ಹೊಲಸು ರಾಜಕಾರಣಕ್ಕೆ ನಮ್ಮ ಹೆಣ್ಮಗಳನ್ನು ಬಳಸಿಕೊಳ್ಳುತ್ತಿದ್ದಾರೆ: ಯುವತಿಯ ಪೋಷಕರ ವಾಗ್ದಾಳಿ

Update: 2021-03-27 17:40 GMT

ಬೆಂಗಳೂರು, ಮಾ.27: ಹೆಣ್ಣು ಮಗಳನ್ನಿಟ್ಟುಕೊಂಡು ಯಾವ ರೀತಿಯ ರಾಜಕಾರಣ ಮಾಡುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ ಎಂದು ರಾಸಲೀಲೆ ಸಿಡಿ ಪ್ರಕರಣದ ಯುವತಿಯ ಪೋಷಕರು ಎಸ್‍ಐಟಿ ವಿಚಾರಣೆಗೆ ಹಾಜರಾದ ಬಳಿಕ ಹೇಳಿದ್ದಾರೆ.

ಶನಿವಾರ ಆಡುಗೊಡಿಯಲ್ಲಿ ಇರುವ ಎಸ್‍ಐಟಿ ಟೆಕ್ನಿಕಲ್ ವಿಂಗ್‍ನಲ್ಲಿ ಸತತ ನಾಲ್ಕು ಗಂಟೆ ವಿಚಾರಣೆ ಎದುರಿಸಿದ ಬಳಿಕ ಹೊರ ಬಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ನಮ್ಮ ಮಗಳನ್ನು ಗೋವಾಕ್ಕೆ ಕಳುಹಿಸಿದ್ದು, ಅವರೇ ಅವಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ನರೇಶ್ ಯಾರು? ಅವನು ಏಕೆ ನಮ್ಮ ಅಕ್ಕನನ್ನು ರಕ್ಷಿಸುತ್ತಾನೆ. ಇದೆಲ್ಲ ಬರೀ ಸುಳ್ಳು ಎಂದು ಸಂತ್ರಸ್ತ ಯುವತಿಯ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಹೆಣ್ಣು ಮಗಳನ್ನ ಇಟ್ಟು ರಾಜಕೀಯ ಮಾಡುತ್ತಿದ್ದಾರೆ. ಹೊಲಸು ರಾಜಕಾರಣಕ್ಕೆ ನಮ್ಮ ಹೆಣ್ಮಗಳನ್ನು ಏಕೆ ಬಳಸಿಕೊಳ್ಳುತ್ತಿದ್ದೀರಿ ಎಂದು ಪ್ರಶ್ನಿಸಿದ ಅವರು, ಮಾರ್ಚ್ 2ರಂದು ಡಿಕೆಶಿ ನಿವಾಸದ ಬಳಿ ತೆರಳಿದ್ದಳು. ಅವರು ನಮ್ಮನ್ನು ಭದ್ರವಾಗಿ ಇಟ್ಟುಕೊಂಡಿದ್ದಾರೆ ಎಂದು ಆಕೆ ಹೇಳಿದ್ದಾಳೆ ಎಂದರು.

ನಮ್ಮ ಬಳಿ ಸಾಕಷ್ಟು ಸಾಕ್ಷ್ಯಗಳಿದ್ದು, ಅವುಗಳನ್ನು ಈಗಾಗಲೇ ಎಸ್‍ಐಟಿ ಅಧಿಕಾರಿಗಳಿಗೆ ನೀಡಿದ್ದೇವೆ. ನಾನೂ ಸೈನ್ಯದಲ್ಲಿದ್ದು ಬಂದಿದ್ದೇನೆ. ದೇಶವನ್ನು ಕಾಯುವವನಿಗೆ ನಮ್ಮ ಮಗಳನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದು ನಮಗೆ ಗೊತ್ತಿದೆ. ನಾವು ಎಸ್ಟಿ ಜಾತಿಗೆ ಸೇರಿದವರಾಗಿದ್ದು, ನಮ್ಮ ಮಗಳನ್ನು ಈ ರೀತಿಯಾಗಿ ಉಪಯೋಗಕ್ಕೆ ಬಳಸಿಕೊಳ್ಳಬಾರದಾಗಿತ್ತು ಎಂದು ಯುವತಿ ತಂದೆ ಹೇಳಿದರು.

ಪೊಲೀಸ್ ಭದ್ರತೆಯಲ್ಲಿ ಪೋಷಕರು

ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯ ಪೋಷಕರು ಎಸ್‍ಐಟಿ ಅಧಿಕಾರಿಗಳ ಮುಂದೆ ಹಾಜರಾಗಿ ಸತತ ನಾಲ್ಕು ಗಂಟೆ ವಿಚಾರಣೆ ಎದುರಿಸಿದರು. ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡಿದರು. ಅಧಿಕಾರಿಗಳು ವಿಡಿಯೋದಲ್ಲಿರುವ ಮಗಳ ಕುರಿತು, ಕೊನೆಯದಾಗಿ ಮಗಳು ಭೇಟಿಯಾಗಿದ್ದು ಯಾವಾಗ ಎನ್ನುವಂತಹ ಹಲವು ಪ್ರಶ್ನೆಗಳನ್ನು ಕೇಳಿ, ಪೊಲೀಸರ ಭದ್ರತೆಯಲ್ಲಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

ರಮೇಶ್ ಜಾರಕಿಹೊಳಿಯನ್ನು ಇನ್ನೂ ಬಂಧಿಸಿಲ್ಲ ಏಕೆ:? ವಕೀಲ ಜಗದೀಶ್ 

ಅಶ್ಲೀಲ ವಿಡಿಯೊ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿರುವ ಯುವತಿ ಪರ ವಕೀಲ ಜಗದೀಶ್ ಅವರು, ನ್ಯಾಯಾಲಯದ ಉಸ್ತುವಾರಿಯಲ್ಲಿ ತನಿಖೆ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News