'ಯುವರತ್ನ' ತಂಡ, ಬಿಜೆಪಿ ಸಂಘಟಕರ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ವಿವರ ಕೇಳಿದ ಹೈಕೋರ್ಟ್
ಬೆಂಗಳೂರು, ಮಾ.24: ಎಪ್ರಿಲ್ 1ರಂದು ಬಿಡುಗಡೆ ಆಗುತ್ತಿರುವ ‘ಯುವರತ್ನ’ ಸಿನಿಮಾ ಪ್ರಚಾರಕ್ಕಾಗಿ ಯುವರತ್ನ ತಂಡ ಯುವ ಸಂಭ್ರಮ ಹೆಸರಿನಲ್ಲಿ ಮಾಸ್ಕ ಧರಿಸದೆ, ಸುರಕ್ಷಿತ ಅಂತರ ಕಾಯ್ದುಕೊಳ್ಳದೆ ಕೊರೋನ ನಿಯಮ ಉಲ್ಲಂಘನೆ ಮಾಡಿ ಸಂಚಾರ ಮಾಡುತ್ತಿರುವವರ ವಿರುದ್ಧವಾಗಿ ಕೈಗೊಂಡ ಕ್ರಮಗಳ ಕುರಿತು ವಿವರಣೆ ನೀಡಲು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ. ಬಿಜೆಪಿ ಕೂಡ ಸಮಾವೇಶ ನಡೆಸಿ ಕೊರೋನ ನಿಯಮ ಉಲ್ಲಂಘನೆ ಮಾಡಿದೆ. ಕೊರೋನ ನಿಯಮ ಉಲ್ಲಂಘನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ಸೂಚನೆ ನೀಡಿದೆ.
ಅರ್ಜಿದಾರರ ಪರ ವಾದಿಸಿದ ವಕೀಲ ಜಿ.ಆರ್.ಮೋಹನ್ ಅವರು, ಯುವರತ್ನ ತಂಡ ಯಾವುದೇ ಕೊರೋನ ನಿಯಮವನ್ನು ಪಾಲಿಸುತ್ತಿಲ್ಲ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ತಂಡವು ಪ್ರಚಾರಕ್ಕೆ ಹೋಗುತ್ತದೆ. ಆದರೆ, ತಂಡದವರು ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದಿಲ್ಲ. ಜನರಿಗೂ ಮಾಸ್ಕ್ ಧರಿಸಿ ಕಾರ್ಯಕ್ರಮಕ್ಕೆ ಬರಬೇಕೆಂದು ಹೇಳುವುದಿಲ್ಲ. ಇದರಿಂದ, ಕೊರೋನ ಹೆಚ್ಚಾಗುತ್ತಿದೆ ಎಂದು ಪೀಠಕ್ಕೆ ತಿಳಿಸಿದರು.
ಬಿಜೆಪಿ ಕೂಡ ರಾಯಚೂರು ಜಿಲ್ಲೆಯಲ್ಲಿ ಸಮಾವೇಶವನ್ನು ಹಮ್ಮಿಕೊಂಡು ಕೊರೋನ ನಿಯಮವನ್ನು ಉಲ್ಲಂಘನೆ ಮಾಡಿದ್ದು, ಇಲ್ಲಿಯೂ ಕೊರೋನ ಹೆಚ್ಚಾಗಿದೆ. ಇದರ ತಡೆಗೆ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ಬಿಜೆಪಿ ಸಮಾವೇಶದ ಸಂಘಟಕರು ಹಾಗೂ ಯುವರತ್ನ ತಂಡದ ವಿರುದ್ಧ ಕೈಗೊಂಡಿರುವ ಕ್ರಮದ ಕುರಿತು ವಿವರಣೆ ನೀಡಲು ಸರಕಾರಕ್ಕೆ ಸೂಚನೆ ನೀಡಿತು.
ಮಾಸ್ಕ್, ಸುರಕ್ಷಿತ ಅಂತರ ಪಾಲಿಸದವರಿಗೆ ನಗರ ಪಾಲಿಕೆ ವ್ಯಾಪ್ತಿಯಲ್ಲಿ 250 ರೂಪಾಯಿ ದಂಡ ಹಾಗೂ ಇತರೆ ಪ್ರದೇಶಗಳಲ್ಲಿ 100 ರೂಪಾಯಿ ದಂಡ ವಿಧಿಸಲಾಗುತ್ತಿದೆ. ಮಾರ್ಗಸೂಚಿ ಪಾಲಿಸದ ಪಾರ್ಟಿ ಹಾಲ್‍ಗಳಿಗೆ 5 ಸಾವಿರ ರೂಪಾಯಿ ದಂಡ, ಎಸಿ ಪಾರ್ಟಿಹಾಲ್, ಹೋಟೆಲ್‍ಗಳಿಗೆ 10,000 ರೂ. ದಂಡ, ಸಮಾವೇಶ ಮತ್ತು ಸಭೆಗಳ ಆಯೋಜಕರಿಗೆ 10,000 ರೂಪಾಯಿ ದಂಡ ವಿಧಿಸಲಾಗುತ್ತಿದೆ.