ಬೆಳಗಾವಿ ಲೋಕಸಭೆ ಉಪಚುನಾವಣೆ ಸ್ಪರ್ಧೆಗೆ ಮಾನಸಿಕವಾಗಿ ಸಿದ್ಧಳಾಗಿದ್ದೇನೆ: ಶ್ರದ್ಧಾ ಅಂಗಡಿ
ಬೆಳಗಾವಿ, ಮಾ.24: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನಮ್ಮ ಕುಟುಂಬಕ್ಕೆ ಟಿಕೆಟ್ ನೀಡಬೇಕು ಎಂಬ ಒತ್ತಡವಿದೆ. ಹೈಕಮಾಂಡ್ ಅವಕಾಶ ನೀಡಿದರೆ ಸ್ಪರ್ಧೆಗೆ ಸಿದ್ಧಳಿದ್ದೇನೆಂದು ಮಾಜಿ ಕೇಂದ್ರ ಸಚಿವ ಸುರೇಶ್ ಅಂಗಡಿ ಪುತ್ರಿ ಶ್ರದ್ಧಾ ಅಂಗಡಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಬಿಜೆಪಿ ಪಕ್ಷದಿಂದ ಇತರೆ ಅಭ್ಯರ್ಥಿಗಳ ಹೆಸರುಗಳು ಪ್ರಸ್ತಾಪವಾಗಿವೆ. ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಇನ್ನೆರಡು ದಿನಗಳಲ್ಲಿ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.
ಪಕ್ಷದಿಂದ ನನಗೆ ಟಿಕೆಟ್ ನೀಡಿದರೆ ಸ್ಪರ್ಧಿಸಲು ಮಾನಸಿಕವಾಗಿ ಸಿದ್ಧಳಿದ್ದೇನೆ. ಪಕ್ಷ ಯಾವುದೇ ನಿರ್ಧಾರ ಕೈಗೊಂಡರು ಅದಕ್ಕೆ ಬದ್ಧವಾಗಿದ್ದೇನೆ. ನನ್ನ ತಂದೆ ಸುರೇಶ್ ಅಂಗಡಿ ಜನರೊಂದಿಗೆ ಒಳ್ಳೆಯ ಸಂಪರ್ಕ ಇಟ್ಟುಕೊಂಡಿದ್ದರು. ಈಗ ಅವರು ನಮ್ಮೊಂದಿಗಿಲ್ಲದಿದ್ದರೂ ಜನರು ನಮ್ಮನ್ನು ಕಾರ್ಯಕ್ರಮಗಳಿಗೆ ಕರೆಯುತ್ತಿದ್ದಾರೆ. ಗೌರವ ಕೊಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸುರೇಶ್ ಅಂಗಡಿ ಕುಟಂಬಸ್ಥರಿಂದಲೇ ಬೆಳಗಾವಿ ಲೋಕಸಭೆ ಉಪ ಚುನಾವಣೆಗೆ ಸ್ಪರ್ಧಿಸಬೇಕೆಂಬ ಒತ್ತಡ ನಮ್ಮ ಅಭಿಮಾನಿಗಳಿಂದಲು ಕೇಳಿ ಬರುತ್ತಿದೆ. ಈ ಸಂಬಂಧ ನಾನು ದೆಹಲಿಗೆ ಹೋಗಿಲ್ಲ. ಟಿಕೆಟ್ ವಿಚಾರದಲ್ಲಿ ವರಿಷ್ಠರು ಕರೆ ಮಾಡಿ ಮಾತಾಡಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.