ಸಿಡಿ ಪ್ರಕರಣ: ಎರಡನೆ ವಿಡಿಯೊದಲ್ಲಿ ಸಿಟ್ ಬಗ್ಗೆಯೇ ಸಂಶಯ ಹೊರಹಾಕಿದ ಯುವತಿ

Update: 2021-03-25 14:38 GMT

ಬೆಂಗಳೂರು, ಮಾ.25: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರದ್ದು ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿರುವ ಯುವತಿ ಎರಡನೆ ವಿಡಿಯೊ ಬಿಡುಗಡೆಗೊಳಿಸಿದ್ದು, ಸಿಟ್(ವಿಶೇಷ ತನಿಖಾ ದಳ) ಬಗ್ಗೆಯೇ ಸಂಶಯ ಹೊರಹಾಕಿದ್ದಾರೆ.

ಗುರುವಾರ ವಿಡಿಯೊ ಹರಿಬಿಟ್ಟಿರುವ ಯುವತಿ, ನನಗಾದ ಅನ್ಯಾಯಕ್ಕೆ ನ್ಯಾಯ ಕೇಳಿ, ಒಂದು ವಿಡಿಯೊ ಅನ್ನು ನಗರ ಪೊಲೀಸ್ ಆಯುಕ್ತರ ಕಚೇರಿ ಮತ್ತು ಸಿಟ್ ತನಿಖಾಧಿಕಾರಿಗಳಿಗೆ ತಲುಪಿಸಿದ್ದೆ. ಇದಾದ ನಂತರ, ಮರುದಿನವೇ ತರಾತುರಿಯಲ್ಲಿ ರಮೇಶ ಜಾರಕಿಹೊಳಿ ದೂರು ಕೊಟ್ಟಿದ್ದಾರೆ. ಬಳಿಕವಷ್ಟೇ, ನನ್ನ ವಿಡಿಯೊ ಹೊರಗೆ ಬಿಡಲಾಗಿದೆ. ಹಾಗಾದರೆ, ಸಿಟ್ ಯಾರ ಪರವಿದೆ? ಇಲ್ಲಿ ಯಾರನ್ನು ರಕ್ಷಣೆ ಮಾಡಲಾಗುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ನಾನು ತಪ್ಪು ಮಾಡಿಲ್ಲ: ನನ್ನನ್ನು ಅಪಹರಿಸಲಾಗಿದೆ ಎಂದು ನನ್ನ ಅಪ್ಪ-ಅಮ್ಮ ಸ್ವ–ಇಚ್ಛೆಯಿಂದ ದೂರು ಸಲ್ಲಿಸಲು ಸಾಧ್ಯವೇ ಇಲ್ಲ ಎಂದಿರುವ ಆಕೆ, ಪೋಷಕರಿಗೂ ಗೊತ್ತು ಮಗಳು ಯಾವುದೇ ತಪ್ಪು ಮಾಡಿಲ್ಲವೆಂದು. ನನಗೆ, ಅವರ ಸುರಕ್ಷತೆ ಮುಖ್ಯ. ಅವರು ಸುರಕ್ಷಿತವಾಗಿದ್ದರೆ ಮಾತ್ರ ನಾನು ಸಿಟ್ ಮುಂದೆ ಬಂದು ಏನು ಹೇಳಿಕೆ ನೀಡಬೇಕು ಹಾಗೂ ಯಾವೆಲ್ಲ ಪ್ರಕ್ರಿಯೆ ಮಾಡಬೇಕು ಎಂಬುದನ್ನು ಮಾಡುತ್ತೇನೆ ಎಂದು ಯುವತಿ ನುಡಿದಿದ್ದಾರೆ.

ಇನ್ನು ಮುಖ್ಯವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ಸೇರಿದಂತೆ ಇನ್ನಿತರ ಮಹಿಳಾ ಸಂಘಟನೆಗಳು ಜೊತೆಗೂಡಿ ನನ್ನ ಪೋಷಕರಿಗೆ ಭದ್ರತೆ ಕೊಡಿ ಎಂದೂ ಯುವತಿ ಮನವಿ ಮಾಡಿದ್ದಾರೆ.

ಸಿಟ್ ಸಭೆ: ಯುವತಿ ವಿಡಿಯೊ ಹರಿಬಿಟ್ಟ ಬೆನ್ನಲ್ಲೇ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಿಟ್ ಮುಖ್ಯಸ್ಥ ಸೌಮೆಂದು ಮುಖರ್ಜಿ ನೇತೃತ್ವದಲ್ಲಿ ಗುರುವಾರ ಸಭೆ ನಡೆಸಿದರು.

ಯುವತಿ ವಿಡಿಯೊವನ್ನು ಎಲ್ಲಿಂದ ಅಪ್ಲೋಡ್ ಮಾಡಲಾಗಿದೆ. ಯುವತಿ ಬಗ್ಗೆ ಯಾಕಿನ್ನೂ ಸುಳಿವು ಸಿಗುತ್ತಿಲ್ಲ. ಯುವತಿಯನ್ನು ಪತ್ತೆ ಹಚ್ಚಲು ಏಕೆ ವಿಳಂಬವಾಗುತ್ತಿದೆ. ಯುವತಿಯನ್ನು ಸಂಪರ್ಕಿಸಲು ಪ್ರಯತ್ನಿಸುವ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆಂದು ವರದಿಯಾಗಿದೆ.

ದೂರು: ಸಿಡಿ ಪ್ರಕರಣ ಸಂಬಂಧ ಗೀತಾ ಮಿಶ್ರಾ ಎಂಬುವರು ರಮೇಶ್ ಜಾರಕಿಹೊಳಿ ವಿರುದ್ಧ ರಾಜ್ಯಪಾಲ ಹಾಗೂ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಮಾಡಿದ್ದಾರೆ.

ಜನಪ್ರತಿನಿಧಿಯಾಗಿ ಕೆಲಸ ಕೊಡಿಸುವುದಾಗಿ ನಂಬಿಸಿ ಓರ್ವ ಹೆಣ್ಣುಮಗಳಿಗೆ ವಂಚನೆ ಮಾಡಿದ್ದಾರೆ. ಜನಪ್ರತಿನಿಧಿ ಕಾಯ್ದೆ ಉಲ್ಲಂಘಿಸಿ ಮೋಸ ಮಾಡಿದ್ದಾರೆ. ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News