×
Ad

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಸಿಬ್ಬಂದಿ, ಅರ್ಚಕರ ವೇತನ ಶೀಘ್ರ ಜಾರಿ: ಸಚಿವ ಕೋಟಾ ಪೂಜಾರಿ

Update: 2021-03-26 22:55 IST

ಮೈಸೂರು,ಮಾ.26: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲಾ ಸಿಬ್ಬಂದಿ ಮತ್ತು ಅರ್ಚಕರ 6ನೇ ವೇತನ ಜಾರಿ ಸಂಬಂದ ಎ.9 ರಂದು ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ  ಮತ್ತು ಹಿಂದೂ ಧಾರ್ಮಿಕ ಮತ್ತು ಧರ್ಮದಾಯ ದತ್ತಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.

ಮೈಸೂರಿಗೆ ಶುಕ್ರವಾರ ಆಗಮಿಸಿದ ಅವರು ಬೆಳಿಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಶ್ರೀ ಚಾಮುಂಡೇಶ್ವರಿ ದೇವಿ ದರ್ಶನ ಪಡೆದರು. ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ನಗರದ ಸರ್ಕಾರಿ ಅತಿಥಿಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲಾ ಸಿಬ್ಬಂದಿ ಮತ್ತು ಅರ್ಚಕರಿಗೆ 6ನೇ ವೇತನ ಜಾರಿ ಮಾಡಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗಿದೆ. ಈ ಸಂಬಂಧ ಎ.9 ಎಂದು ಸಭೆ ಕರೆಯಲಾಗಿದ್ದು, ಅಂದೇ 6ನೇ ವೇತನ ಜಾರಿ ಮಾಡುವ ಸಂಬಂಧ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಧಾರ್ಮಿಕ ದತ್ತಿ ಎ ಮತ್ತು ಬಿ ದರ್ಜೆ ದೇವಾಲಯಗಳಲ್ಲಿ ಬರುವ ಆದಾಯದಲ್ಲೇ ಶೇ.35 ರಷ್ಟು ಸಿಬ್ಬಂಧಿಗಳ ವೇತನ ನೀಡಲಾಗುವುದು. ಇನ್ನು ಇಎಸ್‍ಐ, ಪಿಎಫ್ ಹಾಗೂ ಪಿಂಚಣಿ ಸೌಲಭ್ಯ ಸೇರಿ ಹಲವು ಸಮಸ್ಯೆಗಳನ್ನು ಸರ್ಕಾರದ ವತಿಯಿಂದ ಪರಿಹರಿಸಲಾಗುವುದು. ಈ ಸಂಬಂಧ ಮುಖ್ಯಮಂತ್ರಿಗಳ ಜೊತೆ ತೀರ್ಮಾನಿಸಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ರಾಜ್ಯದ ದೇವಾಲಯಗಳಲ್ಲಿ ಸಪ್ತಪದಿ ವಿವಾಹ ವ್ಯವಸ್ಥಿತವಾಗಿ ಆಗಬೇಕೆಂಬುದು ನಮ್ಮ ಆಶಯ. ಈಗಾಗಲೇ ಚಾಮುಂಡಿಬೆಟ್ಟದಲ್ಲಿ 14 ಜೋಡಿ, ನಂಜನಗೂಡಲ್ಲಿ 17 ಜೋಡಿ ವಿವಾಹ ಆಗಿದೆ. ಮುಂದೆ ನಂಜನಗೂಡಲ್ಲಿ ಎ.22 -ಹಾಗೂ ಮೇ7ರಂದು, ಚಾಮುಂಡೇಶ್ವರಿ ದೇವಾಲಯದಲ್ಲಿ ಜೂ.17ಕ್ಕೆ  ಸಪ್ತಪದಿ ವಿವಾಹ ನಿಗದಿ ಮಾಡಿದ್ದೇವೆ. ಮೇ.13ಕ್ಕೆ ತಲಕಾಡು ದೇವಾಲಯದಲ್ಲಿ ಸಪ್ತಪದಿ ವಿವಾಹ ನಡೆಯಲಿದೆ. ಹೀಗೆ ರಾಜ್ಯದಾದ್ಯಂತ ನೂರಕ್ಕೂ ಹೆಚ್ಚು ದೇವಾಲಯಗಳಲ್ಲಿ ಸಪ್ತಪದಿ ಸಾಮೂಹಿಕ ಸರಳ ವಿವಾಹ ನಡೆಯಲಿದೆ. ಕೊರೋನ ಹಿನ್ನೆಲೆಯಲ್ಲಿ 5 ಅಥವಾ 10 ಜೋಡಿಗೆ ಸೀಮಿತವಾಗಿ ಕಾರ್ಯಕ್ರಮ ನಡೆಸಲಾಗುವುದು. ಪ್ರತಿ ತಿಂಗಳು ನಾಲ್ಕೈದು ಮೂಹೂರ್ತದಲ್ಲಿ ಜನರ ಆಪೇಕ್ಷೆಗೆ ಅನುಗುಣವಾದ ದಿನಾಂಕದಂದು ಸಹ ಸಪ್ತಪದಿ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ಮಾಂಗಲ್ಯಕ್ಕೆ ಟೆಂಡರ್ ಕರೆಯಲು ಸ್ವಲ್ಪ ಸಮಸ್ಯೆಯಾಗಿತ್ತು. ಕಾವೇರಿ ಏಂಪೋರಿಯಂ ಮೂಲಕ ಮಾಂಗಲ್ಯ ಖರೀದಿಸಲು ಸೂಚನೆ ನೀಡಲಾಗಿದೆ. ಮೊನ್ನೆ ಘಾಟಿ ಸುಬ್ರಹ್ಮಣ್ಯದಲ್ಲಿ 48 ಜೋಡಿ ವಿವಾಹ ಆಗಿವೆ. ಕೊಲ್ಲೂರಲ್ಲಿ 25 ಜೋಡಿ ವಿವಾಹ ಆಗಿವೆ. ಎ ದರ್ಜೆ ದೇವಾಲಯದಲ್ಲಿ ನಿರಂತರವಾಗಿ ನಡೆಯುತ್ತಿವೆ. ನೂರಕ್ಕೂ ಹೆಚ್ಚು ದೇವಾಲಯದಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ಹೆಚ್ಚು ಜನರಿಗೆ ಅನೂಕೂಲ ಆಗಲಿದೆ ಎಂದು ಹೇಳಿದರು. 

ಹೊಸ ವ್ಯವಸ್ಥಾಪನ ಸಮಿತಿ ಮಾಡಬೇಕಾಗಿದ್ದು, ಅದನ್ನು ಮಾಡಲಾಗುವುದು. 30 ಜಿಲ್ಲೆಯ 30 ಧಾರ್ಮಿಕ ಪರಿಷತ್ತಿನ್ನು ಸಹ ಅನುಭವಿಗಳ ತಂಡವನ್ನು ರಚಿಸಲಾಗುವುದು. ಎ ದರ್ಜೆ ವ್ಯವಸ್ಥಾಪನಾ ಸಮಿತಿ ರಚಿಸಲಾಗಿದೆ. ಬಿ ಹಾಗೂ ಸಿ ದರ್ಜೆ ದೇವಾಲಯದ ವ್ಯವಸ್ಥಾಪನಾ ಸಮಿತಿ ರಚಿಸುವ ಕಾರ್ಯವೂ ನಡೆಯುತ್ತಿದೆ. ಸಾವಿರಾರು ಮಂದಿ ವ್ಯವಸ್ಥಾಪನಾ ಸಮಿತಿ ಸದಸ್ಯರಿಗೆ ತರಬೇತಿ ಕೊಡುವ ಕೆಲಸವೂ ನಡೆಯುತ್ತಿದೆ. ಜಿಲ್ಲಾ ಮಟ್ಟದಲ್ಲಿಯೂ ಅರ್ಚಕರ ತರಬೇತಿ ನಡೆಯುತ್ತಿದೆ ಎಂದು ಹೇಳಿದರು.

ಹಿಂದುಳಿದ ವಿದ್ಯಾರ್ಥಿ ನಿಲಯಗಳಲ್ಲಿ ವಾಸ್ತವ್ಯ

ಇಲಾಖೆಯ ಪಾರದರ್ಶಕತೆ ಹೆಚ್ಚಿಸುವ ಉದ್ದೇಶದಿಂದ ವಾರಕ್ಕೊಮ್ಮೆ ತಾಲೂಕು ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾ ಹಂತದ ಅಧಿಕಾರಿ ಹಾಗೂ ಹದಿನೈದು ದಿನಗಳಿಗೊಮ್ಮೆ ನನ್ನನ್ನೂ ಸೇರಿದಂತೆ ವಿದ್ಯಾರ್ಥಿ ನಿಲಯದಲ್ಲಿ ವಾಸ್ತವ್ಯ ಮಾಡಲು ನಿರ್ಧರಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. 

ಹಿಂದುಳಿದ ವರ್ಗಗಳ ಇಲಾಖೆಯಲ್ಲಿ 2400ಕ್ಕೂ ಹೆಚ್ಚು ವಿದ್ಯಾರ್ಥಿ ನಿಲಯಗಳಿವೆ. ಕೋವಿಡ್ ಹಿನ್ನಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೆಗೆದುಕೊಂಡಿಲ್ಲ. ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಒಂದೆರಡು ವಿದ್ಯಾರ್ಥಿನಿಲಯಗಳಲ್ಲಿ ಕೋವಿಡ್ ಪ್ರಕರಣ ಕಂಡಿದ್ದು, ಅದನ್ನು ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ. ಅತ್ಯಂತ ಪಾರದರ್ಶಕವಾಗಿ ವ್ಯವಸ್ಥೆ ನಡೆಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಅಧಿಕಾರಿಗಳು ವಾರಕ್ಕೊಮ್ಮೆ ತಾಲೂಕು ಮಟ್ಟದ ಹಾಸ್ಟೆಲ್‍ನಲ್ಲಿ ವಾಸ್ತವ್ಯ ಮಾಡಿ ಅಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸಲಾಗಿದೆ. ರಾಜ್ಯಮಟ್ಟದ ಕಾರ್ಯದರ್ಶಿ ಗಳು ಸಹ 15 ದಿನಕ್ಕೊಮ್ಮೆ ಹಾಸ್ಟೆಲ್‍ನಲ್ಲಿ ವಾಸ್ತವ್ಯ ಮಾಡುವಂತೆ ಹೇಳಿದ್ದು, ಅಧಿವೇಶನ ಮುಗಿಯುತ್ತಿದ್ದಂತೆ ನನ್ನನ್ನೂ ಸೇರಿದಂತೆ ಎಲ್ಲರೂ ಹಾಸ್ಟೆಲ್ ಪ್ರಗತಿ ಸುಧಾರಿಸುವ ನಿಟ್ಟಿನಲ್ಲಿ ಇದೆಲ್ಲವನ್ನೂ ಮಾಡಲಾಗುವುದು ಎಂದರು.

ಇದಕ್ಕೂ ಮುನ್ನ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಧಾರ್ಮಿಕ ಪರಿಷತ್ ರಾಜ್ಯ ಪಂಡಿತ್ ಸದಸ್ಯ ಗೋವಿಂದ ಭಟ್, ಸದಸ್ಯರಾದ ಶ್ರೀನಿವಾಸ್, ಎನ್.ಸ್ವಾಮಿ, ಮಮತ ಕಿಣಿ, ಮುಜರಾಯಿ ಇಲಾಖೆ ತಹಸೀಲ್ದಾರ್ ಯತಿರಾಜು, ಹಿಂದುಳಿದ ವರ್ಗಗಳ ಜಿಲ್ಲಾಧಿಕಾರಿ ಬಿಂದ್ಯಾ, ಬಿಜೆಪಿ ಹಿಂದುಳಿದ ವರ್ಗದ ಅಧ್ಯಕ್ಷ ಜೋಗಿ ಮಂಜು, ಮಾಜಿ ವಿಧಾನ ಪರಿಷತ್ ಸದಸ್ಯ ಸಿದ್ದರಾಜು ಇನ್ನಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News