‘ಸಂತ್ರಸ್ತ ಯುವತಿ'ಗೆ ರಕ್ಷಣೆ ನೀಡದಿರುವುದು ಸರಕಾರದ ವೈಫಲ್ಯ: ಸಿದ್ದರಾಮಯ್ಯ ಆರೋಪ

Update: 2021-03-26 12:11 GMT

ಬೆಂಗಳೂರು, ಮಾ. 26: ‘ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಂದ ದೌರ್ಜನ್ಯಕ್ಕೆ ಒಳಗಾಗಿರುವ ಯುವತಿಗೆ ರಕ್ಷಣೆ ನೀಡುವಂತೆ ಗೃಹ ಸಚಿವರಿಗೆ ಹೇಳಿದ್ದೇನೆ. ಈ ಕುರಿತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಜೊತೆಗೂ ಮಾತನಾಡುತ್ತೇನೆ. ಯುವತಿ ಸೇರಿದಂತೆ ಎಲ್ಲ ಕನ್ನಡಿಗರಿಗೂ ರಕ್ಷಣೆ ನೀಡುವುದು ರಾಜ್ಯ ಸರಕಾರದ ಜವಾಬ್ದಾರಿ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.

ಶುಕ್ರವಾರ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಾನು ಗೃಹ ಸಚಿವರಿಗೆ ಮನವಿ ಮಾಡಿದ್ದರೂ ಯುವತಿಗೆ ರಕ್ಷಣೆ ನೀಡಿಲ್ಲ. ಇದು ಸರಕಾರದ ವೈಫಲ್ಯ. ಹೀಗಾಗಿ ಯುವತಿ ತನಗೆ ಹಾಗೂ ತನ್ನ ತಂದೆ, ತಾಯಿಗೆ ರಕ್ಷಣೆ ಕೇಳಿದ್ದಾರೆ. ವೀಡಿಯೋ ಮೂಲಕ ಹೇಳಿಕೆ ಬಿಡುಗಡೆ ಮಾಡುವ ಬದಲು ‘ಸಿಟ್' ಮುಂದೆ ಹಾಜರಾಗಿ ಹೇಳಿಕೆ ನೀಡುವಂತೆ ಸಂತ್ರಸ್ತ ಯುವತಿಗೆ ಸಲಹೆ ನೀಡುತ್ತೇನೆ ಎಂದರು.

ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ: ‘ನನ್ನ ಬಳಿ ಇರುವ ದಾಖಲೆಗಳನ್ನು ಬಿಡುಗಡೆ ಮಾಡಿದರೆ ‘ಮಹಾನಾಯಕ'ನಿಗೆ ಶಾಕ್ ಆಗುತ್ತದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರು ಹೇಳಿದ್ದಾರೆ. ಸದ್ಯ ಅವರಿಗೆ ಶಾಕ್ ಆಗದಿದ್ದರೆ ಸಾಕು. ಅವರ ಪ್ರಕಾರ ಮಹಾನಾಯಕರು ಯಾರು, ಶಾಕ್ ನೀಡುವಂಥ ದಾಖಲೆಗಳು ಅವರ ಬಳಿ ಏನಿದೆ ಎಂಬುದು ನನಗೆ ಗೊತ್ತಿಲ್ಲ' ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

‘ಒಂದು ವೇಳೆ ಅವರ ಬಳಿ ಸಾಕ್ಷ್ಯಾಧಾರ ಇದ್ದರೆ ದೂರು ನೀಡುವಾಗ ಏಕೆ ಆ ಅಂಶವನ್ನು ನಮೂದು ಮಾಡಿಲ್ಲ. ದಾಖಲೆಗಳನ್ನು ಮುಚ್ಚಿಡುವುದೂ ಅಪರಾಧವೇ ಆಗುತ್ತದೆ. ಮಹಾನಾಯಕರು ಬಿಜೆಪಿಯಲ್ಲಿ ಸಾಕಷ್ಟು ಮಂದಿ ಇದ್ದಾರೆ. ಕಾಂಗ್ರೆಸ್‍ನಲ್ಲಿ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸುಮ್ಮನೆ ಗುಮ್ಮ ತೋರಿಸುವುದು ಬೇಡ. ದಾಖಲೆಗಳಿದ್ದರೆ ಹೊರಗೆ ತರಲಿ. ಇಷ್ಟಕ್ಕೂ ರಮೇಶ್ ಜಾರಕಿಹೊಳಿಯವರಿಗೆ ಶಾಕ್ ಆಗಿದ್ದರೆ ಸಾಕು' ಎಂದು ಸಿದ್ದರಾಮಯ್ಯ ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News