ಕೃಷಿ ಕಾಯ್ದೆಗಳ ವಿರುದ್ಧ ರೈತರ ಆಕ್ರೋಶ: ರಾಜ್ಯದ ಹಲವೆಡೆ 'ಶವಯಾತ್ರೆ' ನಡೆಸಿ ಪ್ರತಿಭಟನೆ

Update: 2021-03-26 14:54 GMT

ಬೆಂಗಳೂರು, ಮಾ.26: ಕೇಂದ್ರ ಸರಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಹೋರಾಟ ಸಮಿತಿಯು ಕರೆ ನೀಡಿರುವ ಮುಷ್ಕರ ಬೆಂಬಲಿಸಿ ರೈತ ನಾಯಕರು ರಾಜ್ಯದಾದ್ಯಂತ ‘ಕೃಷಿ ಕಾಯ್ದೆಗಳ ಶವಯಾತ್ರೆ’ ನಡೆಸಿ ಆಕ್ರೋಶ ಹೊರಹಾಕಿದರು. ಇದರ ನಡುವೆ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧೆಡೆ ಪ್ರತಿಭಟನಾನಿರತರನ್ನು ಪೊಲೀಸರು ಬಂಧಿಸಿದರು.

ಶುಕ್ರವಾರ ರೈತ, ಕಾರ್ಮಿಕ, ದಲಿತ ಹಾಗೂ ಜನಪರ ಸಂಘಟನೆಗಳ ಕಾರ್ಯಕರ್ತರು ಹೊಸದಿಲ್ಲಿಯ ರೈತರ ಹೋರಾಟ ಬೆಂಬಲಿಸಿ ಬೆಂಗಳೂರಿನ ಪುರಭವನದಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆಗಳ ಅಣಕು ಶವಯಾತ್ರೆ ನಡೆಸಲು ನಿರ್ಧರಿಸಿದ್ದರು. ಆದರೆ, ಪೊಲೀಸರು ಯಾವುದೇ ರೀತಿಯ ಬಂದ್, ಪ್ರತಿಭಟನೆ ಹಾಗೂ ಮೆರವಣಿಗೆಗೆ ಅನುಮತಿ ನಿರಾಕರಿಸಿದ ಘಟನೆ ಜರುಗಿತು. ಆದರೂ, ರೈತರು ಪ್ರತಿಭಟನೆ ಆರಂಭಿಸಲು ಮುಂದಾದರು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಅನುಮತಿ ಇಲ್ಲದೆ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಹೇಳಿದರು.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು, ಪ್ರತಿಭಟನೆಗೆ ಮುಂದಾದರು. ಈ ಸಂದರ್ಭದಲ್ಲಿ ಪೊಲೀಸರು ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಬೈಯ್ಯಾರೆಡ್ಡಿ, ಕಾರ್ಮಿಕ ಮುಖಂಡರಾದ ವರಲಕ್ಷ್ಮೀ ಸೇರಿದಂತೆ ವಿವಿಧ ಸಂಘಟನೆಗಳ 50ಕ್ಕೂ ಹೆಚ್ಚು ಮುಖಂಡರನ್ನು ವಶಕ್ಕೆ ಪಡೆದು ಕರೆದೊಯ್ದರು.

ಈ ವೇಳೆ ಪ್ರತಿಕ್ರಿಯಿಸಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಪ್ರತಿಭಟನೆ ಹತ್ತಿಕ್ಕುವುದು ಪ್ರಜಾಪ್ರಭುತ್ವ ವಿರೋಧಿ ಕಾರ್ಯವಾಗಿದೆ. ಜನ ಪ್ರತಿಭಟನೆ ಮಾಡುವುದು ಅವರ ಹಕ್ಕು. ಆದರೆ, ಸರಕಾರ ಈ ಹೋರಾಟಗಳನ್ನು ಹತ್ತಿಕ್ಕಿ ಜನರ ಹಕ್ಕನ್ನು ಕಸಿದುಕೊಳ್ಳಲು ಮುಂದಾಗಿದೆ. ಹೀಗಾಗಿ ಸರಕಾರದ ಮೇಲಿದ್ದ ನಿರೀಕ್ಷೆ ಹುಸಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಜಾಪ್ರಭುತ್ವದ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ, ರಾಜ್ಯ ಸರಕಾರ ನಿರಂತರವಾಗಿ ಪ್ರತಿಭಟನೆಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ದೇಶದಲ್ಲಿ ಪೆಟ್ರೋಲ್-ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ದರ ಗಗನಕ್ಕೇರಿದೆ. ಈ ಬೆಲೆ ಏರಿಕೆಗೆ ಪರಿಹಾರ ಹುಡುಕಲು ಮುಂದಾಗದ ಕೇಂದ್ರ ಹಾಗೂ ರಾಜ್ಯ ಸರಕಾರ, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿವೆ ಎಂದು ವಾಗ್ದಾಳಿ ನಡಸಿದರು.

ಮತ್ತೊಂದೆಡೆ ಬೆಳಗಾವಿ, ಮೈಸೂರು, ಬಿಜಾಪುರ, ಕಲಬುರ್ಗಿ ಸೇರಿದಂತೆ ಜಿಲ್ಲಾವಾರು ಕೇಂದ್ರಗಳಲ್ಲಿ ರೈತರು ಪ್ರತಿಭಟನೆ ನಡೆಸಿ, ಕೇಂದ್ರ ಸರಕಾರ ಕೃಷಿ ವಿರೋಧಿ ಕಾಯ್ದೆಗಳನ್ನು ಈ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಬಿಗಿ ಪೊಲೀಸ್ ಬಂದೋಬಸ್ತ್

ರೈತರ ಮುಷ್ಕರ ಹಿನ್ನೆಲೆ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪ್ರಮುಖವಾಗಿ ಪುರಭವನ, ಮೈಸೂರು ಬ್ಯಾಂಕ್ ವೃತ್ತ, ಸ್ವಾತಂತ್ರ್ಯ ಉದ್ಯಾನ, ವಿಧಾನಸೌಧ, ವಿಕಾಸಸೌಧ, ವಿಶ್ವೇಶ್ವರಯ್ಯ ಟವರ್, ಮೆಜೆಸ್ಟಿಕ್‍ನ ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು ಸೇರಿದಂತೆ ಪ್ರಮುಖ ಕಚೇರಿಗಳು ಹಾಗೂ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಬೆಳಗ್ಗೆ ಪರಭವನದ ಬಳಿ ಪ್ರತಿಭಟನೆಗೆ ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

ವಾಟಾಳ್ ವಿನೂತನ ಪ್ರತಿಭಟನೆ

ರೈತರ ಹೋರಾಟ ಬೆಂಬಲಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಅವರು ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಈರುಳ್ಳಿ-ಬೆಳ್ಳುಳ್ಳಿ ಮಾರಾಟ ಮಾಡುವ ಮೂಲಕ ವಿನೂತನ ಪ್ರತಿಭಟನೆ ಮುಂದಾದರು. ಈ ವೇಳೆ ಪ್ರತಿಭಟನೆಗೆ ಅವಕಾಶ ನಿರಾಕರಿಸಿದ ಪೊಲೀಸರು ವಾಟಾಳ್ ನಾಗರಾಜ್ ಅವರನ್ನು ವಶಕ್ಕೆ ಪಡೆದು ಕರೆದೊಯ್ದರು.

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಚಳವಳಿ ಆರಂಭಕ್ಕೂ ಮುನ್ನವೇ ಬಂಧಿಸುವುದು ಸರಿಯಲ್ಲ. ಇದೊಂದು ನಾಚಿಕೆಗೆಟ್ಟ ಸರಕಾರ. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರನ್ನು ಬೀದಿಪಾಲು ಮಾಡಿವೆ. ರೈತವಿರೊಧಿ ಹಾಗೂ ಭ್ರಷ್ಟ ಸರಕಾರಗಳಿಂದ ದೇಶದ ಸ್ಥಿತಿ ಗಂಭೀರವಾಗಿದೆ ಎಂದು ವಾಗ್ದಾಳಿ ನಡೆಸಿದರು.

‘ಭಾರತ್ ಬಂದ್ ಕರೆ ನೀಡಿರಲಿಲ್ಲ’

ಕೃಷಿ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಶುಕ್ರವಾರ ಭಾರತ್ ಬಂದ್ ಅಥವಾ ಕರ್ನಾಟಕ ಬಂದ್‍ಗೆ ಕರೆ ನೀಡಿಲ್ಲ. ಬದಲಾಗಿ, ಮುಷ್ಕರ ನಡೆಸಿ, ಶವಯಾತ್ರೆ ನಡೆಸಲಾಯಿತು. ಆದರೆ, ರಾಜ್ಯ ಸರಕಾರ ಪೊಲೀಸರ ಬಲದಿಂದ ಹಲವು ಕಡೆಗಳಲ್ಲಿ ರೈತರಿಗೆ ಕಿರುಕುಳ ನೀಡಿ ಬಂಧಿಸಿದ್ದಾರೆ.

-ಸುಧಾಕರ್ ಬಾಬು, ರೈತ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News