×
Ad

ಸಿಡಿ ಪ್ರಕರಣ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜೀನಾಮೆಗೆ ಬಿಜೆಪಿ ಆಗ್ರಹ

Update: 2021-03-27 17:40 IST

ಬೆಂಗಳೂರು, ಮಾ.27: ಸಿಡಿ ಪ್ರಕರಣ ಸಂಬಂಧಿತವಾಗಿ ಕಾಂಗ್ರೆಸ್ ಪಕ್ಷದ ನಾಯಕರು ಸದನದ ಅಮೂಲ್ಯ ಸಮಯವನ್ನು ವ್ಯರ್ಥಮಾಡಿದ್ದಾರೆ. ಮಹಾನಾಯಕ, ಮಹಾನಾಯಕಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿಗಳ ಮುತುವರ್ಜಿಯಲ್ಲೇ ಈ ಪ್ರಕರಣ ನಡೆದಿರುವ ಶಂಕೆ ರಾಜ್ಯದ ಜನತೆಯಲ್ಲಿ ಮೂಡುತ್ತಿದೆ. ಕಾಂಗ್ರೆಸ್ ಈ ಬಗ್ಗೆ ಸ್ಪಷ್ಟನೆ ನೀಡುವುದೇ? ಎಂದು ಬಿಜೆಪಿ ಪ್ರಶ್ನಿಸಿದೆ.

ಈ ಸಂಬಂಧ ಸರಣಿ ಟ್ವೀಟ್‍ಗಳನ್ನು ಮಾಡಿರುವ ಬಿಜೆಪಿ, ಷಡ್ಯಂತ್ರದ ಹಿಂದೆ ಮಹಾನಾಯಕನ ಹೆಸರು ಪ್ರಸ್ತಾವವಾಗಿದೆ. ಇತರ ಆರೋಪಿಗಳಂತೆ ಮಹಾನಾಯಕ ಕೂಡಾ ಆರೋಪಿಯಲ್ಲವೇ? ರಾಜಕಾರಣದಲ್ಲಿ ಅತಿಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿರುವ ಮಹಾನಾಯಕ ಏಕೆ ಇನ್ನೂ ರಾಜೀನಾಮೆ ಸಲ್ಲಿಸಿಲ್ಲ? ಕಾಂಗ್ರೆಸ್ ಪಕ್ಷಕ್ಕೆ ಬದ್ಧತೆ ಅನ್ನುವುದಿದ್ದರೆ ಮೊದಲು ಮಹಾನಾಯಕನ ರಾಜೀನಾಮೆ ಪಡೆಯಲಿ ಎಂದು ಒತ್ತಾಯಿಸಿದೆ.

ಪ್ರಕರಣದ ಆರೋಪಿಗಳೊಂದಿಗೆ ಸಂಬಂಧವಿರುವುದನ್ನು ಮಹಾನಾಯಕ ಒಪ್ಪಿಕೊಂಡಿದ್ದಾರೆ. ಪ್ರಕರಣದ ಮಾಸ್ಟರ್ ಮೈಂಡ್‍ಗಳೊಂದಿಗೆ ಯಾವ ರೀತಿಯ ಸಂಬಂಧವಿತ್ತೆಂಬುದನ್ನು ರಾಜ್ಯದ ಜನತೆಯ ಮುಂದೆ ಖಳನಾಯಕ ಬಹಿರಂಗಪಡಿಸಬೇಕು. ಸದನದಲ್ಲಿ ಬೊಬ್ಬೆ ಹಾಕಿದ ಶೂರರೆಲ್ಲಾ ಏಕೆ ಇಂದು ಮೌನವಾಗಿದ್ದಾರೆ? ಎಂದು ಬಿಜೆಪಿ ಪ್ರಶ್ನಿಸಿದೆ.

ಡಿ.ಕೆ.ಶಿವಕುಮಾರ್ ಆರಂಭದಲ್ಲಿ ಹೆಗಲು ಮುಟ್ಟಿಕೊಂಡು ನನ್ನನ್ನು ಸಿಲುಕಿಸುವ ಪ್ರಯತ್ನ ಎಂದಿರಿ. ಈಗ ಸಂತ್ರಸ್ತೆ ನನ್ನ ಭೇಟಿಗೆ ಪ್ರಯತ್ನಿಸಿದ್ದು ನಿಜ, ನರೇಶ್ ಮನೆಗೆ ಹೋಗಿದ್ದೇನೆ ಎನ್ನುತ್ತಿದ್ದೀರಿ. ಅಂದರೆ ಪ್ರಕರಣದ ಎಲ್ಲ ಆಗುಹೋಗುಗಳು ನಿಮ್ಮ ನಿಯಂತ್ರಣದಲ್ಲೇ ನಡೆಯುತ್ತಿತ್ತು ಎಂಬುದು ಸ್ಪಷ್ಟ ಅಲ್ಲವೇ? ಎಂದು ಬಿಜೆಪಿ ಕಿಡಿಗಾರಿದೆ.

ಸಹಾಯ ಮಾಡುವುದಕ್ಕೂ ಷಡ್ಯಂತ್ರದಲ್ಲಿ ಭಾಗಿಯಾಗುವುದಕ್ಕೂ ವ್ಯತ್ಯಾಸವಿದೆ. ಷಡ್ಯಂತ್ರದ ಭಾಗವಾಗಿದ್ದುಕೊಂಡ ಕಾರಣದಿಂದಲೇ ಹೆಗಲುಮುಟ್ಟಿ ನೋಡಿಕೊಂಡಿದ್ದಲ್ಲವೇ? ಮಹಾನಾಯಕರೇ, ಪ್ರಕರಣದ ಪ್ರಮುಖ ಮಾಸ್ಟರ್ ಮೈಂಡ್‍ಗಳೊಂದಿಗೆ ಅದೂ ಈ ಪ್ರಕರಣದ ಬಳಿಕ ಸಂಬಂಧ ಹೊಂದಿರಲು ಅದು ಹೇಗೆ ಸಾಧ್ಯ? ಎಂದು ಬಿಜೆಪಿ ಹೇಳಿದೆ.

ಕಾಗೆ ಹಿಕ್ಕೆ ಹಾಕಿದ್ದಕ್ಕೂ ಮೂಗು ತೂರಿಸುವ ಸೆಕ್ಷನ್ ಸಿದ್ದರಾಮಯ್ಯ ಅವರೇ, ಸಿಡಿ ಗೇಟ್ ಷಡ್ಯಂತ್ರದಲ್ಲಿ ಡಿ.ಕೆ.ಶಿವಕುಮಾರ್ ಅವರ ಪಾತ್ರದ ಬಗ್ಗೆ ಏಕೆ ಇನ್ನೂ ಮೌನವಾಗಿದ್ದೀರಿ? ಯಾವ ಸೆಕ್ಷನ್ ಪ್ರಕಾರ ಇದು ಅಪರಾಧವಾಗುತ್ತದೆ ಎಂದು ಜನರ ಮುಂದೆ ತೆರೆದಿಡಿ ಎಂದು ಬಿಜೆಪಿ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News