ಸರಕಾರವನ್ನೇ ಪತನಗೊಳಿಸಿದ್ದೇನೆ, ಇದು ಯಾವ ಲೆಕ್ಕ: ಸಿಡಿ ಪ್ರಕರಣದ ಬಗ್ಗೆ ರಮೇಶ್ ಜಾರಕಿಹೊಳಿ
ಬೆಂಗಳೂರು, ಮಾ.26: ನಾನು ಹಿಂದಿನ ಮೈತ್ರಿಯ ಸರಕಾರವನ್ನೆ ಪತನಗೊಳಿಸಿದ್ದೇನೆ. ಇದು ಯಾವ ಲೆಕ್ಕ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ತಿಳಿಸಿದರು.
ಶುಕ್ರವಾರ ಯುವತಿಯ 3ನೆ ವಿಡಿಯೊ ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ಅನ್ಯಾಯವಾಗಿರುವ ಬಗ್ಗೆ ಮೊದಲು ದೂರು ನೀಡಿದ್ದು ನಾನು. ಹಾಗಾಗಿ ನನ್ನ ಎಫ್‍ಐಆರ್ ಕುರಿತು ಮೊದಲು ತನಿಖೆಯಾಗಬೇಕು. ಅಲ್ಲದೆ ಈ ರೀತಿಯ 10 ಸಿಡಿ ಬರಲಿ ನಾನು ಹೆದರುವುದಿಲ್ಲ. ನಾನು ಮಾನಸಿಕವಾಗಿ ತಯಾರಾಗಿದ್ದೇನೆ. ಮುಂದೆ ಕಾನೂನು ಹೋರಾಟವೂ ಮುಂದುವರಿಯಲಿದೆ ಎಂದು ನುಡಿದರು.
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ನನ್ನದು ಯಾವುದೇ ತಪ್ಪಿಲ್ಲ. ಯಾವುದೇ ರೀತಿಯ ಪ್ರಕರಣ ದಾಖಲಿಸಿ, ನಾನು ನಿರೀಕ್ಷಣಾ ಜಾಮೀನು ಪಡೆಯುವುದಿಲ್ಲ. ಅಲ್ಲದೆ, ಆಕೆ ಸಂತ್ರಸ್ತೆ ಆಗಿದ್ದರೆ ಮೊದಲೇ ದೂರು ಕೊಡಬೇಕಿತ್ತು. ಈಗ ಯಾಕೆ ದೂರು ಕೊಟ್ಟರು, ನಾನು ಎಲ್ಲದ್ದಕ್ಕೂ ಸಿದ್ಧನಿದ್ದು, ಈ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದು ಆರೋಪಿಸಿದರು.
ಬೆತ್ತಲೆ ಪ್ರದರ್ಶನ: ಜಗತ್ತಿಗೆ ಬೆತ್ತಲು ಪ್ರದರ್ಶನ ಮಾಡಿರುವವರ ಹೇಳಿಕೆಗೆ ಮಹತ್ವ ನೀಡುವುದು ಸರಿಯಲ್ಲ. ಅಲ್ಲದೆ, ಇದಕ್ಕೆ ನಾನು ಹೆದರುವುದಿಲ್ಲ. ಇದು ಅವರ ಕೊನೆ ಆಟ ಆಗಿದ್ದು, ನಾಳೆಯಿಂದ ನಮ್ಮ ಆಟ ಪ್ರಾರಂಭ ಮಾಡುತ್ತೇವೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.