ಪಾರದರ್ಶಕ ಕಾಯ್ದೆಗೆ ತಿದ್ದುಪಡಿ: ಎಸ್ಸಿ-ಎಸ್ಟಿ ಗುತ್ತಿಗೆದಾರರಿಂದ ಗೋವಿಂದ ಕಾರಜೋಳ ನಿವಾಸಕ್ಕೆ ಮುತ್ತಿಗೆ

Update: 2021-03-24 15:35 GMT

ಬೆಂಗಳೂರು, ಮಾ. 24: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಸರಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಕಲ್ಪಿಸಿರುವ ಮೀಸಲಾತಿ ಉದ್ದೇಶಕ್ಕೆ ಧಕ್ಕೆ ತರಲು ಕೆಆರ್‍ಐಡಿಎಲ್ ಸಂಸ್ಥೆಗೆ 2ಕೋಟಿ ರೂ. ವರೆಗಿನ ಕಾಮಗಾರಿಗಳನ್ನು ಟೆಂಡರ್ ಇಲ್ಲದೆ ನೇರವಾಗಿ ನೀಡಲು ತೀರ್ಮಾನಿಸಿರುವ ಸರಕಾರದ ಕ್ರಮ ಖಂಡಿಸಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ನಿವಾಸಕ್ಕೆ ರಾಜ್ಯ ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘದ ಕಾರ್ಯಕರ್ತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ಇಲ್ಲಿನ ಶಿವಾನಂದ ವೃತ್ತದ ಬಳಿಯಲ್ಲಿರುವ ಕಾರಜೋಳ ನಿವಾಸಕ್ಕೆ ಮುತ್ತಿಗೆ ಹಾಕಿದ ಎಸ್ಸಿ-ಎಸ್ಟಿ ಗುತ್ತಿಗೆದಾರರು, ಸರಕಾರದ ಹಣವನ್ನು ಲೂಟಿ ಮಾಡಲು ಮುಂದಾಗಿರುವ ಬಿಜೆಪಿ ಸರಕಾರದ ಧಿಕ್ಕಾರ, ಮೀಸಲಾತಿ ಆದೇಶವನ್ನು ರಕ್ಷಣೆ ಮಾಡದ ದಲಿತ ಸಮುದಾಯದ ಸಚಿವರ ವಿರುದ್ಧ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎನ್.ಮಹದೇವಸ್ವಾಮಿ, ಎಸ್ಸಿ-ಎಸ್ಟಿ ವರ್ಗಕ್ಕೆ ಸರಕಾರಿ ಕಾಮಗಾರಿಗಳಲ್ಲಿ 50 ಲಕ್ಷ ರೂ.ವರೆಗಿನ ಕಾಮಗಾರಿಗಳಲ್ಲಿ ಎಸ್ಸಿ-ಎಸ್ಟಿ ವರ್ಗಕ್ಕೆ ಮೀಸಲಾತಿ ಕಲ್ಪಿಸಲಾಗಿದೆ. 2018-19ನೆ ಸಾಲಿನ ಆಯವ್ಯಯದಲ್ಲಿ ಈ ಮಿತಿಯನ್ನು 50 ಲಕ್ಷ ರೂ.ನಿಂದ 1ಕೋಟಿ ರೂ.ಗಳಿಗೆ ಹೆಚ್ಚಿಸಬೇಕೆಂದು ಘೋಷಿಸಿ, ಅದನ್ನು ಇನ್ನೂ ಜಾರಿಗೊಳಿಸಿಲ್ಲ.
ಈ ಮಧ್ಯೆ ಕಾನೂನು, ಆರ್ಥಿಕ ಇಲಾಖೆ, ಅಡ್ವಕೇಟ್ ಅಭಿಪ್ರಾಯಕ್ಕೆ ವಿರುದ್ಧವಾಗಿ ಸರಕಾರ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತಕ್ಕೆ(ಕೆಆರ್‍ಐಡಿಎಲ್) 2 ಕೋಟಿ ರೂ. ಕಾಮಗಾರಿಗಳನ್ನು ನೀಡಲು ಅಧಿವೇಶನದಲ್ಲಿ ವಿಧೇಯಕ ಮಂಡಿಸಿ, ಪ್ರತಿಪಕ್ಷಗಳ ಗದ್ದಲದ ಮಧ್ಯೆ ಅನುಮೋದನೆ ಪಡೆದಿದ್ದಾರೆ ಎಂದು ಆರೋಪಿಸಿದರು.

ಕೆಆರ್‍ಐಡಿಎಲ್ ಸಂಸ್ಥೆ ಉಪಗುತ್ತಿಗೆ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸರಕಾರಕ್ಕೆ ತಿಳಿದಿದ್ದರೂ ಈ ರೀತಿ ತಿದ್ದುಪಡಿ ಮೂಲಕ ಎಸ್ಸಿ-ಎಸ್ಟಿ ವರ್ಗದ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಎಸ್ಸಿ-ಎಸ್ಟಿ ವರ್ಗದವರನ್ನು ಆರ್ಥಿಕವಾಗಿ ಸಬಲರಾಗುವುದನ್ನು ಸಹಿಸದೆ ಗುತ್ತಿಗೆ ಮೀಸಲಾತಿ ಆದೇಶವನ್ನು ದುರ್ಬಲಗೊಳಿಸುವುದರ ಹಿಂದೆ ಹುನ್ನಾರ ಅಡಗಿದೆ ಎಂದು ಮಹದೇವಸ್ವಾಮಿ ಟೀಕಿಸಿದರು.

ಈ ಕೂಡಲೇ ಪಾರದರ್ಶಕ ಕಾಯ್ದೆ ತಿದ್ದುಪಡಿ ಹಿಂಪಡೆಯಬೇಕು. ಎಸ್ಸಿ-ಎಸ್ಟಿಗಳಿಗೆ ಸರಕಾರಿ ಕಾಮಗಾರಿಗಳಲ್ಲಿ ಕಲ್ಪಿಸಿರುವ 50ಲಕ್ಷ ರೂ.ವರೆಗಿನ ಮಿತಿಯನ್ನು 1ಕೋಟಿ ರೂ.ಗಳಿಗೆ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದ ಮಹದೇವಸ್ವಾಮಿ, ನಮ್ಮ ಬೇಡಿಕೆಗಳು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ದಲಿತ ಸಂಘಟನೆಗಳೊಂದಿಗೆ ಸೇರಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು. ಆ ಬಳಿಕ ಸಂಘದ ನಿಯೋಗ ಗೋವಿಂದ ಕಾರಜೋಳಗೆ ಮನವಿ ಸಲ್ಲಿಸಿತು ಎಂದು ತಿಳಿಸಲಾಗಿದೆ.

ವಿಧೇಯಕಕ್ಕೆ ಅಸ್ತು:
‘ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ'ಕ್ಕೆ (ಕೆಆರ್‍ಐಡಿಎಲ್)2ಕೋಟಿ ರೂ.ಗಳಿಗೆ ಮೀರದಿರುವ ಎಲ್ಲ ವಿಧದ ನಿರ್ಮಾಣ ಕಾಮಗಾರಿಗಳಿಗೆ ನಿನಾಯಿತಿ ನೀಡಲು ಅವಕಾಶ ಕಲ್ಪಿಸವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ (ತಿದ್ದುಪಡಿ) ವಿಧೇಯಕ 2021ಕ್ಕೆ ವಿಧಾನಸಭೆ ಒಪ್ಪಿಗೆ ನೀಡಿದೆ'

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News