×
Ad

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಬಳಕೆಯಲ್ಲಿ ಹಾಸನ ಪ್ರಥಮ, ಉಡುಪಿ ದ್ವಿತೀಯ

Update: 2021-03-25 23:38 IST

ಬೆಂಗಳೂರು, ಮಾ.25: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಬಳಕೆಯಲ್ಲಿ ಹಾಸನ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಶೇ.68ರಷ್ಟು ಅನುದಾನ ಬಳಕೆ ಮಾಡಿದ್ದಾರೆ. ಉಡುಪಿ ಎರಡನೆ ಸ್ಥಾನದಲ್ಲಿದ್ದು ಶೇ.63 ರಷ್ಟು ಅನುದಾನ ವೆಚ್ಚ ಮಾಡಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಾ.ನಾರಾಯಣಗೌಡ ಹರ್ಷ ವ್ಯಕ್ತಪಡಿಸಿದರು.

ಗುರುವಾರ ವಿಕಾಸಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಶೇ.61ರಷ್ಟು ಅನುದಾನ ಉಪಯೋಗಿಸಿರುವ ಚಿಕ್ಕಮಗಳೂರು 3ನೇ ಸ್ಥಾನದಲ್ಲಿದೆ. ಅತ್ಯುತ್ತಮ ಕೆಲಸ ಮಾಡಿರುವ ಜಿಲ್ಲಾಧಿಕಾರಿಗಳನ್ನು ಅಭಿನಂದಿಸಿದರು.

ಅಲ್ಲದೆ ಒಂದು ವರ್ಷದೊಳಗೆ ಇದೆ ರೀತಿಯಲ್ಲಿ ಕೆಲಸ ಮಾಡುವ ಜಿಲ್ಲಾಧಿಕಾರಿಗಳನ್ನು ವಿಧಾನಸೌಧಕ್ಕೆ ಕರೆದು ಗೌರವಿಸುತ್ತೇನೆ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಬಳಕೆಯಲ್ಲಿ ಮೊದಲ ಮೂರು ಸ್ಥಾನ ಪಡೆಯುವ ಜಿಲ್ಲಾಧಿಕಾರಿಗಳನ್ನು ಸನ್ಮಾನಿಸುತ್ತೇನೆ ಎಂದು ನಾರಾಯಣಗೌಡ ಹೇಳಿದರು.

ಶಾಸಕರ ಅನುದಾನ ಹೊರತುಪಡಿಸಿ, ಇಲಾಖೆಯಿಂದ ನೀಡಿರುವ ಅನುದಾನ ಪಿಡಿ ಖಾತೆಯಲ್ಲಿ ಇದ್ದು, ಅನುದಾನ ಬಳಕೆಗಾಗಿ 2017ರಲ್ಲೆ ಅನುಮೋದನೆ ನೀಡಲಾಗಿತ್ತು. ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾಮಗಾರಿ ನಡೆಸಲು ಅನುಮೋದನೆ ನೀಡಲಾಗಿತ್ತು. ಆದರೆ, ಇನ್ನೂ ಸಮರ್ಪಕ ರೀತಿಯಲ್ಲಿ ಬಳಕೆಯಾಗದಿರುವುದಕ್ಕೆ ಜಿಲ್ಲಾಧಿಕಾರಿಗಳ ಮೇಲೆ ಗರಂ ಆದ ಅವರು, ತಕ್ಷಣ ಕಾಮಗಾರಿ ಮುಗಿಸಿ, ವರದಿ ನೀಡಿ ಎಂದು ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದ ಅಡಿ ಎರಡು ವರ್ಷಗಳಿಂದ ಕಾಮಗಾರಿಗಳನ್ನೆ ಆರಂಭಿಸಿಲ್ಲ. ತಕ್ಷಣ ಕೆಲಸ ಆರಂಭವಾಗಬೇಕು. ಇಲ್ಲದಿದ್ದಲ್ಲಿ ಅಂತಹ ಕಾಮಗಾರಿಗಳನ್ನು ರದ್ದುಪಡಿಸಿ, ಹಣವನ್ನು ವಾಪಸ್ ಪಡೆಯುವುದಾಗಿ ನಾರಾಯಣಗೌಡ ಎಚ್ಚರಿಕೆ ನೀಡಿದರು.

ಕೊರೋನ ಕಾರಣದಿಂದ ಆರ್ಥಿಕ ಸಮಸ್ಯೆ ಇದೆ. ಆದುದರಿಂದ, ಜಿಲ್ಲಾಧಿಕಾರಿಗಳು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನಕ್ಕೆ ಅನುಮೋದನೆ ನೀಡುವಾಗ ಸರಕಾರದ ಮಾರ್ಗಸೂಚಿ ಪಾಲಿಸಬೇಕು. 2019-20ನೆ ಸಾಲಿಗೆ ಪ್ರತಿ ಶಾಸಕರ ಅನುದಾನದಲ್ಲಿ 2 ಕೋಟಿ ರೂ. ಗೆ ಮಾತ್ರ ಅನುಮೋದನೆ ನೀಡಬೇಕು. ಪ್ರಸಕ್ತ ಸಾಲಿಗೆ ಕೇವಲ 1 ಕೋಟಿ ರೂ. ಗೆ ಮಾತ್ರ ಅನುಮೋದನೆ ನೀಡಬೇಕೆಂದು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನ ಬಳಕೆಗೆ ಆಯಾ ಶಾಸಕರು ಕ್ರಿಯಾಯೋಜನೆ ನೀಡಬೇಕು. ಅದರ ಅನ್ವಯ ಪಿಡಿ ಖಾತೆಯಿಂದ ಅನುದಾನ ಬಿಡುಗಡೆಯಾಗುತ್ತದೆ. ಆದರೆ ಶಾಸಕರೇ ತಮ್ಮ ಕ್ಷೇತ್ರಕ್ಕೆ ಕೆಲಸ ಅನುದಾನ ಬಳಕೆ ಮಾಡಿಕೊಳ್ಳುವಲ್ಲಿ ಹಿಂದುಳಿದಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿಗಳು ನೀಡಿರುವ ಮಾಹಿತಿ ಅನ್ವಯ 2019-20ನೆ ಸಾಲಿನಲ್ಲಿ ಕೇವಲ 45 ಶಾಸಕರು ಮತ್ತು 6 ಜನ ವಿಧಾನಪರಿಷತ್ ಸದಸ್ಯರು ಕ್ರಿಯಾಯೋಜನೆ ಕೊಟ್ಟಿದ್ದಾರೆ. 2020-21ನೆ ಸಾಲಿನಲ್ಲೂ ಶಾಸಕರ ನಿರಾಸಕ್ತಿ ಮುಂದುವರೆದಿದೆ. 53 ಶಾಸಕರು, 8 ಜನ ವಿಧಾನಪರಿಷತ್ ಸದಸ್ಯರು ಮಾತ್ರ ಕ್ರಿಯಾಯೋಜನೆ ಕೊಟ್ಟಿದ್ದಾರೆ ಎಂದು ನಾರಾಯಣಗೌಡ ಬೇಸರ ವ್ಯಕ್ತಪಡಿಸಿದರು.

ಒಟ್ಟಾರೆಯಾಗಿ ರಾಜ್ಯದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಕೇವಲ ಶೇ.32 ರಷ್ಟು ಮಾತ್ರ ಬಳಕೆಯಾಗಿದೆ. ಎಪ್ರಿಲ್ ಅಂತ್ಯದೊಳಗೆ ಪ್ರಗತಿಯಲ್ಲಿರುವ ಎಲ್ಲ ಕಾಮಗಾರಿ ಮುಗಿಸಿ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನಾರಾಯಣಗೌಡ ಸೂಚನೆ ನೀಡಿದರು.

ವಿಡಿಯೋ ಕಾನ್ಫರೆನ್ಸ್‍ನಲ್ಲಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿ.ಪಂ.ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News