×
Ad

ಹಾವೇರಿ: ಅಂಗಡಿಯಲ್ಲಿ ತಿಂಡಿ ಕದ್ದ ಆರೋಪದಲ್ಲಿ ಗುಂಪು ಥಳಿತ; ಗಂಭೀರ ಗಾಯಗೊಂಡಿದ್ದ ಬಾಲಕ ಮೃತ್ಯು

Update: 2021-03-25 18:03 IST

ಬೆಂಗಳೂರು: ಹಾವೇರಿ ಜಿಲ್ಲೆಯ ಉಪ್ಪನಾಶಿ ಎಂಬಲ್ಲಿನ ದಿನಸಿ ಅಂಗಡಿಯೊಂದರಿಂದ ತಿನಿಸುಗಳನ್ನು ಕದ್ದಿದ್ದಾನೆಂಬ ಆರೋಪದ ಮೇಲೆ ಒಂದು ವಾರದ ಹಿಂದೆ ನಾಲ್ಕು ಜನರಿಂದ ಗಂಭೀರವಾಗಿ ಥಳಿತಕ್ಕೊಳಗಾಗಿದ್ದ 10 ವರ್ಷದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಬಾಲಕನನ್ನು ಅಂಗಡಿಯ ಮಾಲಕರು ಘಟನೆ ನಡೆದ ದಿನವಾದ ಮಾರ್ಚ್ 16ರಂದು  ಹಲವಾರು ಗಂಟೆಗಳ ಕಾಲ ತಮ್ಮ ವಶದಲ್ಲಿರಿಸಿದ್ದರು ಹಾಗೂ ಆತನ ತಾಯಿ ಪರಿಪರಿಯಾಗಿ ವಿನಂತಿಸಿಕೊಂಡ ನಂತರ ಬಿಡುಗಡೆಗೊಳಿಸಿದ್ದರು ಎಂದು ಪೊಲೀಸರು ಮತ್ತು ಬಾಲಕನ ಕುಟುಂಬ ಸದಸ್ಯರು ಹೇಳುತ್ತಾರೆ.

ಅದೇ ದಿನ ರಾತ್ರಿ ಬಾಲಕನ ಸ್ಥಿತಿ ಗಂಭೀರವಾದಾಗ ಆತನನ್ನು ಹಾವೇರಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ವೈದ್ಯರ ಸಲಹೆಯಂತೆ ಬಾಲಕನನ್ನು ನಂತರ ಹುಬ್ಬಳ್ಳಿಯ ಕೆಂಪೇಗೌಡ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸಸ್‍ಗೆ ದಾಖಲಿಸಲಾಗಿತ್ತು. ಅಲ್ಲಿ ಬಾಲಕ ಮಂಗಳವಾರ ಕೊನೆಯುಸಿರೆಳೆದಿದ್ದಾನೆ.

ಮರಣೋತ್ತರ ಪರೀಕ್ಷಾ ವರದಿ ಇನ್ನಷ್ಟೇ ಬರಬೇಕಿದೆ. ಬಾಲಕನಿಗೆ ಚಿಕಿತ್ಸೆಯ ನಡುವೆ ಜ್ವರ ಬಂದು ಮೆದುಳಿನ ರಕ್ತಸ್ರಾವದಿಂದ ನಂತರ ಮೃತಪಟ್ಟಿದ್ದಾನೆಂದು ತಮ್ಮ ಹೆಸರು ಹೇಳಲಿಚ್ಛಿಸದ ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಂಗಡಿ ಮಾಲಿಕ ಪ್ರವೀಣ್ ಕರಿಶೆಟ್ಟರ್, ಆತನ ತಾಯಿ ಬಸವಣ್ಣೆವ್ವ ಕರಿಶೆಟ್ಟರ್, ಮಾವ ಕುಮಾರ್ ಹಾವೇರಿ ಹಾಗೂ ಅಜ್ಜ ಶಿವರುದ್ರಪ್ಪ ಹಾವೇರಿ ವಿರುದ್ಧ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿದ್ದು ಆರೋಪಿಗಳೆಲ್ಲರೂ ತಲೆಮರೆಸಿಕೊಂಡಿದ್ದಾರೆ.

ವೀಡಿಯೋವೊಂದರಲ್ಲಿ ಬಾಲಕ ಕೊನೆಯುಸಿರೆಳೆಯುವ ಮುನ್ನ ನೀಡಿದ್ದ ಹೇಳಿಕೆಯಲ್ಲಿ ನಾಲ್ಕು ಮಂದಿಯನ್ನು ಹೆಸರಿಸಿದ್ದಾನೆಂದು ಹೇಳಲಾಗಿದೆ. ಆತನನ್ನು ಮೊದಲು ಕೊಠಡಿಯೊಂದರಲ್ಲಿ ಕೂಡಿ ಹಾಕಲಾಗಿತ್ತು. ನಂತರ ವೃದ್ಧೆ(ಬಸವಣ್ಣೆವ್ವ) ಒಬ್ಬರು ಆತನನ್ನು ಅಲ್ಲಿಂದ ಹೊರಗೆ ತಂದು ಕೂರಿಸಿದರು. ಅಲ್ಲಿಗೆ ಬಂದ ವೃದ್ಧರೊಬ್ಬರು ಆತನಿಗೆ ಎರಡು ಬಾರಿ ಥಳಿಸಿ ಕದಲದೆ ಅಲ್ಲಿಯೇ ಕುಳಿತುಕೊಳ್ಳುವಂತೆ ಹೇಳಿದ್ದರು. ನಂತರ ಅಂಗಡಿಯಾತ  ಹಿಂಬದಿಗೆ ಕರೆದುಕೊಂಡು ಹೋಗಿ ಅಲ್ಲಿ ಇತರ ಇಬ್ಬರು ಸೇರಿ ಚೆನ್ನಾಗಿ ಥಳಿಸಿ ಕಲ್ಲಿನಿಂದ ಹೊಡೆದಿದ್ದಾರೆ" ಎಂದು ಬಾಲಕ ನೀಡಿದ್ದ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಬಾಲಕನ ತಂದೆ ನಾಗಯ್ಯ ಹಿರೇಮಠ್ ಮಾರ್ಚ್ 17ರಂದು ನೀಡಿದ ದೂರಿನಲ್ಲಿ ದಿನಸಿ ಸಾಮಾನು ತರಲೆಂದು ಹೋಗಿದ್ದ ಮಗ ಎರಡು ಗಂಟೆಗಳಾದರೂ ವಾಪಸ್ ಬಾರದೇ ಇದ್ದುದರಿಂದ ಅಲ್ಲಿಗೆ ತೆರಳಿದಾಗ ಕಳ್ಳತನ ಆರೋಪದಲ್ಲಿ ಆತನನ್ನು ಅಲ್ಲಿ ಕೂಡಿ ಹಾಕಲಾಗಿದೆ ಎಂದು ತಿಳಿದು ಬಂದಿತ್ತು ಎಂದು ಹೇಳಿದ್ದಾರೆ. ಆ ದಿನ ಅವರಿಂದ ಲಿಖಿತ ಹೇಳಿಕೆ ಪಡೆದಿದ್ದ ಪೊಲೀಸರು ದೂರು ದಾಖಲಿಸಿರಲಿಲ್ಲ ಎಂದು ಸಂಬಂಧಿಯೊಬ್ಬರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News