕ್ಕೆ ಇಲ್ಲ. ದೇಶದ ಕೆಲವೆಡೆ ಭಾಗಶಃ ಲಾಕ್‍ಡೌನ್ ಮಾಡಲಾಗುತ್ತಿದೆ. ಧಾರ್ಮಿಕ, ರಾಜಕೀಯ ಕಾರ್ಯಕ್ರಮಗಳು ಸೇರಿದಂತೆ ಹೆಚ್ಚಿನ ಜನಸಂದಣಿ ಒಂದೆಡೆ ಸೇರಿದಂತೆ ಸೋಂಕು ಹಬ್ಬುವ ಸಾದ್ಯತೆಗಳಿವೆ. ಹೀಗಾಗಿ ಸರಕಾರದೊಂದಿಗೆ ಜನತೆ ಸಹಕಾರ ನೀಡಬೇಕು. ಕೋವಿಡ್-19 ಬಂದು ಒಂದು ವರ್ಷವಾಗಿದೆ. ಆದರೂ ನಿರ್ಲಕ್ಷಿಸದೆ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಳ್ಳುವ ಮೂಲಕ ಸೋಂಕು ಹಬ್ಬುವುದನ್ನು ತಡೆಗಟ್ಟಬೇಕು ಎಂದು ಕೋರಿದರು.

ಕೊರೋನ ಹೆಚ್ಚಾದರೆ ಲಾಕ್‍ಡೌನ್ ಮಾಡಬೇಕಾಗುತ್ತದೆ. ರಾಜ್ಯ ಸರಕಾರ ಆಗ ಅಸಹಾಯಕವಾಗಲಿದೆ. ಹೀಗಾಗಿ ಕೇಂದ್ರ ಸರಕಾರದ ಮಾರ್ಗಸೂಚಿಯನ್ನು ಯಥಾವತ್ ಜಾರಿಗೊಳಿಸಲಾಗಿದೆ. ಕಂಟೈನ್ಮೆಂಟ್ ಝೋನ್‍ಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತೀರ್ಮಾನ ಮಾಡಲಾಗುವುದು. ಜನತೆ ಕೊರೋನ ಮುನ್ನಚ್ಚರಿಕೆ ಪಾಲಿಸುವ ಮೂಲಕ ಸೋಂಕು ತಡೆಗಟ್ಟಬೇಕು ಎಂದು ಸುಧಾಕರ್ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News