ಸ್ಪೀಕರ್ ಒಂದು ಪಕ್ಷದ ಕಡೆ ವಹಿಸಿಕೊಂಡು ಮಾತನಾಡುವುದು ಸಲ್ಲ: ಸಿದ್ದರಾಮಯ್ಯ

Update: 2021-03-26 12:22 GMT

ಬೆಂಗಳೂರು, ಮಾ. 26: ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಪಕ್ಷದ ಬಗ್ಗೆ ಅಸಮಾಧಾನದ ಮಾತುಗಳನ್ನಾಡಿದ್ದಾರೆ. ಅವರು ಒಂದು ಪಕ್ಷದ ಒಂದು ಕಡೆ ವಹಿಸಿಕೊಂಡು ಮಾತನಾಡಿದಂತೆ ಕಾಣುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಪಕ್ಷಗಳ ಪಾತ್ರ ಬಹು ದೊಡ್ಡದು. ಸರಕಾರ ತಪ್ಪು ನಿರ್ಧಾರ, ಭ್ರಷ್ಟಾಚಾರ, ಅಭಿವೃದ್ಧಿಗೆ ವಿರುದ್ಧವಾದ ತೀರ್ಮಾನಗಳನ್ನು ಕೈಗೊಂಡರೆ ಬಯಲು ಮಾಡುವುದು, ಕಿವಿ ಹಿಂಡುವುದು ವಿಪಕ್ಷದ ಕೆಲಸ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಕಲಾಪವನ್ನು ದುರುಪಯೋಗಪಡಿಸಿಕೊಳ್ಳುವುದು, ಕಲಾಪ ನಡೆಯದಂತೆ ಮಾಡುವುದು ನಮ್ಮ ಉದ್ದೇಶವಲ್ಲ. ಸದನ ನಡೆಯಲು ನಾವು ಸಹಕಾರ ಕೊಟ್ಟಿದ್ದೇವೆ. ಬಜೆಟ್ ಮೇಲೆ ಭಾಷಣ ಮಾಡಿದ್ದೇನೆ. ಮೂರು ನಿಲುವಳಿ ಸೂಚನೆ ಮಂಡಿಸಿದ್ದೇನೆ. ನಮ್ಮ ಶಾಸಕರೂ ಬಜೆಟ್ ಮೇಲೆ ಮಾತನಾಡಿದ್ದಾರೆ. ಗಮನ ಸೆಳೆಯುವ ಸೂಚನೆಗಳನ್ನು ಮಂಡಿಸಿದ್ದಾರೆ. ಸದನದ ಸಮಯವನ್ನು ನಾವು ಸದುಪಯೋಗಪಡಿಸಿಕೊಂಡಿದ್ದೇವೆ ಎಂದರು.

ಸದನದ ಸಮಯವನ್ನು ನಾವು ಹಾಳು ಮಾಡಿದ್ದೇವೆ ಎಂಬುದು ಸರಿಯಲ್ಲ. ಸಿಡಿ ಪ್ರಕರಣ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಸ್ತು ಆಗಿರುವಾಗ ನಾವು ಸುಮ್ಮನೆ ಕೂರಲಾಗದು. ಸರಕಾರ ಸರಿಯಾಗಿ ಉತ್ತರ ಕೊಡದಿದ್ದಾಗ, ನಮ್ಮ ಬೇಡಿಕೆ ಈಡೇರಿಸದೆ ಇದ್ದಾಗ ಧರಣಿ ಮಾಡಿದ್ದೇವೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ಸಿಡಿ ಪ್ರಕರಣ ಕುರಿತು ತನಿಖೆ ನಡೆಯಬೇಕೆಂಬ ಬೇಡಿಕೆ ದೊಡ್ಡದೇನೂ ಅಲ್ಲ.

ಇಷ್ಟಕ್ಕೂ ಧರಣಿ ನಡೆಯುವಾಗ ವಿಧೇಯಕಗಳನ್ನು ಅಂಗೀಕಾರ ಮಾಡಿಕೊಂಡು ಹೋಗುವುದು ಯಾವ ಪ್ರಜಾಪ್ರಭುತ್ವ. ವಿಧಾನಸಭೆಯ ಸ್ಪೀಕರ್ ಕಾಗೇರಿ ಅವರು ಆಡಳಿತ ಪಕ್ಷಕ್ಕೆ ಬುದ್ಧಿ ಮಾತು ಹೇಳಬೇಕಿತ್ತು. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಕೆಲಸ ಮಾಡುತ್ತಿದ್ದೇವೆ. ಪ್ರತಿಪಕ್ಷದ ವಿರುದ್ಧ ಸ್ಪೀಕರ್ ಅಸಮಾಧಾನ ಸಲ್ಲ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಹೊಂದಾಣಿಕೆ ರಾಜಕೀಯ

ಬಸವಕಲ್ಯಾಣ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಸಮುದಾಯದವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಹೊಂದಾಣಿಕೆ ರಾಜಕಾರಣ. ಅಲ್ಪಸಂಖ್ಯಾತರ ಮತಗಳನ್ನು ವಿಭಜನೆ ಮಾಡುವುದು ಇದರ ಉದ್ದೇಶ. ಬಿಜೆಪಿ ಜೊತೆ ಜೆಡಿಎಸ್ ಕೈ ಜೋಡಿಸಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಜೆಡಿಎಸ್‍ನ ಈ ಹುನ್ನಾರವನ್ನು ಅರ್ಥ ಮಾಡಿಕೊಳ್ಳಿ ಎಂದು ಬಸವಕಲ್ಯಾಣ ಕ್ಷೇತ್ರದ ಜನತೆಯಲ್ಲಿ ಮನವಿ ಮಾಡುತ್ತೇನೆ.

-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

ಬಿಎಸ್‍ವೈ ನೆತ್ತಿ ಮೇಲೆ ತೂಗು ಕತ್ತಿ

ಸಮಸ್ಯೆಗಳನ್ನು ಆಲಿಸುವ ನೆಪದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪದೇ ಪದೇ ಶಾಸಕರ ಸಭೆ ಕರೆಯುತ್ತಿದ್ದಾರೆ. ಅವರ ನೆತ್ತಿಯ ಮೇಲೆ ಕತ್ತಿ ತೂಗಾಡುತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಪರದಾಡುತ್ತಿರುವ ಅವರು, ಶಾಸಕರ ಸಭೆಗಳ ಮೂಲಕ ಹೈಕಮಾಂಡ್‍ಗೆ ತಮ್ಮ ಶಕ್ತಿ ಏನು ಎಂಬುದನ್ನು ತೋರಿಸಲು ಹೊರಟಿದ್ದಾರೆ.

-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News