×
Ad

ರಾಕೇಶ್ ಟಿಕಾಯತ್ ವಿರುದ್ಧ ಪ್ರಕರಣ ದಾಖಲು ಸರಿಯಲ್ಲ: ಡಿ.ಕೆ.ಶಿವಕುಮಾರ್

Update: 2021-03-26 19:54 IST

ಬೆಂಗಳೂರು, ಮಾ.26: ರಾಷ್ಟ್ರೀಯ ರೈತ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ಪ್ರಚೋದನಕಾರಿ ಹೇಳಿಕೆ ಮಾಡಿದ ಅರೋಪದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿರುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಶುಕ್ರವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಕರೆ ನೀಡಿದ್ದ ಭಾರತ ಬಂದ್‍ಗೆ ನಮ್ಮ ಸಂಪೂರ್ಣ ಬೆಂಬಲ ನೀಡಿದ್ದೇವೆ. ರಾಕೇಶ್ ಟಿಕಾಯತ್ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಪ್ರಕರಣ ದಾಖಲು ಮಾಡಿದ್ದು ಸರಿಯಲ್ಲ ಎಂದರು.

ಬಿಜೆಪಿಯ ನಾಯಕರು ಕೊರೋನ ಸೇರಿದಂತೆ ಇನ್ನಿತರ ಸಂದರ್ಭಗಳಲ್ಲಿ ಯಾವ ಯಾವ ರೀತಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ, ಅವರ ವಿರುದ್ಧ ಯಾವ ಪ್ರಕರಣವನ್ನು ದಾಖಲು ಮಾಡಿಲ್ಲ. ಒಂದು ಸರಕಾರಕ್ಕೆ ಕನಿಷ್ಠ ಪರಿಜ್ಞಾನ ಇರಬೇಕು. ಹೋರಾಟಗಾರರ ನೈತಿಕ ಸ್ಥೈರ್ಯ ಕುಸಿಯುವಂತೆ ಯಾವ ಸರಕಾರವು ಮಾಡಬಾರದು ಎಂದು ಶಿವಕುಮಾರ್ ಹೇಳಿದರು.

ರವಿವಾರ ಬೆಳಗಾವಿಗೆ: ರವಿವಾರ ಸಂಜೆ ಬೆಳಗಾವಿಗೆ ಹೋಗುತ್ತಿದ್ದೇನೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೋಮವಾರ ಬೆಳಗ್ಗೆ ಬರುತ್ತಾರೆ. ನಾವಿಬ್ಬರೂ ಬೆಳಗಾವಿ ಉಪ ಚುನಾವಣೆಗೆ ನಮ್ಮ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಅಲ್ಲಿಂದ ಮಸ್ಕಿಗೆ ತೆರಳುತ್ತೇವೆ. ಮಂಗಳವಾರ ಬಸವಕಲ್ಯಾಣಕ್ಕೆ ಹೋಗುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.

ರವಿವಾರ ನಾನು ಬೆಳಗಾವಿಯಲ್ಲಿ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಉಸ್ತುವಾರಿ ವಹಿಸಿಕೊಂಡಿರುವ ಮುಖಂಡರು, ನಾಯಕರ ಜೊತೆ ಸಮಾಲೋಚನೆ ನಡೆಸಿ, ಅವರಿಗೆ ಜವಾಬ್ದಾರಿಗಳನ್ನು ವಹಿಸುತ್ತೇನೆ. ಎಲ್ಲ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿರುವಂತೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಚೀಲರ ಗ್ರಾಮದಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಬೆಂಬಲಿಗರ ನಡುವೆ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಡೆದಿರುವ ಮಾತಿನ ಚಕಮಕಿ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹುಡುಗರು ಮಾತನಾಡುತ್ತಾರೆ ಅಂತ ನಾವು ಪ್ರತಿಕ್ರಿಯೆ ಕೊಡಲು ಆಗಲ್ಲ ಎಂದರು.

ನಾನು ಏನು ಮಾಡಿದ್ದೇನೆ ಅನ್ನೋದು ನನ್ನ ಕ್ಷೇತ್ರದ ಜನರ ಕಣ್ಣಿಗೆ ಗೊತ್ತಿದೆ. ಕಿವಿಯಲ್ಲಿ ಕೇಳುವುದು ಸುಳ್ಳು, ಕಣ್ಣಿನಲ್ಲಿ ನೋಡೋದು ಸತ್ಯ ಎಂಬಂತೆ, ನಾನು ಆ ಏನು ಮಾಡಿದ್ದೇನೊ, ಬಿಟ್ಟಿದ್ದೇನೊ ಅನ್ನೋದು ಆ ತಾಲೂಕಿನ ಜನತೆ ಗುರುತಿಸುತ್ತಾರೆ ಎಂದು ಶಿವಕುಮಾರ್ ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News