ಬ್ಯಾಂಕ್ ಮ್ಯಾನೇಜರ್ ಹೆಸರಲ್ಲಿ ಕರೆ ಮಾಡಿ ಉದ್ಯಮಿಗೆ ಒಂದು ಲಕ್ಷ ರೂ. ವಂಚನೆ

Update: 2021-03-26 17:40 GMT

ಶಿವಮೊಗ್ಗ: ಬ್ಯಾಂಕೊಂದರ ಮ್ಯಾನೇಜರ್ ಎಂದು ಕರೆ ಮಾಡಿ ಶಿಕಾರಿಪುರ ಮೂಲದ ಉದ್ಯಮಿಯೊಬ್ಬರಿಗೆ ಒಂದು ಲಕ್ಷ ರೂ. ಮೋಸ ಮಾಡಿರುವ ಘಟನೆ ವರದಿಯಾಗಿದೆ.

ಇನ್ಶೂರೆನ್ಸ್ ಕಂಪೆನಿಯ ಹೆಸರಿನಲ್ಲಿ ಇಮೇಲ್ ಮಾಡಲಾಗಿತ್ತು. ಇದರ ಬೆನ್ನಲ್ಲೇ ಫೋನ್ ಮಾಡಿದ್ದ ವ್ಯಕ್ತಿಯೊಬ್ಬ ತಾನು ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದಾನೆ. 2012ರಲ್ಲಿ ಪಡೆದಿರುವ ಇನ್ಶೂರೆನ್ಸ್ ಗೆ 2013, 2014ರಲ್ಲಿ ಪ್ರಿಮಿಯಂ ಪಾವತಿಸಿಲ್ಲ. ಇದನ್ನು ಪಾವತಿಸಿದರೆ 2021ರ ಮಾರ್ಚ್ 31ರಂದು ಖಾತೆಗೆ 2.70 ಲಕ್ಷ ರೂ. ಜಮೆ ಆಗುವುದಾಗಿ ತಿಳಿಸಿದ್ದಾನೆ.

ಇದನ್ನು ನಂಬಿ 1 ಲಕ್ಷ ರೂ. ಹಣ ವರ್ಗಾಯಿಸಿದ್ದಾರೆ. ಮರುದಿನ ಮತ್ತೆ ಕರೆ ಮಾಡಿದ ವ್ಯಕ್ತಿ ಮೂರು ಲಕ್ಷ ರೂ. ಪಾವತಿಸಿದರೆ ಎಪ್ರಿಲ್ 1ರಂದು 8.75 ಲಕ್ಷ ರೂ. ಹಣ ಬರಲಿದೆ ಎಂದು ತಿಳಿಸಿದ್ದಾನೆ. ಇದರಿಂದ ಅನುಮಾನಗೊಂಡ ಉದ್ಯಮಿ ಬ್ಯಾಂಕ್ ಗೆ ಭೇಟಿ ನೀಡಿ ಈ ಬಗ್ಗೆ ವಿಚಾರಿಸಿದ್ದಾರೆ. ಆಗ ಮೋಸ ಹೋಗಿರುವುದು ಗೊತ್ತಾಗಿದೆ.

ಈ ಸಂಬಂಧ ಶಿವಮೊಗ್ಗದ ಎಸ್ಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News