×
Ad

ಮಾ.26: ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ

Update: 2021-03-24 21:58 IST

ಶಿವಮೊಗ್ಗ: ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ನಡೆಯುತ್ತಿರುವ ಚಳವಳಿಯನ್ನು ತೀವ್ರಗೊಳಿಸಲು ರೈತ ಮುಖಂಡರು ನಿರ್ಧರಿಸಿದ್ದಾರೆ. ಚಳವಳಿಯ ಮುಂದುವರೆದ ಭಾಗವಾಗಿ  ಮಾ.26 ರಂದು ಭಾರತ್ ಬಂದ್‌ಗೆ ಕರೆ ನೀಡಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಬಂದ್ ಅಂಗವಾಗಿ  ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೆಳಿಗ್ಗೆ 11 ಗಂಟೆಗೆ ಕಾಯ್ದೆಗಳ ಪ್ರತಿಗಳನ್ನು ದಹಿಸುವ ಮೂಲಕ ಪ್ರತಿಭಟನಾ ಸಭೆ ನಡೆಸಲು ತೀರ್ಮಾನಿಸಿದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚಾದ ಪ್ರತಿಭಟನೆ ೪ ತಿಂಗಳನ್ನು ಪೂರೈಸಿದೆ.ಈ ಹಿನ್ನಲೆಯಲ್ಲಿ ಭಾರತ್ ಬಂದ್‌ಗೆ ಮಾ.೨೬ ರಂದು ಕರೆ ನೀಡಲಾಗಿದೆ. ಆದರೆ ಶಿವಮೊಗ್ಗದಲ್ಲಿ ಈಗಾಗಲೇ ನಮ್ಮ ಎಲ್ಲಾ ಪ್ರಗತಿಪರ  ಸಂಘಟನೆಗಳು ಒಟ್ಟಾಗಿ ಹಲವು ಕಾರ್ಯಕ್ರಮಗಳನ್ನು ನೀಡಿದ್ದೇವೆ. ಈ ಹಿನ್ನಲೆಯಲ್ಲಿ ಭಾರತ್ ಬಂದ್ ದಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಿ ಅಲ್ಲಿ ಕಾಯ್ದೆಗಳ ಪ್ರತಿಯನ್ನು ಸುಡಲಾಗುವುದು ಎಂದು ರೈತ ಮುಖಂಡ ಹೆಚ್.ಆರ್. ಬಸವರಾಜಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಏ.೨೬ ರಂದು ಬೆಂಗಳೂರಿನಲ್ಲಿ ರೈತ ಮಹಾ ಪಂಚಾಯತ್ ನಡೆಯಲಿದೆ. ಅದರ ಹಿನ್ನಲೆಯಲ್ಲಿ ಏ.೧ ರಂದು ರೈತ ಮುಖಂಡ ದರ್ಶನ್ ಪಾಲ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ. ಒಟ್ಟಾರೆ ಈ ಚಳುವಳಿ ಇಲ್ಲಿಗೆ ನಿಲ್ಲುವುದಿಲ್ಲ. ಮುಂದುವರೆಯುತ್ತದೆ ಸರ್ಕಾರ ಹಠಮಾರಿ ತನ ತೋರಿದಷ್ಟು ಚಳುವಳಿಯ ವ್ಯಾಪ್ತಿ ಇಡೀ ದೇಶವನ್ನೇ ಆಕ್ರಮಿಸಿಕೊಂಡು ಮೋದಿ ಸರ್ಕಾರವನ್ನು ಕಿತ್ತೊಗೆಯಲು ಸಹಾಯಕವಾಗುತ್ತದೆ. ಅವರ ಸಮಾಧಿಯನ್ನು ಅವರೇ ತೋಡಿಕೊಳ್ಳುತ್ತಾರೆ ಎಂದು ಟೀಕಿಸಿದರು.

ವಕೀಲ ಕೆ.ಪಿ.ಶ್ರೀಪಾಲ್ ಮಾತನಾಡಿ, ಶಿವಮೊಗ್ಗದಲ್ಲಿ ಮಾ.೨೦ ರಂದು ನಡೆದ ಮಹಾ ಪಂಚಾಯತ್ ಸಮಾವೇಶದಲ್ಲಿ ಭಾಷಣ ಮಾಡಿದ ರಾಕೇಶ್ ಟಿಕಾಯತ್ ಮೇಲೆ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂಬ ಹಿನ್ನಲೆಯಲ್ಲಿ ಸೆಕ್ಷನ್ ೧೫೩ ರ ಪ್ರಕಾರ ಕೇಸು ದಾಖಲಿಸಿಕೊಂಡಿರುವುದು ಸರಿಯಲ್ಲ. ಇದರಿಂದ ಚಳುವಳಿ ಮತ್ತಷ್ಟು ಗಟ್ಟಿಯಾಗುತ್ತದೆ. ಅವರು ಎಲ್ಲಿಯೂ ಪ್ರಚೋದನಕಾರಿ ಭಾಷಣ ಮಾಡಿಲ್ಲ. ಅವರು ಭಾಷಣ ಮಾಡಿದ ಮೇಲೂ ಯಾವ ಪರಿಣಾಮವು ಶಿವಮೊಗ್ಗದಲ್ಲಿ ಆಗಿಲ್ಲ. ರಾಜ್ಯ ಸರ್ಕಾರ ಇಂತಹ ದುರಾಲೋಚನೆಯನ್ನು ಕೈ ಬಿಡಬೇಕು. ಪೊಲೀಸರು ಸರ್ಕಾರದ ಕೈ ಗೊಂಬೆಗಳಂತೆ ವರ್ತಿಸಿರುವುದು ಇಲ್ಲಿ ಗೊತ್ತಾಗುತ್ತದೆ. ಇದೊಂದು ಅವಿವೇಕದ ತೀರ್ಮಾನವಾಗಿದೆ. ಗೃಹ ಮಂತ್ರಿಗಳಿಗೆ ಕನಿಷ್ಠ ಪ್ರಜ್ಞೆಯೂ ಇಲ್ಲ ಎಂದರು.

ಪೊಲೀಸರು ಸ್ವಯಂಪ್ರೇರಿತ ಕೇಸನ್ನು ದಾಖಲಿಸುವ ಮುನ್ನ ಯೋಚಿಸಬೇಕು ಶಿವಮೊಗ್ಗದಲ್ಲಿ ಸುಮೋಟೋ ಕೇಸ್ ದಾಖಲಿಸಲು ಬೇಕಾದಷ್ಟು ವಿಷಯಗಳಿವೆ. ಸೂಡಾ ನಿವೇಶನ ಹಗರಣವಿದೆ, ಹುಣಸೋಡು ಪ್ರಕರಣವಿದೆ, ಕ್ವಾರಿ ಮಾಲೀಕರ ಸಂಘದ ಅಧ್ಯಕ್ಷ ದತ್ತಾತ್ರಿಯ ವಿರುದ್ದವೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಬಹುದು. ರಾಜ್ಯ ಮಟ್ಟಕ್ಕೆ ಹೋದರೆ ಜಾರಕಿಹೊಳಿ ಸಿಡಿ ಕೇಸ್‌ನ್ನು ದಾಖಲಿಸಿಕೊಳ್ಳಬಹುದು ಆದರೆ ಇದನ್ನೆಲ್ಲಾ ಬಿಟ್ಟು ಅನ್ನ ಉಣ್ಣುವ ರೈತರ ಬಗ್ಗೆ ಮಾತನಾಡಿದ ಬೆಂಗಳೂರನ್ನೇ ದೆಹಲಿಯನ್ನಾಗಿ ಪರಿವರ್ತಿಸಿ ಎಂದು ಹೇಳಿದ ಹೋರಾಟಗಾರರ ಮಾತನ್ನು ಅದು ಹೇಗೆ ಈ ಪೊಲೀಸರು ಅರ್ಥಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಈ ಕೇಸಿಗೆ ಪ್ರತಿಸಲ ಟಿಕಾಯತ್ ಬಂದಾಗಲೂ ಕೂಡ ಮತ್ತೊಂದು ದೊಡ್ಡ ದೊಡ್ಡ ವಿಷಯವಾಗುತ್ತದೆ ಈ ಎಚ್ಚರಿಕೆಯಾದರೂ ಅವರಿಗೆ ಇರಬೇಕಿತ್ತು ಎಂದರು.

ಕೆ.ಎಲ್.ಅಶೋಕ್ ಮಾತನಾಡಿ, ಶಿವಮೊಗ್ಗದಲ್ಲಿ ಮಾ.೨೦ ರಂದು ನಡೆದ ಮಹಾ ಪಂಚಾಯತ್ ಸಮಾವೇಶ ಅತ್ಯಂತ ಯಶಸ್ವಿಯಾಗಿದೆ ಸ್ವಯಂ ಪ್ರೇರಿತರಾಗಿ ರೈತರು ಬಂದಿದ್ದರು. ಎಲ್ಲವೂ ಸುಲಲಿತವಾಗಿತ್ತು. ಯಾವುದೇ ಸಣ್ಣ ಗಲಾಟೆಯು ನಡೆಯಲಿಲ್ಲ. ಇದಕ್ಕೆ ಕಾರಣರಾದ ಎಲ್ಲರಿಗೂ ಅಭಿನಂದನೆಗಳು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಯಶವಂತ್‌ರಾವ್ ಗೋರ್ಪಡೆ, ಎನ್.ರಮೇಶ್, ಯೋಗೀಶ್, ರಾಘವೇಂದ್ರ, ವಿರೇಶ್, ಜಗದೀಶ್, ಶರಚ್ಚಂದ್ರ, ಅನನ್ಯ ಶಿವು, ಪಾಲಾಕ್ಷಿ, ಹಾಲೇಶಪ್ಪ, ಶಿ.ಜು.ಪಾಷ, ವಿಶ್ವನಾಥ್ ಕಾಶಿ ಸೇರಿದಂತೆ ಹಲವರಿದ್ದರು. 

"ರೈತ ಸಂಘಟನೆಗಳು ಅಥವಾ ಪ್ರಗತಿಪರ ಸಂಘಟನೆಗಳು ಒಂದು ಸಮಾವೇಶ ಸಭೆ ಮಾಡಬೇಕಾದರೆ ಈ ಪೊಲೀಸರು ಅದೆಷ್ಟು ಬಾರಿ ಓಡಾಡಿಸುತ್ತಾರೆ. ಒಂದು ಮೈಕ್ ಪಡೆಯಲು ಕೂಡ ಕಷ್ಟವಾಗುತ್ತದೆ. ಜಾಗವಂತೂ ಕೊಡುವುದೇ ಇಲ್ಲ ನಾವು ಸಭೆ ನಡೆಸಲು ನೆಹರೂ ಕ್ರೀಡಾಂಗಣದ ಮುಂಭಾಗದ ಖಾಲಿ ಜಾಗವನ್ನು ಕೇಳಿದ್ದೆವು. ಅದಕ್ಕೆ ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾತ್ರ ಎಂದು ಉತ್ತರ ಕೊಟ್ಟಿದ್ದರು. ಈಗ ಅಲ್ಲಿ ಸದ್ಯದರಲ್ಲಿಯೇ ಮೋದಿ ನೆನಪಿನ ಬಿಜೆಪಿಯ ಕಾರ್ಯಕ್ರಮವೊಂದು ನಡೆಯಲಿದೆ. ನೋಡೋಣ ಅಲ್ಲಿ ಯಾರು ಭರತನಾಟ್ಯ ಮಾಡುತ್ತಾರೆ ಯಾರು ಹಾಡು ಹೇಳುತ್ತಾರೆ ಅಂತಾ.."
-ಕೆ.ಪಿ ಶ್ರೀಪಾಲ್,ವಕೀಲರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News