×
Ad

ಡಿ.ಕೆ.ಶಿವಕುಮಾರ್ ವಿರುದ್ಧದ 'ಅಸಭ್ಯ' ಪದ ಬಳಕೆಗೆ ವಿಷಾದ ವ್ಯಕ್ತಪಡಿಸಿದ ರಮೇಶ್ ಜಾರಕಿಹೊಳಿ

Update: 2021-03-27 20:15 IST

ಬೆಂಗಳೂರು, ಮಾ.27: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಅಶ್ಲೀಲ ವೀಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಶಾಸಕ ರಮೇಶ್ ಜಾರಕಿಹೊಳಿ ಅವರು ಏಕವಚನದಲ್ಲೇ ಹರಿಹಾಯ್ದಿದ್ದು, ಬಳಿಕ ತನ್ನ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದ ಸದಾಶಿವನಗರದ ಮನೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಶ್ಲೀಲ ವಿಡಿಯೊದಲ್ಲಿ ಇರುವ ಯುವತಿ ಎನ್ನಲಾದ ಪೋಷಕರೇ ಆ ಮಹಾನಾಯಕ ಯಾರೆಂದು ಈಗಾಗಲೇ ಬಹಿರಂಗಪಡಿಸಿದ್ದಾರೆ. ಅವರ ವಿರುದ್ಧ ಪೊಲೀಸರು ಅಟ್ರಾಸಿಟಿ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಬೇಕು. ಎಲ್ಲ ಪಕ್ಷದವರು ಆ ಮಹಾನಾಕನನ್ನು ವಿರೋಧಿಸಬೇಕು ಎಂದು ಒತ್ತಾಯಿಸಿದರು.

ನನ್ನದು ತಪ್ಪು ಇದ್ದರೆ ಪೊಲೀಸರು ನನ್ನನ್ನು ಒದ್ದು ಒಳಗಡೆ ಹಾಕಲಿ, ಇಲ್ಲವೇ ಆ ಯುವತಿ, ಆ ಮಹಾನಾಯಕನ ತಪ್ಪು ಇದ್ದರೆ ಅವರನ್ನು ಒದ್ದು ಒಳಗಡೆ ಹಾಕಲಿ. ನಾನು ಗಂಡಸು.. ಅವ ಗಾ... ಆಗಿದ್ದಾನೆ. ನನ್ನ ಬಳಿ ಇನ್ನೂ 11 ಸಾಕ್ಷ್ಯಾಧಾರಗಳಿವೆ, ಅವುಗಳನ್ನು ಎಸ್‍ಐಟಿಗೆ ಕೊಡಲಿದ್ದೇನೆ ಎಂದು ತಿಳಿಸಿದರು.

ಮುಂದಿನ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕನಕಪುರದಲ್ಲಿಯೇ ಡಿಕೆಶಿ ಅವರನ್ನು ಸೋಲಿಸಲು ಎಲ್ಲ ಹೋರಾಟ ನಡೆಸುತ್ತೇನೆ. ಬೆಳಗಾವಿ ಲೋಕಸಭಾ ಉಪಚುನಾವಣೆ ಪ್ರಚಾರಕ್ಕೆ ಬಂದರೆ ಅವರನ್ನು ಸ್ವಾಗತಿಸುತ್ತೇನೆ. ಅಲ್ಲಿಯೂ ಹೋರಾಟ ನಡೆಸಿ ಸುರೇಶ್ ಅಂಗಡಿ ಪತ್ನಿ ಮಂಗಳಾರನ್ನು ಗೆಲ್ಲಿಸುತ್ತೇವೆ ಎಂದು ಆಶಯ ವ್ಯಕ್ತಪಡಿಸಿದರು.

ಅಶ್ಲೀಲ ವೀಡಿಯೊ ಪ್ರಕರಣದಲ್ಲಿ ನರೇಶ್‍ಗೌಡನೆ ನಾನೇ ಕಿಂಗ್‍ಪಿನ್ ಎಂದು ಒಪ್ಪಿಕೊಂಡಿದ್ದಾನೆ. ಅವರ ಜೊತೆಗೆ ಇರುವ ಎಲ್ಲರಿಗೂ ಜೈಲು ಶಿಕ್ಷೆ ಆಗುತ್ತದೆ ಎಂದು ತಿಳಿಸಿದರು.

ವಿಷಾದ ವ್ಯಕ್ತಪಡಿಸುತ್ತೇನೆ: ರಮೇಶ್ ಜಾರಕಿಹೊಳಿ

ಕೆಲ ಸಮಯದ ಬಳಿಕ ನಗರದಲ್ಲಿ ಮತ್ತೆ ಮಾಧ್ಯಮದವರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ನಾನು ಅಸಭ್ಯವಾದ ಪದ ಬಳಸಬಾರದಿತ್ತು. ಆ ಪದವನ್ನು ಹಿಂಪಡೆಯುತ್ತೇನೆ. ವಿಷಾದ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News