×
Ad

ತೋಟಗಾರಿಕೆಯಿಂದ ಪ್ರವಾಸೋದ್ಯಮ ಇಲಾಖೆಗೆ ಕೆಮ್ಮಣ್ಣುಗುಂಡಿ ಗಿರಿಧಾಮ ಹಸ್ತಾಂತರ

Update: 2021-03-25 22:29 IST

ಚಿಕ್ಕಮಗಳೂರು, ಮಾ.25: ಹಚ್ಛ ಹಸಿರಿನ ಗಿರಿಶ್ರೇಣಿಗಳ ಜಿಲ್ಲೆಯಾಗಿರುವ ಕಾಫಿನಾಡಿನ ಮುಳ್ಳಯ್ಯನಗಿರಿ, ಬಾಬಾಬುಡನ್‍ಗಿರಿ ರಾಜ್ಯ, ದೇಶ, ವಿದೇಶಗಳ ಪ್ರವಾಸಿಗರ ಅಚ್ಚುಮೆಚ್ಚಿನ ಪ್ರವಾಸಿತಾಣವಾಗಿದ್ದರೆ, ಈ ಗಿರಿಶ್ರೇಣಿಗಳಿಗೆ ಹೊಂದಿಕೊಂಡಿರುವ ಕೆಮ್ಮಣ್ಣುಗುಂಡಿ ದಕ್ಷಿಣ ಭಾರತದ ಕೆಲವೇ ಕೆಲವು ಸುಂದರ ಗಿರಿಧಾಮಗಳಲ್ಲಿ ಒಂದಾಗಿದೆ. ಜಿಲ್ಲೆಯು ರಾಜ್ಯದ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿದ್ದರೂ ಮೂಲಸೌಕರ್ಯಗಳ ಕೊರತೆಯಿಂದಾಗಿ ಕಾಫಿನಾಡು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹಿಂದುಳಿಯುವಂತಾಗಿದೆ. ಪರಿಣಾಮ ಮುಳ್ಳಯ್ಯನಗಿರಿ, ಬಾಬಾ ಬುಡನ್‍ಗಿರಿ,ಕೆಮ್ಮಣ್ಣುಗುಂಡಿಯಂತಹ ಹೆಸರಾಂತ ಪ್ರವಾಸಿ ತಾಣಗಳ ಅಭಿವೃದ್ಧಿ ಇಂದಿಗೂ ಮರಿಚೀಕೆಯಾಗಿದೆ. ಅದರಲ್ಲೂ ಕೆಮ್ಮಣ್ಣುಗುಂಡಿ ಗಿರಿಧಾಮದ ಅಭಿವೃದ್ಧಿಗೆ ಸರಕಾರ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪಗಳೂ ಇವೆ.

ಜಿಲ್ಲೆಯ ತರೀಕೆರೆ ತಾಲೂಕು ವ್ಯಾಪ್ತಿಯಲ್ಲಿರುವ ಕೆಮ್ಮಣ್ಣಗುಂಡಿ ಗಿರಿಧಾಮ ಕಬ್ಬಿಣದ ಅದಿರಿನ ಗಣಿಯಾಗಿದ್ದು, ಸದ್ಯ ಇಲ್ಲಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಸಮುದ್ರಮಟ್ಟದಿಂದ 4,832ಅಡಿ ಎತ್ತರದಲ್ಲಿರುವ ಈ ಗಿರಿಧಾಮ ಸದಾ ಹಸಿರಿನಿಂದ ಕಂಗೊಳಿಸುವ ಪಶ್ಚಿಮಘಟದ್ದ ಗಿರಿಶ್ರೇಣಿಯಾಗಿದೆ. ಕಡು ಬೇಸಿಗೆಯಲ್ಲೂ ಇಲ್ಲಿಯ ಉಷ್ಠಾಂಶ 28ಡಿಗ್ರಿ ಸೆಲ್ಸಿಯಸ್‍ಗಿಂತ ಕಡಿಮೆ ಇರುವುದು ಇದರ ವಿಶೇಷವಾಗಿದೆ. ಚಳಿಗಾಲದಲ್ಲಿ ಇದರ ಉಷ್ಣಾಂಶ 8 ಡಿಗ್ರಿ ಸೆಲ್ಸಿಯಸ್‍ಗಿಂತ ಕಡಿಮೆಯಾಗದಿರುವುದು ಕೆಮ್ಮಣ್ಣುಗುಂಡಿ ಗಿರಿಧಾಮದ ವಿಶೇಷ ಗುಣವಾಗಿದೆ. ಬ್ರಿಟಿಷರ ಕಾಲದಲ್ಲಿ ಈ ಗಿರಿಧಾಮ ಆಂಗ್ಲರ ಪಾಲಿಗೆ ಕಾಶ್ಮೀರವಾಗಿತ್ತು. ಈ ಗಿರಿಧಾಮದ ಪ್ರಕೃತಿ ಸೌಂದರ್ಯ, ಹವಾಮಾನ ವೈಶಿಷ್ಟ್ಯಕ್ಕೆ ಮನಸೋತ ಮೈಸೂರು ಅರಸ ಕೃಷ್ಣರಾಜೇಂದ್ರ ಒಡೆಯರ್ ಅವರು ಇದನ್ನು ಗಿರಿಧಾಮವಾಗಿ ರೂಪುಗೊಳಿಸಲು ನಿರ್ಧರಿಸಿ 1932ರಲ್ಲಿ ಇಲ್ಲಿ ದತ್ತಾತ್ರೇಯ ಭವನ ನಿರ್ಮಿಸಿದ್ದರು. ಕಡು ಬೇಸಿಗೆ ಅವಧಿಯಲ್ಲಿ ಅವರು ಇಲ್ಲಿಗೆ ಬಂದು ತಂಗುತ್ತಿದ್ದರು. ಈ ಕಾರಣಕ್ಕೆ ಕೆಮ್ಮಣ್ಣುಗುಂಡು ಗಿರಿಧಾಮವನ್ನು ಶ್ರೀಕೃಷ್ಣ ರಾಜೇಂದ್ರ ಗಿರಿಧಾಮ ಎಂದೇ ಕರೆಯಲಾಗುತ್ತಿದೆ.

ಕೃಷ್ಣರಾಜೇಂದ್ರ ಒಡೆಯರ್ ಬಳಿಕ ಅಧಿಕಾರಕ್ಕೆ ಬಂದ ಜಯಚಾಮ ರಾಜೇಂದ್ರ ಒಡೆಯರ್ ಅವರು 1942ರಲ್ಲಿ ಈ ಗಿರಿಧಾಮದವನ್ನು ತೋಟಗಾರಿಕೆ ಇಲಾಖೆ ಸುರ್ಪದಿಗೆ ನೀಡಿದ್ದು, ಈ ಇಲಾಖೆಯೇ ಗಿರಿಧಾಮವನ್ನು ನಿರ್ವಹಣೆ ಮಾಡುತ್ತಿತ್ತು. 1942ರ ಬಳಿಕ ಇಲ್ಲಿಗೆ ಸಾರ್ವಜನಿಕರಿಗೂ ಮುಕ್ತ ಅವಕಾಶ ನೀಡಲಾಯಿತು. ಅಂದಿನಿಂದ ಮೊನ್ನೆಮೊನ್ನೆಯವರೆಗೂ ಶ್ರೀಕೃಷ್ಣರಾಜೇಂದ್ರ ಗಿರಿಧಾಮವನ್ನು ತೋಟಗಾರಿಕೆ ಇಲಾಖೆಯೇ ನಿರ್ವಹಣೆ ಮಾಡಿಕೊಂಡು ಬರುತ್ತಿತ್ತು. ತೋಟಗಾರಿಕೆ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಣೆಯಾಗುತ್ತಿದ್ದ ಕೆಮ್ಮಣ್ಣುಗುಂಡಿ ಗಿರಿಧಾಮವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇತ್ತೀಚೆಗೆ ಮಂಡಿಸಿದ ಬಜೆಟ್‍ನಲ್ಲಿ ನಿರ್ವಹಣೆ ಹೊಣೆಯನ್ನು ಪ್ರವಾಸೋದ್ಯಮ ಇಲಾಖೆಗೆ ವರ್ಗಾಹಿಸಿದ್ದು, ಈ ಇಲಾಖೆ ಮೂಲಕ ಗಿರಿಧಾಮಕ್ಕೆ ಹೈಟೆಕ್‍ ಸ್ಪರ್ಶ ನೀಡಿ ಪ್ರವಾಸಿಗರನ್ನು ಸೆಳೆಯುವ ಯೋಜನೆ ರೂಪಿಸಲಾಗುತ್ತಿದೆ.

ತೋಟಗಾರಿಕೆ ಇಲಾಖೆ ತೋಟಗಾರಿಕಾ ಬೆಳೆಗಳಿಗೆ ಸಂಬಂಧಿತ ಇಲಾಖೆಯಾಗಿದ್ದರಿಂದ ಇಲಾಖೆಗೆ ನೀಡಿದ ಅನುದಾನದಲ್ಲಿ ಸಿಂಹಪಾಲು ತೋಟಗಾರಿಕೆ ಬೆಳೆಗಳಿಗೆ ವಿನಿಯೋಗವಾಗುತ್ತಿದ್ದರಿಂದ ಗಿರಿಧಾಮದ ಅಭಿವೃದ್ಧಿ ನಿರೀಕ್ಷಿತ ಪ್ರಮಾಣದಲ್ಲಿ ಆಗಲೇ ಇಲ್ಲ. ಗಿರಿಧಾಮಕ್ಕೆ ಹೈಟೆಕ್ ಸ್ಪರ್ಶ ನೀಡಿ ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ಕೇಂದ್ರ ಮಾಡುವಂತಹ ಎಲ್ಲ ಅವಕಾಶಗಳಿದ್ದರೂ ಅನುದಾನದ ಕೊರತೆಯ ಕಾರಣಕ್ಕೆ ಗಿರಿಧಾಮ ವಿದೇಶಿ ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫಲವಾಗಿತ್ತು.

ಊಟಿ, ಕೆಮ್ಮಣ್ಣಗುಂಡಿ ಹಾಗೂ ನಂದಿಬೆಟ್ಟ ಸೇರಿದಂತೆ ರಾಜ್ಯದಲ್ಲಿ ನಿರ್ಮಾಣವಾಗಿರುವ ಉದ್ಯಾನವನಗಳ ನಿರ್ವಹಣೆ ತೋಟಗಾರಿಕೆ ಇಲಾಖೆಯ ಹೆಗಲ ಮೇಲಿತ್ತು. ತೋಟಗಾರಿಕೆ ಇಲಾಖೆಯಡಿಯಲ್ಲಿ ಕೆಮ್ಮಣ್ಣುಗುಂಡಿ ಅಭಿವೃದ್ಧಿಗೆ ಕಡಿಮೆ ಅನುದಾನ ನೀಡುತ್ತಿದ್ದರಿಂದ ಈ ಅನುದಾನ ಗಿರಿಧಾಮದ ಗೆಸ್ಟ್ ಹೌಸ್ ಹೌಸ್‍ಕೀಪಿಂಗ್‍ಗೆ, ಉದ್ಯಾನವನದ ನಿರ್ವಹಣೆಗೂ ಸಾಲದಂತಾಗಿತ್ತು. ಈ ಪ್ರದೇಶ ಪ್ರಾಕೃತಿಕವಾಗಿ ಬಹಳಷ್ಟು ವಿಭಿನ್ನವಾಗಿದ್ದು, ಮಳೆಗಾಲದ ಅವಧಿಯಲ್ಲಿ 100ಮಿ.ಮೀ.ಗಿಂತ ಹೆಚ್ಚು ಮಳೆಯಾಗುತ್ತಿದ್ದರಿಂದ ಹಾಗೂ ಚಳಿಗಾಲದಲ್ಲಿ ಅತ್ಯಂತ ಚಳಿ ಪ್ರದೇಶವಾಗಿರುವುದರಿಂದ ಇಲ್ಲಿನ ಉದ್ಯಾನವನದ ನಿರ್ವಹಣೆ ಬಹಳಷ್ಟು ಕಷ್ಟಕರವಾಗಿತ್ತು. ಚಳಿಗಾಳಿಗೆ ಉದ್ಯಾನವನದ ಶೇ.50ರಷ್ಟು ಗಿಡಗಳು ಸತ್ತು ಹೋಗುತ್ತಿದ್ದವು. ಇದರಿಂದ ಪ್ರತೀ ವರ್ಷ 8ರಿಂದ 10ಲಕ್ಷ ಸಸಿಗಳನ್ನು ಖರೀದಿ ಮಾಡಿ ಹೊಸದಾಗಿ ಉದ್ಯಾನವನ ನಿರ್ಮಾಣ ಮಾಡುವಂತಹ ಪರಿಸ್ಥತಿ ಇಲ್ಲಿತ್ತು. ಪ್ರವಾಸಿಗರು ಗಿರಿಧಾಮದಲ್ಲಿ ತಂಗಲು ಇಲ್ಲಿ ಹಿಂದೆ ಕಾಟೇಜ್‍ಗಳನ್ನು ನಿರ್ಮಿಸಿದ್ದು, ಸದ್ಯ ಅವು ಶಿಥಿಲಾವಸ್ಥೆಯಲ್ಲಿವೆ. ಅನುದಾನದ ಕೊರತೆಯಿಂದಾಗಿ ಗಿರಿಧಾಮಕ್ಕೆ ಮೂಲಭೂತ ಸೌಲಭ್ಯ ಸೇರಿದಂತೆ ಆಧನಿಕತೆ ತಕ್ಕಂತೆ ಅಭಿವೃದ್ಧಿ ಮಾಡಲು ಸಾಧ್ಯವಾಗಿರಲಿಲ್ಲ. ಈ ಎಲ್ಲ ಕಾರಣಗಳನ್ನು ಮನಗಂಡ ರಾಜ್ಯ ಸರಕಾರ ಕೃಷ್ಣರಾಜೇಂದ್ರ ಗಿರಿಧಾಮದ ನಿರ್ವಹಣೆಯನ್ನು ಸದ್ಯ ತೋಟಗಾರಿಕೆ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ ಮಾಡಿದ್ದು, ಪ್ರವಾಸೋದ್ಯಮ ಇಲಾಖೆ ಈ ಗಿರಿಧಾಮಕ್ಕೆ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿದೆ.

ಕೆಮ್ಮಣ್ಣಗುಂಡಿ ಗಿರಿಧಾಮ ನವೀಕರಣ, ಅಭಿವೃದ್ಧಿ ಹೊಣೆಯನ್ನು ಸರಕಾರ ಜಗಲ್‍ಲಾಡ್ಜ್ ಮತ್ತು ಪ್ರವಾಸೋದ್ಯಮ ನಿಗಮಕ್ಕೆ ವಹಿಸಿದ್ದು, ಪ್ರವಾಸೋದ್ಯಮ ಇಲಾಖೆ ಈಗಾಗಲೇ ಇಲ್ಲಿ ಸರ್ವೇಕಾರ್ಯ ನಡೆಸಿ ವಸತಿ ಗೃಹಗಳ ನವೀಕರಣ, ರಸ್ತೆ ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆ, ನಿರಂತರ ವಿದ್ಯುತ್ ಪೂರೈಕೆ, ಬ್ಯಾಟರಿ ಚಾಲಿತ ಕಾರು, ವಾಹನ ನಿಲುಗಡೆ ವ್ಯವಸ್ಥೆ ಸೇರಿದಂತೆ ತುರ್ತು ಕಾಮಗಾರಿಗಳ ಪಟ್ಟಿಯನ್ನು ಸರಕಾರಕ್ಕೆ ರವಾನಿಸಿದೆ. ತಜ್ಞರ ಸಮಿತಿ ಅವಲೋಕನ ನಡೆಸಿ ಅಲ್ಲಿನ ವಾತಾವರಣಕ್ಕೆ ಪೂರಕವಾದ ಕಾಟೇಜ್‍ಗಳ ನಿರ್ಮಾಣಕ್ಕೆ ಸಿದ್ಧತೆ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಕೆಮ್ಮಣ್ಣಗುಂಡಿಯನ್ನು ಹೈಟೆಕ್ ಗಿರಿಧಾಮವನ್ನಾಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕ್ಕೆ ಮುಂದಾಗಿದ್ದು, ಅಂತರಾಷ್ಟ್ರೀಯ ಮಟ್ಟದ ಪ್ರವಾಸೋದ್ಯಮ ಕೇಂದ್ರವನ್ನಾಗಿಸಲು ಸಿದ್ಧತೆ ನಡೆಸಿದೆ. ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ರಾಜ್ಯದಲ್ಲಿ ಗೋಲ್ಡನ್ ಚಾರಿಯೇಟ್ ರೈಲೈ ಆರಂಭಿಸಿದ್ದು, ಈ ರೈಲು ಇತ್ತೀಚೆಗೆ ಜಿಲ್ಲೆಗೂ ಪ್ರವೇಶ ಪಡೆದುಕೊಂಡಿದೆ. ಕೊರೋನ ಸಮಸ್ಯೆ ಉಲ್ಬಣಗೊಳ್ಳದಿದ್ದಲ್ಲಿ 2021 ಅಕ್ಟೋಬರ್ ನಿಂದ ಈ ರೈಲು ವಿದೇಶಿ ಪ್ರವಾಸಿಗರನ್ನು ಜಿಲ್ಲೆಗೂ ಕರೆತರಲಿದೆ. ಒಟ್ಟಾರೆ ರಾಜ್ಯ ಸರಕಾರ ಕೆಮ್ಮಣ್ಣುಗುಂಡಿ ಗಿರಿಧಾಮವನ್ನು ಪ್ರವಾಸೋದ್ಯಮ ಇಲಾಖೆ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಗಿರಿಧಾಮವನ್ನಾಗಿಸುವ ಇರಾದೆ ಹೊಂದಿದೆ.

ಕೆಮ್ಮಣ್ಣಗುಂಡಿಯಲ್ಲಿರುವ ಕಾಟೇಜ್ ಮರುನವೀಕರಣ, ರಸ್ತೆ, ಕುಡಿಯುವ ನೀರು, ನಿರಂತರ ವಿಧ್ಯುತ್, ಬ್ಯಾಟರಿ ಚಾಲಿತ ಕಾರು, ವಾಹನ ನಿಲುಗಡೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಪ್ರವಾಸೋದ್ಯಮ ಇಲಾಖೆಯಿಂದ ಸರ್ವೇ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ಕೆಮ್ಮಣ್ಣುಗುಂಡಿ ಗಿರಿಧಾಮವನ್ನು ಜಂಗಲ್ ಲಾಡ್ಜ್ ನಿಗಮಕ್ಕೆ ಹಸ್ತಾಂತರಿಸಲಾಗಿದ್ದು, ಗಿರಿಧಾಮದಲ್ಲಿ ಹಾಲಿ ಇರುವ ಕಾಟೇಜ್‍ಗಳ ದುರಸ್ತಿ ಕಾರ್ಯವನ್ನು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ತಜ್ಞರ ತಂಡ ಭೇಟಿ ನೀಡಿ ಗಿರಿಧಾಮದ ವಾತಾವರಣಕ್ಕೆ ಪೂರಕವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಿದೆ.
-ಆರ್.ಶಿವಕುಮಾರ್, ಪ್ರವಾಸೋದ್ಯಮ ಇಲಾಖೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News