ಸಚಿವ ಸುಧಾಕರ್ ರನ್ನು ಅನರ್ಹಗೊಳಿಸಲು ಮಹಿಳಾ ಕಾಂಗ್ರೆಸ್ ಆಗ್ರಹ: ಸಿಡಿ ಪ್ರದರ್ಶಿಸಿ ಪ್ರತಿಭಟನೆ

Update: 2021-03-25 15:20 GMT

ಬೆಂಗಳೂರು, ಮಾ.25: ಮಹಿಳೆಯರ ಕುರಿತು ವಿವಾದಿತ ಹೇಳಿಕೆ ನೀಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರನ್ನು ಈ ಕೂಡಲೇ ಶಾಸಕ ಸ್ಥಾನದಿಂದಲೇ ಅನರ್ಹಗೊಳಿಸಬೇಕು ಎಂದು ಕಾಂಗ್ರೆಸ್ ಮಹಿಳಾ ಶಾಸಕಿಯರು ಒಕ್ಕೂಲಿನಿಂದ ಆಗ್ರಹಿಸಿದರು.

ಗುರುವಾರ ನಗರದ ರೇಸ್‍ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಶಾಸಕಿಯರಾದ ಲಕ್ಷ್ಮೀ ಹೆಬ್ಬಾಳ್ಕರ್, ಸೌಮ್ಯರೆಡ್ಡಿ, ರೂಪಾ ಶಶಿಧರ್ ಸೇರಿದಂತೆ ಪ್ರಮುಖರು, ರಾಜಕೀಯಕ್ಕೆ ಬಂದ ಮಹಿಳೆಯರನ್ನು ಸಂಶಯದಿಂದ ನೋಡುವ ರೀತಿಯಲ್ಲಿ ಆರೋಗ್ಯ ಸಚಿವ ಸುಧಾಕರ್ ಹೇಳಿಕೆ ನೀಡಿದ್ದಾರೆ ಎಂದು ದೂರಿದರು.

ಪುಷ್ಪಾ ಅಮರನಾಥ್ ಮಾತನಾಡಿ, ಮಹಿಳೆ ರಾಜಕೀಯಕ್ಕೆ ಯಾಕೆ ಬರಬೇಕೆಂಬ ಪ್ರಶ್ನೆ ಹಿಂದೆ ಇತ್ತು. ಆದರೆ, ಈಗ ಎಲ್ಲ ಪಕ್ಷದಲ್ಲೂ ಶಾಸಕಿಯರಿದ್ದಾರೆ. ಪುರುಷರಿಗೂ ಮೀರಿ ಉತ್ತಮ ಕಾರ್ಯನಿರ್ವಣೆ ಮಾಡಿದ್ದಾರೆ. ಇಂದು ಜನಪ್ರತಿನಿಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಸಚಿವ ಸುಧಾಕರ್ ಸಚಿವರಲ್ಲ, ಶಾಸಕರಾಗಿ ಇರಲೂ ಅರ್ಹರಲ್ಲ. ನ್ಯಾಯಾಲಯದ ಮೊರೆ ಹೋಗಿರುವ ಎಲ್ಲ ಆರು ಸಚಿವರು ನೈತಿಕತೆ, ಯೋಗ್ಯತೆ ಕಳೆದಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಶ್ರೀರಾಮನ ಪಕ್ಷ ಎನ್ನುವ ಬಿಜೆಪಿಯಲ್ಲಿ ಇವರಿಗೆ ಇಂತಹ ಅವಕಾಶ ಯಾರು ಮಾಡಿಕೊಟ್ಟರು. ಬಿಜೆಪಿ ಶಾಸಕಿಯರು ಇಂತಹವರ ಮಾತನ್ನು ಒಪ್ಪುತ್ತಾರಾ. ಅಲ್ಲದೆ, ಎಲ್ಲರನ್ನೂ ಎಳೆದು ಅವಹೇಳನ ಮಾಡುವುದು ಎಷ್ಟು ಸರಿ. ಸಿಎಂ ಇವರ ಹೇಳಿಕೆ ಗಮನಿಸಬೇಕು. ಸುಧಾಕರ್ ನೀಡಿರುವ ಹೇಳಿಕೆಯ ದಾಖಲೆಯನ್ನು ನಾವು ಮುಖ್ಯಮಂತ್ರಿಗೆ ಕಳುಹಿಸಿಕೊಡುತ್ತೇವೆ. ಸಾಕ್ಷ್ಯ ಇದ್ದರೆ ಅವರು ಪ್ರಸ್ತುತಪಡಿಸಲಿ ಎಂದು ಸವಾಲು ಹಾಕಿದರು.

ರಾಜಕಾರಣದಲ್ಲಿ ಮೌಲ್ಯ ಉಳಿಸಿಕೊಂಡು ಸಾಗುವವರಿದ್ದಾರೆ. ಆದರೆ, ಸುಧಾಕರ್ ಊರು ಕೊಳ್ಳೆ ಹೊಡೆದ ನಂತರ ಕೋಟೆ ಬಾಗಿಲು ಹಾಕುವ ರೀತಿ ಕ್ಷಮೆ ಕೋರಿದರು. ಇವರು ಮಹಿಳಾ ಕುಲಕ್ಕೆ ಅಪಮಾನ ಮಾಡಿದ್ದಾರೆ ಎಂದ ಅವರು, ಇನ್ನು ಮುಂದೆ ನಾವು ಸುಧಾಕರ್ ಅವರನ್ನು ಆರೋಗ್ಯ ಮಂತ್ರಿ ಎಂದು ಕರೆಯುವುದಿಲ್ಲ. ಅನಾರೋಗ್ಯ ಮಂತ್ರಿ ಎಂದು ಕರೆಯುತ್ತೇವೆ ಎಂದು ತಿಳಿಸಿದರು.

ಶಾಸಕಿ ರೂಪಾ ಶಶಿಧರ್ ಮಾತನಾಡಿ, ಶಾಸಕ ಹಾಗೂ ಸಚಿವ ಸ್ಥಾನ ಎಂಬುದು ಪವಿತ್ರವಾದ ಹುದ್ದೆಗಳು. ಅದರಲ್ಲಿರುವವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಸುಧಾಕರ್ ಹೇಳಿಕೆ ಹೆಣ್ಣುಮಕ್ಕಳನ್ನು ತೇಜೋವಧೆ ಮಾಡಿದಂತಾಗಿದೆ. ಅಲ್ಲದೆ, ರಾಜ್ಯದ ಜನ ಗೌರವಯುತವಾಗಿ ಗೆಲ್ಲಿಸಿ ಕಳಿಸುತ್ತಾರೆ. ಪ್ರಜ್ಞಾವಂತರಾಗಿ ಉತ್ತಮ ನಿರ್ಧಾರ ಕೈಗೊಳ್ಳಲಿ ಎಂದು ಜನ ಆಯ್ಕೆ ಮಾಡಿ ಕಳುಹಿಸಿಕೊಡುತ್ತಾರೆ ಎಂದರು.

ಜಯನಗರ ಶಾಸಕಿ ಸೌಮ್ಯರೆಡ್ಡಿ ಮಾತನಾಡಿ, ಸಮಾಜವನ್ನು ಕಾಡುವ ನಾನಾ ರೀತಿಯ ಸಮಸ್ಯೆಗಳಿವೆ. ಬಡತನ, ನಿರುದ್ಯೋಗ ಸೇರಿದಂತೆ ಜನರ ಸಮಸ್ಯೆಗಳ ಬಗ್ಗೆ ನಾವು ಚರ್ಚೆ ಮಾಡಬೇಕಿತ್ತು. ಆದರೆ, ಸಚಿವರು ಯಾವ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಏನು ಮಾತನಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಯಾವ ಮಗುವನ್ನೇ ಕೇಳಿ ಅದು ರಾಜಕಾರಣಿಯಾಗಬೇಕೆಂದು ಬಯಸುವುದಿಲ್ಲ. ಅಂತಹ ವಾತಾವರಣ ಸೃಷ್ಟಿಯಾಗಿದೆ. ಸಚಿವರ ನಡವಳಿಕೆಗಳು ಮತ್ತಷ್ಟು ವಾತಾವರಣವನ್ನು ಕಲುಷಿತಗೊಳಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಡಿ ಪ್ರದರ್ಶಿಸಿ ಪ್ರತಿಭಟನೆ

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ಖಂಡಿಸಿ ಇಲ್ಲಿನ ರೇಸ್‍ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನ ಮುಂಭಾಗ ಜಮಾಯಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮಹಿಳಾ ಘಟಕದ ಸದಸ್ಯರು, ಖಾಲಿ ಸಿಡಿ ಪ್ರದರ್ಶಿಸಿ ಆಕ್ರೋಶ ಹೊರಹಾಕಿದರು.

ಮಹಿಳಾ ಜನ ಪ್ರತಿನಿಧಿಗಳು ಸೇರಿದಂತೆ 224 ಶಾಸಕರನ್ನು ಹಾಗೂ ಆಯ್ಕೆ ಮಾಡಿ ಕಳುಹಿಸಿದ ಮತದಾರರನ್ನು ಸುಧಾಕರ್ ಅವಮಾನಿಸಿದ್ದಾರೆ. ಅವರು ಈ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿ ಒತ್ತಡ ಹೇರಿಯಾದರೂ, ರಾಜೀನಾಮೆ ಪಡೆಯಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.

ಸಿಎಂ ಮನೆಗೆ ಮುತ್ತಿಗೆ, ವಶಕ್ಕೆ

ಡಾ.ಕೆ.ಸುಧಾಕರ್ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಸಚಿವ ಸ್ಥಾನದಿಂದ ಅವರನ್ನು ವಜಾ ಮಾಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಸೇರಿದಂತೆ 15ಕ್ಕೂ ಹೆಚ್ಚಿನ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News