ರೈತ ನಾಯಕ ರಾಕೇಶ್ ಟಿಕಾಯತ್ ವಿರುದ್ಧದ ಪ್ರಕರಣ ವಾಪಸ್ ಗೆ ದಸಂಸ ಆಗ್ರಹ

Update: 2021-03-26 14:20 GMT

ಬೆಂಗಳೂರು, ಮಾ. 26: ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು ಆರೋಪಿಸಿ ರಾಷ್ಟ್ರೀಯ ರೈತ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ರಾಜ್ಯ ಸರಕಾರ ಪೋಲೀಸರ ಮೂಲಕ ಮೊಕದ್ದಮೆ ಹೂಡಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮಿ ನಾರಾಯಣ ನಾಗವಾರ ಆಗ್ರಹಿಸಿದ್ದಾರೆ.

ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸರಕಾರ ಬುಡಮೇಲು ಮಾಡುತ್ತಿದೆ. ಈ ರೀತಿ ಮೊಕದ್ದಮೆ ಹೂಡುವ ಮೂಲಕ ರೈತ ಚಳವಳಿಗಾರರನ್ನು ಬೆದರಿಸುವ ತಂತ್ರ ಫಲಿಸುವುದಿಲ್ಲ. ಕೇಂದ್ರ ಸರಕಾರದ ಜನ ವಿರೋಧಿ ನೀತಿಯನ್ನು ಟೀಕಿಸಿದ ಸಾಹಿತಿ, ಕಲಾವಿದರ ಮೇಲೆ ಸಂಘ ಪರಿವಾರದವರ ಮೂಲಕ ದೂರು ಕೊಡಿಸಿ, ಅವರ ಆತ್ಮಸ್ಥೈರ್ಯ ಕುಗ್ಗಿಸುವ ಸಂಚು ರೂಪಿಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ರೈತ, ದಲಿತ, ಕಾರ್ಮಿಕ ಚಳವಳಿಗಾರರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯಲು ಹೊರಟಿರುವ ರಾಜ್ಯ ಸರಕಾರದ ವಿರುದ್ಧ ಚಳವಳಿ ರೂಪಿಸಲು ಮುಂದಿನ ವಾರ ದಸಂಸ ತೀರ್ಮಾನಿಸಲಿದೆ ಎಂದು ಎಚ್ಚರಿಸಿರುವ ಲಕ್ಷ್ಮಿ ನಾರಾಯಣ ನಾಗವಾರ, ರೈತ ವಿರೋಧಿ ಕಾಯ್ದೆಗಳನ್ನು ಕೇಂದ್ರ ಸರಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News