ನಾಳಿನ ಭಾರತ್ ಬಂದ್ ಬದಲು ಶವಯಾತ್ರೆ ಪ್ರತಿಭಟನೆ: ಕುರುಬೂರು ಶಾಂತಕುಮಾರ್

Update: 2021-03-25 18:07 GMT

ಮೈಸೂರು,ಮಾ.25: ಕೇಂದ್ರದ ಕೃಷಿ ವಿನಾಶ ಕಾಯ್ದೆ ಎಂಬ ರೈತರ ಮರಣಶಾಸನ ವಿರೋಧಿಸಿ ನಾಳಿನ ಭಾರತ್ ಬಂದ್ ಬದಲು ರಾಜ್ಯಾದ್ಯಂತ ಕೃಷಿ  ಕಾಯ್ದೆಗಳ ಶವಯಾತ್ರೆ ಪ್ರತಿಭಟನೆ ನಡೆಸುವುದಾಗಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ಕಳೆದ ಆರು ತಿಂಗಳಿಂದ ಕರ್ನಾಟಕದಲ್ಲಿ 3-4 ಬಾರಿ ಬಂದ್ ಆಚರಣೆ ಮಾಡಲಾಗಿದೆ. ಇದಕ್ಕೆ ರಾಜ್ಯದ ಜನರು ರೈತರು ಅಂದು ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಆದರೆ ಈ ಬಾರಿ ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಮಾ.26ರ ಭಾರತ್ ಬಂದ್ ಬಗ್ಗೆ ಪೂರ್ವಯೋಜಿತವಾಗಿ  ರಾಜ್ಯದ ಎಲ್ಲ ರೈತ, ಜನಪರ ಸಂಘಟನೆಗಳು ಚರ್ಚಿಸದೆ ಇರುವ ಕಾರಣ ಯಶಸ್ವಿ ಬಂದ್ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ. ನಾವು ರಾಜ್ಯದಲ್ಲಿ ಬಂದ್ ಕಾರ್ಯಕ್ರಮದ ಬದಲು ಎಲ್ಲಾ ಜಿಲ್ಲೆಯಲಿ ಕೃಷಿ ಕಾಯ್ದೆಗಳ ಶವಯಾತ್ರೆ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ. ರಾಷ್ಟ್ರೀಯ ಕಿಸಾನ್ ಸಂಯುಕ್ತ ಮೋರ್ಚಾ ಕರೆಯನ್ನು ಈ ರೀತಿಯಲ್ಲಿ ಕರ್ನಾಟಕದ ರೈತರು ಬೆಂಬಲಿಸಲಿದ್ದೇವೆ ಎಂದರು.

ಶಿವಮೊಗ್ಗದಲ್ಲಿ ನಡೆದ ಕಿಸಾನ್ “ಮಹಾಪಂಚಾಯತ್” ಸಭೆಯಲ್ಲಿ ಮಾತನಾಡಿದ ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವುದು ಖಂಡನೀಯ. ಪ್ರಜಾಸತ್ತಾತ್ಮಕ ಹೋರಾಟದ ದಮನಕಾರಿ ನೀತಿ ರೈತ ಚಳುವಳಿ ಪ್ರಬಲವಾಗುತ್ತಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ಸರ್ಕಾರ ವಾಮಮಾರ್ಗ ಮೂಲಕ ಚಳುವಳಿಯನ್ನು ಹತ್ತಿಕ್ಕಲು ಯತ್ನಿಸುತ್ತಿದೆ. ರಾಜ್ಯ ಸರ್ಕಾರ ಕೂಡಲೇ ಕ್ರಿಮಿನಲ್ ಮೊಕದ್ದಮೆ ವಾಪಸ್ ಪಡೆಯಬೇಕು. ಇದು ರಾಜ್ಯದ ರೈತರ ಹೋರಾಟವನ್ನು ಹತ್ತಿಕ್ಕುವ ಕಾರ್ಯವಾಗಿದೆ ಎಂದು ಕುರುಬೂರು ಶಾಂತಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News