ಬೆಂಗಳೂರು: ಕೋವಿಡ್ ಎರಡನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ಹೊಸ ಮಾರ್ಗಸೂಚಿ ಪ್ರಕಟ
ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕೋವಿಡ್ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ರಾಜ್ಯದಲ್ಲಿ ಕೊರೋನ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆ ಹಿನ್ನೆಲೆಯಲ್ಲಿ ಎರಡನೇ ಅಲೆ ಅಪಾಯ ನಿಯಂತ್ರಿಸಲು ಸರ್ಕಾರ ಮಾರ್ಗಸೂಚಿ ಜಾರಿಗೊಳಿಸಿ ಸುತ್ತೋಲೆ ಹೊರಡಿಸಿದ್ದು, ಆರ್‌ಟಿಪಿಸಿಆರ್ ಪರೀಕ್ಷೆ ಹೆಚ್ಚಿಸುವುದರ ಜತೆಗೆ ಸಭೆ, ಸಮಾರಂಭಗಳಲ್ಲಿ ನಿರ್ದಿಷ್ಟ ಜನ ಭಾಗವಹಿಸಲು ನಿಯಮ ರೂಪಿಸಿದೆ.
ತೆರೆದ ಪ್ರದೇಶದಲ್ಲಿ ನಡೆಯುವ ಮದುವೆ ಕಾರ್ಯಕ್ರಮದಲ್ಲಿ 500 ಜನ ಹಾಗೂ ಸಭಾಂಗಣ, ಮಂಟಪಗಳಲ್ಲಿ ನಡೆಯುವ ಮದುವೆಯಲ್ಲಿ 200 ಜನರಿಗೆ ಮಾತ್ರ ಅವಕಾಶ ಕಲ್ಪಿಸಿದೆ. ಅದೇ ರೀತಿ ಹುಟ್ಟುಹಬ್ಬ ಆಚರಣೆಗೆಯಲ್ಲೂ ತೆರೆದ ಪ್ರದೇಶದಲ್ಲಿ 100 ಜನರಿಗೆ, ಪಾರ್ಟಿ ಹಾಲ್‌ಗಳಲ್ಲಿ ಆಚರಿಸಿದರೆ 50 ಜನರು ಮಾತ್ರ ಪಾಲ್ಗೊಳ್ಳಲು ಅನುಮತಿ ನೀಡಿದೆ.
ಇದಲ್ಲದೆ, ಮೃತರ ದರ್ಶನಕ್ಕೆ ತೆರೆದ ಪ್ರದೇಶದಲ್ಲಿ 100 ಹಾಗೂ ಇಕ್ಕಟ್ಟು ಸ್ಥಳದಲ್ಲಿ 50 ಮಂದಿ ಮೀರಬಾರದು ಎಂದು ಹೇಳಿದ್ದು, ಅಂತ್ಯಕ್ರಿಯೆಯಲ್ಲಿ 50 ಜನ ಮಾತ್ರ ಭಾಗಿಯಾಗಲು ಅವಕಾಶ ನೀಡಿದೆ. ಉಳಿದಂತೆ ತೆರೆದ ಪ್ರದೇಶಗಳಲ್ಲಿ ನಡೆಯುವ ಧಾರ್ಮಿಕ ಆಚರಣೆಗಳು ಹಾಗೂ ರಾಜಕೀಯ ಸಭೆ ಸಮಾರಂಭಗಳಲ್ಲಿ 500 ಜನರು ಮಾತ್ರವೇ ಸೇರಲು ಅವಕಾಶ ನೀಡಿದೆ. ಸಭಾಂಗಣಗಳಲ್ಲಿ ನಡೆಯಲಿರುವ ಇತರೆ ಸಮಾರಂಭಗಳಲ್ಲಿ ಹಾಲ್‌ನ ವಿಸ್ತೀರ್ಣಕ್ಕೆ ಅನುಗುಣವಾಗಿ 100 ಜನ ಮೀರದಂತೆ ಸೇರಲು ಅವಕಾಶ ಮಾಡಿಕೊಟ್ಟಿದೆ.
ತಾಂತ್ರಿಕ ಸಲಹಾ ಸಮಿತಿ ಸೂಚನೆ
ನೆರೆ ರಾಜ್ಯಗಳಾದ ಕೇರಳ ಹಾಗೂ ಮಹಾರಾಷ್ಟ್ರಗಳಲ್ಲಿ ಸೋಂಕು ಪ್ರಕರಣ ಹೆಚ್ಚಳ ಹಾಗೂ ರಾಜ್ಯದಲ್ಲಿ ಸೋಂಕು ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸೂಚನೆ ಮೇರೆಗೆ ಕೋವಿಡ್ ಮಾರ್ಗಸೂಚಿ ಪರಿಷ್ಕೃತಗೊಳಿಸಿ ಸರ್ಕಾರ ಈ ಸುತ್ತೋಲೆ ಹೊರಡಿಸಿದೆ. ಇದರನ್ವಯ ರಾಜ್ಯಾದ್ಯಂತ ಪ್ರತಿ ದಿನ ನಡೆಸುತ್ತಿರುವ ಆರ್‌ಟಿಪಿಸಿಆರ್ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲಾಗಿದೆ.
ಬೆಂಗಳೂರು ನಗರ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿನಿದ್ಯ 40 ಸಾವಿರ, ಮೈಸೂರಿನಲ್ಲಿ 5 ಸಾವಿರ, ತುಮಕೂರು 3,500, ಬೆಳಗಾವಿ ಮತ್ತು ದಕ್ಷಿಣ ಕನ್ನಡ ತಲಾ 3 ಸಾವಿರ, ಉಡುಪಿ ಮತ್ತು ವಿಜಯಪುರ ತಲಾ 2 ಸಾವಿರ, ಕೊಡಗು ಜಿಲ್ಲೆಯಲ್ಲಿ ಒಂದು ಸಾವಿರ ಕೋವಿಡ್ ಪರೀಕ್ಷೆ ನಡೆಸಲು ಗುರಿ ನೀಡಲಾಗಿದೆ. ಉಳಿದ ಜಿಲ್ಲೆಗಳಲ್ಲೂ ರ‌್ಯಾಪಿಡ್ ಆಂಟಿಜೆನ ಪರೀಕ್ಷೆ ಕಡಿಮೆಗೊಳಿಸಿ, ಈಗಾಗಲೇ ನೀಡಿರುವ ಗುರಿಯಂತೆ ಪೂರ್ಣ ಪ್ರಮಾಣದಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಮಾಸ್ಕ್ ಧರಿಸುವುದು, ಸುರಕ್ಷಿತ ಅಂತರ ಪಾಲನೆ ಕಡ್ಡಾಯಗೊಳಿಸಲಾಗಿದ್ದು, ಕೋವಿಡ್ ಲಸಿಕೆ ಪಡೆದುಕೊಳ್ಳುವುದು ಹಾಗೂ ಸೋಂಕು ಲಕ್ಷಣಗಳಲ್ಲಿದ್ದವರು ಪರೀಕ್ಷೆಗೆ ಒಳಪಡುವುದರ ಕುರಿತು ಮಾಧ್ಯಮ (ಮುದ್ರಣ, ವಿದ್ಯುನ್ಮಾನ, ಸಾಮಾಜಿಕ ಮಾಧ್ಯಮ ಇತ್ಯಾದಿ)ಗಳ ಮೂಲಕ ಆರೋಗ್ಯ ಶಿಕ್ಷಣ ನೀಡಿ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ತಿಳಿಸಿದೆ.
ರಾಜ್ಯದಲ್ಲಿ ಕೊರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳ ಸಮರ್ಪಕ ಅನುಷ್ಠಾನಕ್ಕಾಗಿ ನೂತನ ನಿಯಮಗಳನ್ನು ಜಾರಿಗೊಳಿಸಲಾಗಿದೆ.
— Dr Sudhakar K (@mla_sudhakar) March 25, 2021
ಮಾಸ್ಕ್ ಧರಿಸದಿದ್ದರೆ ಬಿಬಿಎಂಪಿ ಮತ್ತು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ₹250 ಹಾಗೂ ಇತರೆ ಪ್ರದೇಶಗಳಲ್ಲಿ ₹100 ದಂಡ ವಿಧಿಸಲಾಗುವುದು.
1/2@DHFWKA pic.twitter.com/spxpLH4wt2
ಸಭೆ-ಸಮಾರಂಭಗಳಲ್ಲಿ, ಅಂಗಡಿ ಮುಂಗಟ್ಟುಗಳಲ್ಲಿ, ಮಾಲ್, ಹೋಟೆಲುಗಳಲ್ಲಿ ನಿಯಮಿತ ಜನಸಂದಣಿ, ಸಾಮಾಜಿಕ ಅಂತರ ನಿಯಮಗಳು ಉಲ್ಲಂಘನೆಯಾದಲ್ಲಿ ಹವಾ ನಿಯಂತ್ರಿತವಲ್ಲದ ಸಭಾಂಗಣ/ಸ್ಥಳಗಳ ಮಾಲೀಕರಿಗೆ ₹5,000 ಮತ್ತು ಹವಾನಿಯಂತ್ರಿತ ಸಭಾಂಗಣ, ಸ್ಟಾರ್ ಹೋಟೆಲ್ ಹಾಗೂ ಸಾರ್ವಜನಿಕ ಸಭೆಗಳ ಆಯೋಜಕರಿಗೆ ₹10,000 ದಂಡ ವಿಧಿಸಲಾಗುವುದು.
— Dr Sudhakar K (@mla_sudhakar) March 25, 2021
2/2@DHFWKA pic.twitter.com/ySXIAGNVDX