ರೈತ ಕಾಯ್ದೆಗಳ ರದ್ದತಿ, ಮೈಷುಗರ್ ಕಾರ್ಖಾನೆ ಆರಂಭಕ್ಕೆ ಆಗ್ರಹಿಸಿ ಮಂಡ್ಯದಲ್ಲಿ ಯುವ ಕಾಂಗ್ರೆಸ್ ಧರಣಿ

Update: 2021-03-26 14:27 GMT

ಮಂಡ್ಯ, ಮಾ.26: ಕೇಂದ್ರ ಮತ್ತು ರಾಜ್ಯ ಸರಕಾರದ ರೈತ ಕಾಯ್ದೆಗಳ ರದ್ದು, ಇಂಧನ ದರ ಇಳಿಕೆ ಹಾಗೂ ಮಂಡ್ಯ ಜಿಲ್ಲೆಯ ಜೀವನಾಡಿ ಮೈಷುಗರ್ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಿ ಯುವ ಕಾಂಗ್ರೆಸ್ ವತಿಯಿಂದ ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಮೈಷುಗರ್ ಕಾರ್ಖಾನೆ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಎತ್ತಿನಗಾಡಿ, ಟ್ರ್ಯಾಕ್ಟರ್ ಮೆರವಣಿಗೆ ನಡೆಸಿದ ಕಾಂಗ್ರೆಸ್ ನ ಎಲ್ಲಾ ವಿಭಾಗಗಳ ಮುಖಂಡರು ಮತ್ತು ಕಾರ್ಯಕರ್ತರು, ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳು ರೈತ, ಕಾರ್ಮಿಕ, ಜನವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತ ಕಾರ್ಪೋರೇಟ್ ಪರವಾಗಿ ನಿಂತಿವೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಇಳಿದಿದ್ದರೂ ಪೆಟ್ರೋಲ್, ಡೀಸಲ್, ಗ್ಯಾಸ್ ದರವನ್ನು ದುಪ್ಪಟ್ಟು ಏರಿಸಿ ಜನಸಾಮಾನ್ಯರನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ಅವರು ಕಿಡಿಕಾರಿದರು.

ಸರಕಾರಿ ಸ್ವಾಮ್ಯದ ಏಕೈಕ ಮೈಷುಗರ್ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡು ಹಲವು ವರ್ಷಗಳೇ ಕಳೆದಿವೆ. ಸರಕಾರ ಅನುದಾನ ನೀಡಿ ಆರಂಭಿಸುವ ಬದಲು ಗುತ್ತಿಗೆ ನೆಪದಲ್ಲಿ ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಿದೆ ಎಂದು ಅವರು ಕಿಡಿಕಾರಿದರು.

ಮಾಜಿ ಸಚಿವ ಎನ್.ಚಲುವರಾಸ್ವಾಮಿ ಮಾತನಾಡಿ, ಮೈಷುಗರ್ ಆರಂಭಿಸುವುದಾಗಿ ಹೇಳಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಈಗ 40 ವರ್ಷ ಗುತ್ತಿಗೆ ನೀಡುವ ನೆಪದಲ್ಲಿ ಮಾರಾಟ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಕೃಷಿ ಕಾಯ್ದೆ ವಿರುದ್ಧ ದೆಹಲಿಯಲ್ಲಿ ಮಳೆ, ಬಿಸಿಲು, ಚಳಿಯಲ್ಲಿ ಪ್ರತಿಭಟಿಸುತ್ತಿರುವ ರೈತರ ಬಗ್ಗೆ ಕನಿಷ್ಠ ಕೃತಜ್ಞತೆ ಇಲ್ಲದ ಪ್ರಧಾನಿ ಮೋದಿ ಅವರಿಗೆ ಯಾವ ಭಾಷೆಯಲ್ಲಿ ಉತ್ತರ ಕೊಡಬೇಕು ಎಂದು ಅವರು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಲೀಟರ್ ಹಾಲಿಗೆ 5 ರೂ. ಸಬ್ಸಿಡಿ ನೀಡುವ ಮೂಲಕ ಒಬ್ಬ ರೈತರಿಗೆ ವರ್ಷಕ್ಕೆ ಸುಮಾರು 60 ಸಾವಿರ ಕೊಟ್ಟಿತು. ನರೇಂದ್ರ ಮೋದಿ ಕೇವಲ 6 ಸಾವಿರ ನೀಡುತ್ತಿದೆ. ರೈತ ಪರ ಬಿಜೆಪಿಯೋ, ಕಾಂಗ್ರೆಸ್ಸೋ ಎಂಬುದನ್ನು ಜನತೆ ಚಿಂತಿಸಬೇಕು ಎಂದು ಚಲುವರಾಯಸ್ವಾಮಿ ಮನವಿ ಮಾಡಿದರು.

ಜನಸಾಮಾನ್ಯರು ಸಂಕಷ್ಟ ಸ್ಥಿತಿಯಲ್ಲಿರುವ ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು 8.5 ಸಾವಿರ ಕೋಟಿ ಬೆಲೆಯ ವಿಮಾನ, 45 ಕೋಟಿ ರೂ. ದರದ ಐಷಾರಾಮಿ ಕಾರು ಖರೀದಿಸಬೇಕಿತ್ತೆ ಎಂದು ಅವರು ತರಾಟೆಗೆ ತೆಗೆದುಕೊಂಡರು.

ಮಾಜಿ ಸಚಿವ ನರೇಂದ್ರಸ್ವಾಮಿ ಮಾತನಾಡಿ, ಬಿಜೆಪಿಯಂತಹ ಜನವಿರೋಧಿ ಸರಕಾರವನ್ನು ದೇಶ ಈ ಹಿಂದೆ ಕಂಡಿರಲಿಲ್ಲ ಎಂದು ಟೀಕಿಸಿದರು.

ಮಾಜಿ ಸಂಸದ ಡಾ.ಜಿ.ಮಾದೇಗೌಡ, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಕ್ಷಾ ರಾಮಯ್ಯ, ಜಿಲ್ಲಾಧ್ಯಕ್ಷ ಎಚ್.ಬಿ.ವಿಜಯಕುಮಾರ್, ಮಾಜಿ ಸಚಿವ ಆತ್ಮಾನಂದ, ರವಿಕುಮಾರ್ ಗಣಿಗ, ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿಡ.ಡಿ.ಗಂಗಾಧರ್, ಮಹಿಳಾಧ್ಯಕ್ಷೆ ಅಂಜನಾ, ವಿಜಯಲಕ್ಷ್ಮಿ, ಸಿ.ಎಂ.ದ್ಯಾವಪ್ಪ, ಎಂ.ಡಿ.ಜಯರಾಂ, ಸತೀಶ್ ಸಿದ್ದರೂಢ, ದೀಪಕ್, ಪಲ್ಲವಿ, ರಶ್ಮಿ ಶಿವಕುಮಾರ್, ಸಂತೋಷ್, ಗುಣವಂತ, ಶಿವಕುಮಾರಿ, ಶ್ರೀಧರ್, ಹಿತೇಶ್, ವಿನಯ್ಕುಮಾರ್, ಪ್ರಗತಿಪರ ಹೋರಾಟಗಾರ ಎಂ.ಬಿ.ನಾಗಣ್ಣಗೌಡ, ಇತರ ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News