ರಾಜ್ಯ ಉಪಚುನಾವಣೆ: ಮನೆ-ಮನೆ ಪ್ರಚಾರದ ವೇಳೆ 5 ಮಂದಿಗೆ ಮಾತ್ರ ಅವಕಾಶ
Update: 2021-03-26 21:06 IST
ಬೆಂಗಳೂರು, ಮಾ. 26: ಬೆಳಗಾವಿ ಲೋಕಸಭಾ ಕ್ಷೇತ್ರ, ರಾಯಚೂರು ಜಿಲ್ಲೆಯ ಮಸ್ಕಿ, ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಸಂದರ್ಭದಲ್ಲಿ ಕೋವಿಡ್-19 ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.
ನಾಮಪತ್ರ ಸಲ್ಲಿಕೆ ಅರ್ಜಿಗಳು ಚುನಾವಣಾ ಆಯೋಗದ ಆನ್‍ಲೈನ್‍ನಲ್ಲಿ ಲಭ್ಯವಿದ್ದು, ಅದನ್ನು ಭರ್ತಿ ಮಾಡಿ ಚುನಾವಣಾಧಿಕಾರಿಗಳಿಗೆ ಸಲ್ಲಿಸುವ ವೇಳೆ ಅಭ್ಯರ್ಥಿ ಜೊತೆಗೆ ಇಬ್ಬರಿಗೆ ಸೀಮಿತಗೊಳಿಸಲಾಗಿದೆ. ಎರಡು ವಾಹನಗಳ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ.
ಮನೆ-ಮನೆ ಪ್ರಚಾರದ ವೇಳೆ ಅಭ್ಯರ್ಥಿ ಸೇರಿದಂತೆ 5 ಮಂದಿಗೆ ಮಾತ್ರ ಅವಕಾಶ, ರೋಡ್ ಶೋ ವೇಳೆ ಎಲ್ಲರೂ ಮಾಸ್ಕ್ ಕಡ್ಡಾಯವಾಗಿ ಧರಿಸಿರಬೇಕು. ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು. ಬಹಿರಂಗ ಸಭೆಗೆ 200 ಜನರಿಗೆ ಮಿತಿಗೊಳಿಸಲಾಗಿದೆ. ಅಲ್ಲದೆ, ಪ್ರಚಾರದ ವೇಳೆ ಕೇಂದ್ರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಚುನಾವಣಾ ಆಯೋಗ ನಿರ್ದೇಶನ ನೀಡಿದೆ.