×
Ad

ಕೊರೋನವನ್ನು ಔಷಧಿಯಿಂದ ಗೆಲ್ಲಬೇಕೇ ಹೊರತು ಸುಳ್ಳುಗಳಿಂದಲ್ಲ: ಸರಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ

Update: 2021-03-27 17:32 IST

ಬೆಂಗಳೂರು, ಮಾ.27: ರಾಜ್ಯದ ಆರೋಗ್ಯ ಇಲಾಖೆ ದಾಖಲೆ ಪ್ರಕಾರ 2020ರ ಡಿಸೆಂಬರ್ ವರೆಗಿನ ಕೊರೋನ ಸಾವಿನ ಸಂಖ್ಯೆ-12,090. ರಾಜ್ಯ ಯೋಜನಾ ಮತ್ತು ಅಂಕಿಅಂಶ ಇಲಾಖೆಯ ಪ್ರಕಾರ ಇದೇ ಅವಧಿಯಲ್ಲಿ ಕೊರೋನ ಸಾವಿನ ಸಂಖ್ಯೆ-22,320. ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಇದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್‍ಗಳನ್ನು ಮಾಡಿರುವ ಅವರು, ಕೊರೋನ ಉಲ್ಬಣಕ್ಕೆ ರಾಜ್ಯ ಬಿಜೆಪಿ ಸರಕಾರದ ಅಸಾಮರ್ಥ್ಯ, ಭ್ರಷ್ಟಾಚಾರ ಹಾಗೂ ಸುಳ್ಳುಗಳು ಕಾರಣ ಎಂದು ಮೊದಲ ದಿನದಿಂದ ಹೇಳುತ್ತಾ ಬಂದಿದ್ದೇನೆ. ತಪ್ಪನ್ನು ತಿದ್ದಿಕೊಳ್ಳದೆ ಎಲ್ಲವನ್ನು ಸಮರ್ಥಿಸಿಕೊಂಡ ಸರಕಾರದ ಲಜ್ಜೆಗೇಡಿತನದ ಫಲವನ್ನು ರಾಜ್ಯದ ಜನ ಅನುಭವಿಸಬೇಕಾಗಿದೆ ಎಂದು ಕಿಡಿಗಾರಿದ್ದಾರೆ.

ರಾಜ್ಯ ಬಿಜೆಪಿ ಸುಳ್ಳು ಹೇಳಿರುವುದು ಕೊರೋನ ಸಾವಿನ ಬಗ್ಗೆ ಮಾತ್ರ ಅಲ್ಲ, ಔಷಧಿ, ಮಾಸ್ಕ್, ಸ್ಯಾನಿಟೈಸರ್ ಪಿಪಿ ಕಿಟ್‍ಗಳಿಂದ ಹಿಡಿದು ಆಸ್ಪತ್ರೆಗಳ ಹಾಸಿಗೆ ಖರೀದಿವರೆಗೆ ಎಲ್ಲದರಲ್ಲಿಯೂ ನಡೆದಿರುವ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಸುಧಾಕರ್ ಸುಳ್ಳು ಹೇಳುತ್ತಲೇ ಇದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಕೊರೋನ ಸೋಂಕು, ಸಾವು, ಚಿಕಿತ್ಸೆ ಮತ್ತು ನೊಂದ ಕುಟುಂಬಗಳಿಗೆ ನೀಡಿರುವ ಪರಿಹಾರದ ಬಗ್ಗೆ ರಾಜ್ಯದ ಬಿಜೆಪಿ ಸರಕಾರ ತಕ್ಷಣ ಶ್ವೇತಪತ್ರ ಹೊರಡಿಸಿ ನಿಜ ಸಂಗತಿಯನ್ನು ರಾಜ್ಯದ ಜನತೆಗೆ ತಿಳಿಸಬೇಕು. ಕೊರೋನವನ್ನು ಔಷಧಿ-ಚಿಕಿತ್ಸೆಯಿಂದ ಗೆಲ್ಲಬೇಕೇ ಹೊರತು ಸುಳ್ಳುಗಳಿಂದಲ್ಲ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News