ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿಯಾದ 60 ಬಿಜೆಪಿ ಶಾಸಕರು

Update: 2021-03-25 17:34 GMT

ಬೆಂಗಳೂರು, ಮಾ.25: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ಸುಮಾರು 60 ಮಂದಿ ಬಿಜೆಪಿ ಶಾಸಕರು, ತಮ್ಮ ತಮ್ಮ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ಅಲ್ಲದೆ, ಕೆಲವು ಸಚಿವರು ತೋರುತ್ತಿರುವ ಅಸಹಕಾರದ ಬಗ್ಗೆಯೂ ದೂರುಗಳನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಆಡಳಿತ ಪಕ್ಷದ ಶಾಸಕರಾಗಿದ್ದರೂ ತಮ್ಮ ಮನವಿಗಳಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಯ ಸಚಿವರು ನಿರ್ದಿಷ್ಟ ಜಿಲ್ಲೆಗಳಿಗೆ ಸೀಮಿತವಾಗಿದ್ದಾರೆ. ಇದರಿಂದ, ನಮ್ಮ ಕ್ಷೇತ್ರಗಳಲ್ಲಿನ ಕೆಲಸಗಳು ಆಗುತ್ತಿಲ್ಲ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಶಾಸಕರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಶಾಸಕರು ತಮ್ಮ ಕ್ಷೇತ್ರದ ಕೆಲವು ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ನನ್ನನ್ನು ಭೇಟಿ ಮಾಡಿದ್ದರು. ನಮ್ಮ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಶಾಸಕರ ಸಭೆ ಕರೆಯುವಂತೆ ಹೇಳಿದ್ದರು. ಅದರಂತೆ, ಇವತ್ತು ಶಾಸಕರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗಿದೆ ಎಂದರು.

ಮೊನ್ನೆ ಸುಮಾರು 25 ಜನ ಶಾಸಕರು ಬಂದು ತಮ್ಮ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದರು. ಇವತ್ತು ಸುಮಾರು 60 ಜನ ಶಾಸಕರು ಬಂದಿದ್ದರು. ಅವರ ಕ್ಷೇತ್ರಗಳ ಸಮಸ್ಯೆಗಳ ಜೊತೆಗೆ ಈಗ ಘೋಷಣೆಯಾಗಿರುವ ಮೂರು ವಿಧಾನಸಭಾ ಕ್ಷೇತ್ರಗಳು ಹಾಗೂ ಒಂದು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಯಾವ ರೀತಿ ಶ್ರಮಿಸಬೇಕು ಎಂಬುದರ ಬಗ್ಗೆ ಸವಿಸ್ತಾರವಾಗಿ ಚರ್ಚೆ ಮಾಡಿದ್ದೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News