ಜನಪ್ರತಿನಿಧಿಗಳು ಸದನದಲ್ಲಿ ಜನರ ಧ್ವನಿ ಹಾಗೂ ಭಾವನೆಯಾಗಿರಬೇಕು: ಸ್ಪೀಕರ್ ಕಾಗೇರಿ

Update: 2021-03-25 15:25 GMT

ಬೆಂಗಳೂರು, ಮಾ.25: ಸದನದಲ್ಲಿ ಸಚಿವರು ಮತ್ತು ಸದಸ್ಯರ ಹಾಜರಾತಿಯೂ ಒಳಗೊಂಡಂತೆ ಪಾಲ್ಗೊಳ್ಳುವಿಕೆ ಇನ್ನೂ ಹೆಚ್ಚು ಇರಬೇಕಿತ್ತು ಎಂಬ ಅಭಿಪ್ರಾಯವನ್ನು ಹೊರ ಹಾಕಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸದನದ ಕಾರ್ಯ ಕಲಾಪಗಳಲ್ಲಿ ಸದಸ್ಯರಲ್ಲಿ ಸ್ವಯಂ ಜಾಗೃತಿ ಮತ್ತು ಸ್ವಯಂ ಶಿಸ್ತು ಅಗತ್ಯ ಎಂದು ಆಗ್ರಹಪೂರ್ವಕವಾಗಿ ಹೇಳಿದರು. 

ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶಾಸಕರು, ಸಚಿವರು ನೆಪ ಹೇಳಿ ಸದನಕ್ಕೆ ಗೈರು ಹಾಜರಾಗುವುದು ಹಾಗೂ ಸಕ್ರಿಯವಾಗಿ ಪಾಲ್ಗೊಳ್ಳದೆ ಇರುವುದು ಸಮಂಜಸವೂ ಅಲ್ಲ, ಸಮರ್ಪಕವೂ ಅಲ್ಲ ಎಂದು ಬಣ್ಣಿಸಿದರು. 

ಪ್ರಜಾಪ್ರಭುತ್ವದ ದೇಗುಲದಲ್ಲಿ ಅನಿವಾರ್ಯ ಕಾರಣಗಳು ಹಾಗೂ ತುರ್ತು ಸಂದರ್ಭಗಳು ಹೊರತುಪಡಿಸಿ ಅನಗತ್ಯವಾಗಿ ಗೈರು ಹಾಜರಾಗುವುದು ಸಾಧುವಲ್ಲ. ಜನಪ್ರತಿನಿಧಿಗಳು ಸದನದಲ್ಲಿ ತಾವು ಜನರ ಧ್ವನಿಯಾಗಬೇಕು ಹಾಗೂ ಸದನದಲ್ಲಿ ತಾವು ಜನರ ಭಾವನೆಗಳನ್ನು ಅಭಿವ್ಯಕ್ತಿಗೊಳಿಸಬೇಕು ಎಂಬುದನ್ನು ಸದಸ್ಯರು ಸದನ ಪ್ರಾರಂಭಗೊಳ್ಳುವ ಮುನ್ನ ಸಂಕಲ್ಪ ಮಾಡಬೇಕು ಎಂದು ಅವರು ಸಲಹೆ ಮಾಡಿದರು. 

ಮಾರ್ಚ್ 4 ಮತ್ತು 5 ರಂದು ಸದನದಲ್ಲಿ ನಿಗದಿಗೊಳಿಸಿದ್ದ ‘ಒಂದು ರಾಷ್ಟ್ರ ಒಂದು ಚುನಾವಣೆ’ ಚರ್ಚೆಯಲ್ಲಿ ಪ್ರತಿಪಕ್ಷಗಳು ಪಾಲ್ಗೊಳ್ಳದಿರುವುದು ತಮಗೆ ನೋವು ತಂದಿದೆ. ಆಡಳಿತ ಪಕ್ಷದ ಸಭಾನಾಯಕರಿಗೆ ಇರುವಂತೆಯೇ ಪ್ರತಿ ಪಕ್ಷದ ನಾಯಕರಿಗೂ ಕರ್ತವ್ಯ ಮತ್ತು ಜವಾಬ್ದಾರಿ ಇರುತ್ತದೆ. ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯಭೇದಗಳು ಹಾಗೂ ಭಿನ್ನಾಭಿಪ್ರಾಯಗಳು ಸಹಜ ಎಂದು ಸ್ಪೀಕರ್ ಹೇಳಿದರು.

ಚರ್ಚೆಯಲ್ಲಿ ಪಾಲ್ಗೊಂಡು ಪ್ರತಿಪಕ್ಷಗಳು ತಮ್ಮ ಅಭಿಪ್ರಾಯವನ್ನು ದಾಖಲಿಸಬಹುದಿತ್ತು. ಚರ್ಚೆಯಲ್ಲಿಯೆ ಭಾಗವಹಿಸದೆ ಅಸಹಕಾರ ತೋರಿದ್ದು, ಕಲಾಪ ಸಲಹಾ ಸಮಿತಿಯಲ್ಲಿ ಪಾಲ್ಗೊಳ್ಳದೆ ಹಾಗೂ ಕಲಾಪದಲ್ಲಿ ಪ್ರತಿಭಟನೆ ನಡೆಸಿ ಅಧಿವೇಶನವನ್ನು ಮೊಟಕುಗೊಳಿಸುವಂತೆ ಮಾಡಿದ್ದು ಅಕ್ಷಮ್ಯ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ವಿಧಾನಸಭೆಯ ಸದಸ್ಯರಲ್ಲಿ ಅನುಭವ, ಹಿರಿತನ ಸಾಂವಿಧಾನಿಕ ಮೌಲ್ಯಗಳು ಹಾಗೂ ಗೌರವಕ್ಕೆ ಯಾವುದೇ ಕೊರತೆ ಇಲ್ಲ. ಸದನದಲ್ಲಿ ಪ್ರತಿಭಟನೆಗಳು, ಧರಣಿಗಳು ಮತ್ತು ಸಭಾತ್ಯಾಗಗಳು ಪ್ರಾರಂಭಿಕ ಅಸ್ತ್ರವಾದರೂ ಸರಿ ಅಥವಾ ಅಂತಿಮ ಅಸ್ತ್ರವಾದರೂ ಸರಿ ಒಂದು ವಿಷಯ ಪ್ರಸ್ತಾಪಿಸಿದ ನಂತರ ಮತ್ತೊಂದು ವಿಷಯ ಪ್ರಸ್ತಾಪಿಸುವ ವೇಳೆಗೆ ಎಲ್ಲ ಸದಸ್ಯರು ಸದನದೊಳಗೆ ಪ್ರವೇಶಿಸಿ ಸಕ್ರಿಯವಾಗಿ ಪಾಲ್ಗೊಂಡು ಕಲಾಪವನ್ನು ನಡೆಸಲು ಅನುವು ಮಾಡಿಕೊಡಬೇಕೆಂಬುದು ಪ್ರತಿಪಕ್ಷದವರಲ್ಲಿ ತಮ್ಮ ಕಳಕಳಿಯ ಮನವಿ. ಕಲಾಪವನ್ನು ನಿರ್ಬಂಧಿಸುವ ಹಾಗೂ ಚರ್ಚೆಗೆ ತಡೆಒಡ್ಡುವ ಪ್ರಕರಣಗಳು ಮುಂದಿನ ದಿನಗಳಲ್ಲಿ ಮರುಕಳಿಸದಿರಲಿ ಎಂದು ಅವರು ಹೇಳಿದರು.

ಸಚಿವ ಸುಧಾಕರ್ ನೀಡಿದ ಹೇಳಿಕೆಯಿಂದ ಸದನದ ಎಲ್ಲ ಸದಸ್ಯರೂ ಮುಜುಗರಕ್ಕೆ ಈಡಾದ ವಿಷಯದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ಪೀಕರ್, ಈಗಾಗಲೇ ಸಚಿವರು ಸ್ಪಷ್ಟೀಕರಣ ನೀಡಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಂದುವರಿಸಲು ತಮಗೆ ಇಷ್ಠವಿಲ್ಲ. ಆದರೆ ಕಾಂಗ್ರೆಸ್ ಸದಸ್ಯರು ಲಿಖಿತ ದೂರು ನೀಡಿರುವ ಹಿನ್ನಲೆಯಲ್ಲಿ ಕಾನೂನು ಪ್ರಕಾರ ಹಾಗೂ ನಿಯಮಾವಳಿಗಳ ಚೌಕಟ್ಟಿಯನಲ್ಲಿ ದೂರು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ನಿರ್ಧರಿಸಿರುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News