ಹೊರರಾಜ್ಯದಿಂದ ಬೆಂಗಳೂರಿಗೆ ಬರುವವರಿಗೆ ಕೋವಿಡ್ ಪರೀಕ್ಷಾ ಪ್ರಮಾಣಪತ್ರ ಕಡ್ಡಾಯ: ಸಚಿವ ಡಾ.ಸುಧಾಕರ್
ಬೆಂಗಳೂರು, ಮಾ.25: ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹೊರ ರಾಜ್ಯದಿಂದ ಬೆಂಗಳೂರು ನಗರಕ್ಕೆ ಬರುವವರು ಕಡ್ಡಾಯವಾಗಿ ಕೋವಿಡ್ ಪರೀಕ್ಷಾ ಪ್ರಮಾಣ ಪತ್ರವನ್ನು ಹೊಂದಿರಬೇಕೆಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಗುರುವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಬಿಬಿಎಂಪಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ 1,400 ಸೋಂಕಿತರ ಪತ್ತೆಯಾಗಿದ್ದಾರೆ. ಕಳೆದ 4 ತಿಂಗಳಲ್ಲಿ ನಿನ್ನೆ(ಬುಧವಾರ) ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮ ಅನಿವಾರ್ಯವೆಂದು ತಿಳಿಸಿದ್ದಾರೆ.
ಸೋಂಕಿತರ ಕೈ ಮೇಲೆ ಸೀಲ್: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಾಳೆಯಿಂದಲೇ ಸೋಂಕಿತರ ಕೈ ಮೇಲೆ ಸೀಲ್ ಹಾಲುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಮುಖ್ಯವಾಗಿ ರಾಜಧಾನಿ ಬೆಂಗಳೂರಿನಲ್ಲಿರುವ ಸೋಂಕಿತರಿಗೆ ಮಾತ್ರ ಸೀಲ್ ಹಾಕಲಾಗುವುದೆಂದು ಅವರು ಹೇಳಿದ್ದಾರೆ.
ಆರೋಗ್ಯಾಧಿಕಾರಿಗಳ ಮಾಹಿತಿಯ ಪ್ರಕಾರ ಶೇ.60ರಷ್ಟು ಹೊರ ರಾಜ್ಯದಿಂದ ಬೆಂಗಳೂರಿಗೆ ಬರುವವರಲ್ಲಿಯೇ ಹೆಚ್ಚಿನ ಸೋಂಕು ಕಾಣಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಹೊರ ರಾಜ್ಯದಿಂದ ಬೆಂಗಳೂರಿಗೆ ಬರುವವರಿಗೆ ಕಡ್ಡಾಯವಾಗಿ ಆರ್‍ಟಿಪಿಸಿಆರ್ ಪರೀಕ್ಷೆ ಕಡ್ಡಾಯ. ಕೇವಲ ಬೆಂಗಳೂರಿಗೆ ಮಾತ್ರ ಈ ನಿಯಮ ಜಾರಿಯಲ್ಲಿರುತ್ತದೆ ಎಂದು ಅವರು ವಿವರಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ಪ್ರತಿಯೊಂದು ವಾರ್ಡ್‍ನ ಲಾಡ್ಜ್, ಅಪಾರ್ಟ್ ಮೆಂಟ್‍ಗಳಲ್ಲಿ ಹೆಚ್ಚು ಸೋಂಕಿತರು ಕಂಡು ಬರುತ್ತಿದ್ದಾರೆ. ಹಲವು ಪ್ರಕರಣಗಳಲ್ಲಿ ಒಬ್ಬ ವ್ಯಕ್ತಿಗೆ ಸೋಂಕು ಬಂದರೆ ಮನೆಯವರೆಲ್ಲರಿಗೂ ಸೋಂಕು ತಗಲುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮನೆಗಳಲ್ಲಿಯೂ ಸೋಂಕಿತರಿಂದ ದೈಹಿಕ ಅಂತರ ಕಾಪಾಡುವುದು ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮಾರ್ಷಲ್‍ಗಳನ್ನು ನೇಮಕ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸಭೆಯಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಸೇರಿದಂತೆ ಪಾಲಿಕೆಯ ಆರೋಗ್ಯಾಧಿಕಾರಿಗಳು, ವಿಶೇಷ ಆಯುಕ್ತರು ಭಾಗಿಯಾಗಿದ್ದರು.
ನೂತನ ನಿಯಮಗಳು ಜಾರಿ
-ಮಾರುಕಟ್ಟೆ, ಚಿತ್ರಮಂದಿರ, ಶಾಪಿಂಗ್ ಮಾಲ್, ಶಾಲಾ ಕಾಲೇಜು ಆವರಣ, ಮದುವೆ ಸಮಾರಂಭಗಳು ಸೇರಿದಂತೆ ಎಲ್ಲಾ ಹೆಚ್ಚು ಜನರು ಸೇರುವ ಕಡೆಗಳಲ್ಲಿ ಕೋವಿಡ್ ಮಾರ್ಗ ಸೂಚಿ ಉಲ್ಲಂಘನೆ ಮಾಡಿದರೆ ಕಡ್ಡಾಯ ದಂಡ ವಸೂಲಿಗೆ ಸೂಚಿಸಲಾಗಿದ್ದು, ಮುಖ್ಯವಾಗಿ ಆಯೋಜಕರಿಗೆ 5 ಸಾವಿರ ರೂ. ಮತ್ತು ಹವಾನಿಯಂತ್ರಿತ ಸಭಾಂಗಣ, ಸ್ಟಾರ್ ಹೊಟೇಲ್ ಹಾಗೂ ಸಾರ್ವಜನಿಕ ಸಭೆಗಳ ಆಯೋಜಕರಿಗೆ 10 ಸಾವಿರ ರೂ. ದಂಡ ವಿಧಿಸಲಾಗುವುದು.
-ಮದುವೆಗಳು ತೆರೆದ ಸ್ಥಳದಲ್ಲಿ ನಡೆದರೆ 500 ಮಂದಿ, ಒಳಾಂಗಣದಲ್ಲಿ ನಡೆದರೆ 200 ಜನರಿಗೆ ಮಾತ್ರ ಅವಕಾಶ. ಹುಟ್ಟುಹಬ್ಬ ಸೇರಿದಂತೆ ಇನ್ನಿತರ ಸಭೆ, ಸಮಾರಂಭಗಳಿಗೆ ತೆರೆದ ಸ್ಥಳದಲ್ಲಿ 100 ಹಾಗೂ ಒಳಾಂಗಣದಲ್ಲಿ 50 ಜನರಿಗೆ ಮಾತ್ರ ಅವಕಾಶ. ಸಾವು ಅಥವಾ ಶ್ರದ್ಧಾಂಜಲಿ ಸಂದರ್ಭದಲ್ಲಿ ತೆರೆದ ಪ್ರದೇಶದಲ್ಲಿ 100 ಹಾಗೂ ಒಳಾಂಗಣದಲ್ಲಿ 50 ಮಂದಿ, ಅಂತಿಮ ಸಂಸ್ಕಾರಕ್ಕೆ 50 ಮಂದಿ ಹಾಗೂ ಇತರ ಸಮಾರಂಭಗಳಿಗೆ 100 ಜನರಿಗೆ ಮಾತ್ರ ಅವಕಾಶ. ಧಾರ್ಮಿಕ ಸಂಭ್ರಮಾಚರಣೆಗಳು ಅಥವಾ ಉತ್ಸವಗಳಿಗೆ ತೆರೆದ ಪ್ರದೇಶದಲ್ಲಿ 500 ಜನ, ರಾಜಕೀಯ ಸಭೆ, ಸಮಾರಂಭಗಳಿಗೆ ತೆರೆದ ಪ್ರದೇಶದಲ್ಲಿ 500 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು.
-ಮಾಸ್ಕ್ ಧರಿಸದಿದ್ದರೆ ಬಿಬಿಎಂಪಿ ಮತ್ತು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 250 ರೂ. ಹಾಗೂ ಇತರೆ ಪ್ರದೇಶಗಳಲ್ಲಿ 100 ರೂ.ದಂಡ ವಿಧಿಸಲಾಗುವುದು
-ಸಾರ್ವಜನಿಕ ಪ್ರದೇಶ, ಎಲ್ಲಾ ಕಾಂಪ್ಲೆಕ್ಸ್ ಗಳಿಗೆ ಶೀಘ್ರದಲ್ಲೇ ದಿನನಿತ್ಯ ಸ್ಯಾನಿಟೈಸ್ ಮಾಡಲಾಗುವುದು. ಅದೇ ರೀತಿ, ಆಸ್ಪತ್ರೆಗಳಿಗೆ ಎಷ್ಟು ಜನರು ಹೋಗಿದ್ದಾರೆ, ಬಂದಿದ್ದಾರೆ ಎಂಬ ಮಾಹಿತಿಯನ್ನು ಸಂಗ್ರಹಿಸಲಾಗುವುದು.
-ಪ್ರತಿಯೊಂದು ಆಸ್ಪತ್ರೆಗೂ ಕೋವಿಡ್‍ಗಾಗಿ ಒಬ್ಬ ನೋಡಲ್ ಅಧಿಕಾರಿಯನ್ನು ನಿಗದಿ ಮಾಡಲಾಗುವುದು.
-ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಕೋವಿಡ್ ನಿಯಂತ್ರಣಕ್ಕೆ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಲಾಗುವುದು.
-ಹೋಳಿಹಬ್ಬದ ಹಿನ್ನೆಲೆ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಆಗದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಶೀಘ್ರದಲ್ಲೇ ಕಟ್ಟುನಿಟ್ಟಿನ ಸೂಚನೆಗಳನ್ನು ಹೊರಡಿಸಲಾಗುವುದು.