56 ಯುಎಪಿಎ ಪ್ರಕರಣಗಳನ್ನು ಎನ್‍ಐಎ ವಿಶೇಷ ಕೋರ್ಟ್ ಗೆ ವರ್ಗಾಯಿಸಲು ಹೈಕೋರ್ಟ್ ನಿರ್ದೇಶನ

Update: 2021-03-25 12:58 GMT

ಬೆಂಗಳೂರು, ಮಾ.25: ಕಾನೂನು ಬಾಹಿರ ಚಟುವಟಿಕೆಗಳ(ತಡೆಗಟ್ಟುವಿಕೆ) ಕಾಯ್ದೆ(ಯುಎಪಿಎ)ಯಡಿ ದಾಖಲಾಗಿ ಬಾಕಿ ಉಳಿದಿರುವ 56 ಪ್ರಕರಣಗಳನ್ನು ನಗರದ ಎನ್‍ಐಐ ವಿಶೇಷ ಕೋರ್ಟ್‍ಗೆ ವರ್ಗಾಯಿಸುವಂತೆ ಹೈಕೋರ್ಟ್ ತನ್ನ ರಿಜಿಸ್ಟ್ರಾರ್ ಗೆ ನಿರ್ದೇಶಿಸಿದೆ.

ಈ ಸಂಬಂಧ ಬೆಂಗಳೂರು ನಗರದ ನಿವಾಸಿ ಎ.ವಸಿಮುದ್ದೀನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ವಕೀಲರ ವಾದ ಆಲಿಸಿದ ನ್ಯಾಯಪೀಠ, ನಗರದ ವಿವಿಧ ಕೋರ್ಟ್ ಗಳಲ್ಲಿ ಯುಎಪಿಎ ಕಾಯ್ದೆಯಡಿ ಬಾಕಿ ಉಳಿದಿರುವ 56 ಪ್ರಕರಣಗಳನ್ನು ಎನ್‍ಐಎ ವಿಶೇಷ ಕೋರ್ಟ್ ಗೆ ವರ್ಗಾಯಿಸಬೇಕು. ಪ್ರಕರಣಗಳನ್ನು ವರ್ಗಾಯಿಸುವ ಮುನ್ನವೇ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು ಎಂದು ಹೈಕೋರ್ಟ್‍ನ ರಿಜಿಸ್ಟ್ರಾರ್ ಗೆ ನಿರ್ದೇಶಿಸಿತು. ಅಲ್ಲದೆ, ಈ ಪ್ರಕರಣಗಳನ್ನು ವಿಳಂಬ ಮಾಡದೆ ಆದ್ಯತೆಯ ಮೇರೆಗೆ ಪರಿಗಣಿಸಬೇಕು ಎಂದು ಸಂಬಂಧಿಸಿದ ನ್ಯಾಯಾಂಗ ಅಧಿಕಾರಿಗಳಿಗೆ ಸೂಚಿಸಿ, ಅರ್ಜಿ ಇತ್ಯರ್ಥಪಡಿಸಿತು.

ಯುಎಪಿಎ ಅಡಿ ದಾಖಲಾದ ಪ್ರಕರಣಗಳ ವಿಚಾರಣೆ ವಿಳಂಬವಾಗುತ್ತಿದ್ದು, ಆರೋಪಿಗಳು ಬಹಳ ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹೀಗಾಗಿ, ಸಂವಿಧಾನದ 21ನೆ ವಿಧಿ ಉಲ್ಲಂಘನೆಯಾಗುತ್ತಿದೆ. ಹೀಗಾಗಿ, ಯುಎಪಿಎ ಅಡಿಯಲ್ಲಿ ದಾಖಲಾಗುವ ಪ್ರಕರಣಗಳ ತ್ವರಿತ ವಿಚಾರಣೆ ನಡೆಸಿ 6 ತಿಂಗಳಲ್ಲಿ ಇತ್ಯರ್ಥಪಡಿಸುವಂತೆ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News