ಶಿವಮೊಗ್ಗ: ಸೂಲಿಬೆಲೆ ಕಾರ್ಯಕ್ರಮಕ್ಕೆ ಅನುಮತಿ ವಿರೋಧಿಸಿ ಎನ್‌ಎಸ್‌ಯುಐ ಪ್ರತಿಭಟನೆ
ಶಿವಮೊಗ್ಗ, ಮಾ.26: ನೆಹರು ಕ್ರೀಡಾಂಗಣದಲ್ಲಿ ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮಕ್ಕೆ ಅನುಮತಿ ನೀಡಿರುವುದನ್ನು ವಿರೋಧಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಕ್ರೀಡಾಂಗಣದ ಎದುರು ಪ್ರತಿಭಟನೆ ನಡೆಸಿದರು.
ನೆಹರೂ ಕ್ರಿಡಾಂಗಣದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದಾಗಿ ಇಲಾಖೆ ತಿಳಿಸಿತ್ತು. ಇತ್ತೀಚೆಗೆ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಬೇಕಿದ್ದ ರೈತ ಪಂಚಾಯತ್‌ಗೆ ಅವಕಾಶ ನೀಡಿರಲಿಲ್ಲ. ಆದ್ದರಿಂದ ಸೈನ್ಸ್ ಮೈದಾನದಲ್ಲಿ ಸದರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಎಂದರು.
ಇದೀಗ ನರೇಂದ್ರ ಮೋದಿ ವಿಚಾರ ಮಂಚ್‌ನಿಂದ ಮಾ.27ರಂದು ಆಯೋಜಿಸಿರುವ ರಾಜಕೀಯ ಪ್ರೇರಿತ ಭಾಷಣದ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ತಾರತಮ್ಯ ಮಾಡುತ್ತಿರುವುದು ಸರಿಯಲ್ಲ. ಚಕ್ರವರ್ತಿ ಸೂಲಿಬೆಲೆ ಅವರ ರಾಜಕೀಯ ಪ್ರೇರಿತ ಕಾರ್ಯಕ್ರಮಕ್ಕೆ ಅನುಮತಿ ನೀಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೂಲಿಬೆಲೆ ಅವರು ಭಾಷಣದಲ್ಲಿ ಸುಳ್ಳುಗಳನ್ನು ಹೇಳುವ ಮೂಲಕ ಯುವ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಾರೆ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಪೆಟ್ರೊಲ್, ಡಿಸೇಲ್ ದರ ಕಡಿಮೆ ಆಗುತ್ತದೆ, ಯುವಜನರಿಗೆ ಉದ್ಯೋಗ ಸಿಗುತ್ತದೆ, ದೇಶ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತದೆ ಎಂದೆಲ್ಲಾ ಸುಳ್ಳು ಹೇಳಿಕೆಗಳನ್ನು ಹಿಂದಿನ ಭಾಷಣಗಳಲ್ಲಿ ತಿಳಿಸಿದ್ದರು. ಆದರೆ ಕೇಂದ್ರ ಸರ್ಕಾರದ ನರೇಂದ್ರ ಮೋದಿ ಅಧಿಕಾರ ಅವಧಿಯಲ್ಲಿ ಯುವಜನರಿಗೆ ಸರಿಯಾದ ರೀತಿಯಲ್ಲಿ ಉದ್ಯೋಗ ಸಿಗುತ್ತಿಲ್ಲ. ಪೆಟ್ರೊಲ್, ಡಿಸೇಲ್ ದರ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಇಂತಹ ಸುಳ್ಳು ಭಾಷಣ ಮಾಡುವವರ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಎಚ್.ಎಸ್.ಬಾಲಾಜಿ, ಕಾರ್ಯಾಧ್ಯಕ್ಷ ರವಿಕುಮಾರ್, ನಗರಾಧ್ಯಕ್ಷ ವಿಜಯ್, ರವಿಕುಮಾರ್, ಆಲ್ವಿನ್, ಮನೋಜ್, ಪುರಲೆ ಮಂಜು, ಗಣೇಶ್, ಗಿರೀಶ, ವಿನಯ್, ಶಿವು, ಯುವ ಕಾಂಗ್ರೆಸ್ ಮುಖಂಡರಾದ ಸಿ.ಜಿ.ಮಧುಸೂದನ್, ಕೆ.ಚೇತನ್ ಮತ್ತಿತರರು ಹಾಜರಿದ್ದರು.