ನಂಜನಗೂಡು ನಗರಸಭಾ ಅಧ್ಯಕ್ಷರ ನಡೆ ಖಂಡಿಸಿ ತಿರುಗಿ ಬಿದ್ದ ಸ್ವಪಕ್ಷದ ನಗರಸಭಾ ಉಪಾಧ್ಯಕ್ಷೆ

Update: 2021-03-24 17:46 GMT

ಮೈಸೂರು, ಮಾ.24: ನಂಜನಗೂಡು ನಗರಸಭೆಯಲ್ಲಿ ಬಿಜೆಪಿ ನಗರಸಭಾ ಅಧ್ಯಕ್ಷ ಮಹದೇವಸ್ವಾಮಿ ಅವರ ನಡೆ ಖಂಡಿಸಿ ಅವರ ವಿರುದ್ಧ ಸ್ವಪಕ್ಷದ ನಗರಸಭಾ ಉಪಾಧ್ಯಕ್ಷೆ ತಿರುಗಿ ಬಿದ್ದು ಬಜೆಟ್ ಮಂಡನೆ ಧಿಕ್ಕರಿಸಿ ಹೊರನಡೆದು ಪ್ರತಿಭಟಿಸಿದ ಘಟನೆ ನಡೆದಿದೆ.

ನಂಜನಗೂಡು ನಗರಸಭಾ 2021-22ನೇ ಸಾಲಿನ ಬಜೆಟ್ ಮಂಡನೆ ಬುಧವಾರಕ್ಕೆ ನಿಗದಿಯಾಗಿ ಬೆಳಗ್ಗೆ 10:30ಕ್ಕೆ ಬಜೆಟ್ ಸಭೆ ಆರಂಭವಾಯಿತು. ಸಭೆ ಆರಂಭವಾಗುತ್ತಿದ್ದಂತೆ ಬಿಜೆಪಿ ನಗರಸಭಾ ಉಪಾಧ್ಯಕ್ಷೆ ನಾಗಮಣಿ ಶಂಕರಪ್ಪ ನಗರಸಭಾ ಅಧ್ಯಕ್ಷ ಮಹದೇವಸ್ವಾಮಿ ಮತ್ತು ನಗರಸಭಾ ಪೌರಾಯುಕ್ತ ಕರಿಬಸವಯ್ಯ ನನ್ನನ್ನು ಕಡೆಗಣಿಸಿ ಏಕಪಕ್ಷೀಯ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಸ್ವತಃ ಅವರ ಪಕ್ಷದ ಅಧ್ಯಕ್ಷರ ವಿರುದ್ಧವೇ ಧಿಕ್ಕಾರ ಕೂಗಿ ಹೊರ ನಡೆದರು.

ನಗರಸಭಾ ಅಧ್ಯಕ್ಷರು ಮತ್ತು ಪೌರಾಯುಕ್ತರ ನಡವಳಿಕೆಯಿಂದ ಬೇಸತ್ತಿದ್ದ ಬಿಜೆಪಿಯ ಕೆಲವು ಸದಸ್ಯರು ಉಪಾಧ್ಯಕ್ಷರನ್ನು ಬೆಂಬಲಿಸಿ ಹೊರ ನಡೆದರು. ಜೊತೆಗೆ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಸದಸ್ಯರು ಸಹ ಉಪಾಧ್ಯಕ್ಷರ ನಡೆಗೆ ಬೆಂಬಲ ವ್ಯಕ್ತಪಡಿಸಿ ನಗರಭಾ ಕಾರ್ಯಾಲಯದ ಮುಂಭಾಗ ಪ್ರತಿಭಟನೆಗೆ ಇಳಿದರು.

ಇದೇ ವೇಳೆ ನಗರಸಭಾ ಉಪಾಧ್ಯಕ್ಷೆ ನಾಗಮಣಿ ಶಂಕರಪ್ಪ ಮಾತನಾಡಿ, ಉಪಾಧ್ಯಕ್ಷಳಾದ ನನ್ನ ಮಾತನ್ನು ಅಧಿಕಾರಿಗಳು ಕೇಳುತ್ತಿಲ್ಲ, ನಾನು ಅಧಿಕಾರ ಸ್ವೀಕರಿಸಿದ ದಿನದಿಂದಲೂ ಅಧ್ಯಕ್ಷರು ಮತ್ತು ಪೌರಾಯುಕ್ತರು ನನ್ನ ಜೊತೆ ಚರ್ಚಿಸದೇ ಅವರವರೇ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದಾರೆ. ಬಜೆಟ್ ಮಂಡನೆ ಸಂಬಂಧ ಸಹ ನನ್ನ ಸಲಹೆ ಸೂಚನೆ ಕೇಳಿಲ್ಲ, ಹೀಗಾದರೆ ನಾನು ಉಪಾಧ್ಯಕ್ಷರಾಗಿ ಏಕೆ ಮುಂದುವರಿಯಬೇಕು ಎಂದರು.

ಪ್ರತಿಭಟನೆಯಲ್ಲಿ ಬಿಜೆಪಿ ನಗರಸಭಾ ಸದಸ್ಯರಾದ ಮೀನಾಕ್ಷಿ ನಾಗರಾಜು, ಮಂಗಳಮ್ಮ, ಮಂಜುಳಾ, ಕಾಂಗ್ರೆಸ್ ನಗರಸಭಾ ಸದಸ್ಯರಾದ, ಎಸ್.ಪಿ.ಮಹೇಶ್, ಪ್ರದೀಪ್, ಗಂಗಾಧರ್, ಸ್ವಾಮಿ, ಸಿದ್ದಿಕ್, ಶ್ವೇತ ಲಕ್ಷ್ಮೀ, ಗಾಯಿತ್ರಿ, ಸೌಮ್ಯಾ ರಂಗಸ್ವಾಮಿ, ವಸಂತಮ್ಮ, ಜೆಡಿಎಸ್ ಸದಸ್ಯರಾದ ರೆಹಾನಾ ಭಾನು, ಖಾಲಿದ್ ಅಹ್ಮದ್, ಬಾಬು, ಯೋಗೇಶ್, ಬಾಬು, ಪಕ್ಷೇತರ ಸದಸ್ಯರಾದ ಎನ್.ಎಸ.ಯೋಗೀಶ್, ಭಾಗವಹಿಸಿದ್ದರು.

ಬಿಜೆಪಿ ಪಕ್ಷದವಳೇ ಆದ ನನ್ನನ್ನು ಅಧ್ಯಕ್ಷ ಮಹದೇವಸ್ವಾಮಿ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ, ನಾನು ಹೇಳಿದ ಯಾವುದೇ ಕೆಲಸಗಳನ್ನು ಮಾಡಿಕೊಡುತ್ತಿಲ್ಲ. ಇಷ್ಟು ದಿನಗಳಾದರೂ ನನ್ನ ಜೊತೆ ಚರ್ಚಿಸಿ ತೀರ್ಮಾನಗಳನ್ನು ಕೈಗೊಳ್ಳದೆ. ಅಧ್ಯಕ್ಷರು ಮತ್ತು ಪೌರಾಯುಕ್ತರು ತಮಗಿಷ್ಟ ಬಂದ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ.
-ನಾಗಮಣಿ ಶಂಕರಪ್ಪ, ನಗರಸಭಾ ಉಪಾಧ್ಯಕ್ಷೆ


ನಗರಸಭಾ ಒಳಗೆ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ, ನಗರಸಭಾ ಅಧ್ಯಕ್ಷರು ನಿಗದಿಯಂತೆ ಸಾಮಾನ್ಯ ಸಭೆ ಕರೆಯದೇ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ಸಾರ್ವಜನಿಕರ ಕೆಲಸ ಕಾರ್ಯಗಳ ಬಗ್ಗೆ ಹಲವು ಸಭೆಗಳಲ್ಲಿ ಅಧ್ಯಕ್ಷರ ಗಮನಕ್ಕೆ ತಂದಿದ್ದರೂ ಬೇಜವಾಬ್ದಾರಿ ತೋರುತ್ತಿದ್ದಾರೆ. ಸದಸ್ಯರ ಯಾವ ಕೆಲಸವನ್ನು ಮಾಡದೆ ಅನ್ಯಾಯ ಎಸಗುತ್ತಿದ್ದಾರೆ.
-ಎಸ್.ಪಿ.ಮಹೇಶ್, ನಗರಸಭಾ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News