ಸಚಿವ ಸುಧಾಕರ್ ಉದ್ಧಟತನದ ಹೇಳಿಕೆ ನೀಡಿದ್ದಾರೆ: ಸಿದ್ದರಾಮಯ್ಯ

Update: 2021-03-24 17:54 GMT

ಬೆಂಗಳೂರು, ಮಾ.24: ಸಚಿವ ಸುಧಾಕರ್ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಅವರ ಮಾತಿನ ಪ್ರಕಾರ ವಿಧಾನಸಭಾ ಸ್ಪೀಕರ್, ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ರಾಜ್ಯದ 225 ಶಾಸಕರೂ ಸತ್ಯವಂತರಲ್ಲ. ಒಬ್ಬ ಸಚಿವರಾಗಿ ಈ ರೀತಿ ಹೇಳಿರುವುದು ಅವರ ಬೇಜಾವಾಬ್ದಾರಿಯನ್ನು ತೋರಿಸುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಗಾರಿದರು.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಧಿವೇಶನ ನಡೆಯುತ್ತಿರುವ ಸಮಯದಲ್ಲೆ ಸಚಿವ ಸುಧಾಕರ್ ಈ ರೀತಿ ಹೇಳಿರುವುದು ಸದನದ ಹಕ್ಕುಚ್ಯುತಿಯಾಗಿದೆ. ಸುಧಾಕರ್ ತಮ್ಮ ಪಾಪಪ್ರಜ್ಞೆಯಿಂದ ಈ ರೀತಿ ಮಾತನಾಡಿರುವುದು ಸ್ಪಷ್ಟವಾಗುತ್ತಿದೆ ಎಂದರು. 

ಸಾಕಷ್ಟು ಜನ ಮಹಿಳಾ ಶಾಸಕಿಯರಿದ್ದಾರೆ, ಹಿರಿಯ ಶಾಸಕರಿದ್ದಾರೆ. ಸಚಿವರ ಹೇಳಿಕೆಯಿಂದ ಜನರು ಜನಪ್ರತಿನಿಧಿಗಳನ್ನು ನೋಡುವ ರೀತಿಯೇ ಬದಲಾಗುತ್ತದೆ. ಸುಧಾಕರ್ ಬಗ್ಗೆಯೂ ಸಿಡಿ ಇರಬೇಕು ಅದಕ್ಕೆ ಆತ ವಿಲವಿಲ ಅಂತ ಒದ್ದಾಡುತ್ತಿದ್ದಾನೆ. ಅವರ ಹೇಳಿಕೆಯಿಂದ ರಾಜ್ಯದ ಎಲ್ಲ ಶಾಸಕರು ತಲೆ ತಗ್ಗಿಸುವಂತಾಗಿದೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಅವರು ಹೇಳಿದರು.

ಸುಧಾಕರ್ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಾಗೂ ಸ್ಪೀಕರ್‍ಗೆ ಪತ್ರ ಬರೆದಿದ್ದೇವೆ. ಅಲ್ಲದೆ, ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ, ಅಗತ್ಯವಿದ್ದಲ್ಲಿ ಕಾನೂನು ಹೋರಾಟ ಕೈಗೊಳ್ಳಲು ಮುಂದಾಗುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಎಚ್.ಕೆ.ಪಾಟೀಲ್, ವಿರೋಧ ಪಕ್ಷದ ಮುಖ್ಯಸಚೇತಕರಾದ ಡಾ.ಅಜಯ್ ಸಿಂಗ್, ಎಂ.ನಾರಾಯಣಸ್ವಾಮಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಾರ್ಯದರ್ಶಿ ಈ.ತುಕಾರಾಮ್, ಶಾಸಕ ಎಚ್.ಪಿ.ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಬೆಳಗಾವಿಗೆ ಸತೀಶ್ ಜಾರಕಿಹೊಳಿ ಅಭ್ಯರ್ಥಿ
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಸತೀಶ್ ಜಾರಕಿಹೊಳಿಯನ್ನು ಆಯ್ಕೆ ಮಾಡಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News