ಸಂತ್ರಸ್ತ ಯುವತಿ, ಆಕೆಯ ಕುಟುಂಬಕ್ಕೆ ರಕ್ಷಣೆ ನೀಡಲು ಸೂಚನೆ: ಗೃಹ ಸಚಿವ ಬೊಮ್ಮಾಯಿ
Update: 2021-03-26 17:54 IST
ಬೆಂಗಳೂರು, ಮಾ. 26: ‘ಸಿಡಿ ಪ್ರಕರಣ ಸಂತ್ರಸ್ತ ಯುವತಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ರಾಜ್ಯ ಸರಕಾರ ಸೂಕ್ತ ರೀತಿಯ ಭದ್ರತೆ ಕೊಡಲು ಸೂಚನೆ ನೀಡಿದೆ' ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯುವತಿ ಮೊದಲು ವಿಶೇಷ ತನಿಖಾ ತಂಡದ ಮುಂದೆ ಬಂದು ಕಾನೂನು ರೀತಿಯಲ್ಲಿ ದೂರು ನೀಡಬೇಕು. ಅವರ ಕುಟುಂಬದ ಸದಸ್ಯರಿಗೆ ಭದ್ರತೆ ನೀಡಲು ಸೂಚಿಸಿದ್ದೇವೆ. ಸಿಡಿ ಸಂತ್ರಸ್ತೆಗೂ ಭದ್ರತೆ ನೀಡಬೇಕೆಂದು ಕೇಳಿದರೆ ಅದನ್ನೂ ಕೊಡಲು ಸಿದ್ಧ ಎಂದು ವಿವರಣೆ ನೀಡಿದರು.
ಈಗಾಗಲೇ ಯುವತಿಗೆ 5 ನೋಟಿಸ್ ನೀಡಲಾಗಿದೆ. ಹೀಗಾಗಿ ಅವರಿಗೆ ಕಾನೂನು ರೀತಿಯಲ್ಲಿ ಏನು ಕ್ರಮವಿದೆಯೋ ಅದನ್ನು ಪಾಲಿಸಲಾಗುತ್ತದೆ. ಯುವತಿ ಎಲ್ಲಿ ಇದ್ದಾರೋ ಅಲ್ಲಿಗೆ ಹೋಗಿ ಹೇಳಿಕೆ ಪಡೆಯಲು ಹೇಳಿದರೆ ಅದಕ್ಕೂ ಅವಕಾಶ ಮಾಡಿ ಕೊಡಲಾಗುವುದು. ಈ ಹಿಂದೆಯೂ ಹೇಳಿದ್ದೆ ಈಗಲೂ ಹೇಳುತ್ತಿದ್ದೇನೆ ಎಂದು ತಿಳಿಸಿದರು.