ಕೆಲಸ ಬಿಟ್ಟ ವ್ಯಕ್ತಿಗೆ 30 ದಿನಗಳಲ್ಲಿ ಗ್ರಾಚ್ಯುಟಿ ಪಾವತಿಸಬೇಕು: ಹೈಕೋರ್ಟ್

Update: 2021-03-27 17:48 GMT

ಬೆಂಗಳೂರು, ಮಾ.27: ಉದ್ಯೋಗ ತೊರೆದ ಮೂವತ್ತು ದಿನಗಳಲ್ಲಿ ಸಂಸ್ಥೆಯೇ ಗ್ರಾಚ್ಯುಟಿ ಪಾವತಿಸಬೇಕು. ಅದಕ್ಕಾಗಿ ನೌಕರ ಸಂಸ್ಥೆಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಉದ್ಯೋಗ ಸ್ಥಗಿತಗೊಂಡ ನಂತರದ 30 ದಿನಗಳಲ್ಲಿ ಸಂಸ್ಥೆಯೇ ಈ ಮೊತ್ತವನ್ನು ಪಾವತಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಗ್ರಾಚ್ಯುಟಿ ವಿಳಂಬ ಮಾಡಿದ ಪ್ರಕರಣದಲ್ಲಿ ಬಡ್ಡಿ ನೀಡುವಂತೆ ನ್ಯಾಯಾಧಿಕರಣ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಎರಡು ಖಾಸಗಿ ಕಂಪೆನಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ, ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.

ಗ್ರಾಚ್ಯುಟಿ ಕಾಯ್ದೆ 1972ರ ಸೆಕ್ಷನ್ 4ರ ಪ್ರಕಾರ ಉದ್ಯೋಗಿಗೆ ಸಲ್ಲಬೇಕಿರುವ ಗ್ರಾಚ್ಯುಟಿ ಮೊತ್ತವನ್ನು ಪಾವತಿಸಬೇಕು. ಅದಕ್ಕಾಗಿ ಉದ್ಯೋಗಿಯಾಗಿದ್ದ ವ್ಯಕ್ತಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಬೆಂಗಳೂರಿನ ವರ್ಮಾ ಇಂಡಸ್ಟ್ರಿಯಲ್ ಪ್ರೈ. ಲಿ ಹಾಗೂ ಐಬಿಸಿ ನಾಲೆಜ್ ಪಾರ್ಕ್‍ನಲ್ಲಿ ಕೆಲಸ ಮಾಡಿದ್ದ ಪಿ.ಎನ್ ಜಾನಕಿರಾಮನ್ ಶೆಟ್ಟಿ 2002ರಲ್ಲಿ ನಿವೃತ್ತಿ ಹೊಂದಿದ್ದರು. ಆದರೆ ಗ್ರಾಚ್ಯುಟಿಯನ್ನು 2015ರಲ್ಲಿ ಅರ್ಜಿ ಸಲ್ಲಿಸಿದ ನಂತರ ಪಾವತಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜಾನಕಿ ರಾಮನ್ ಗ್ರಾಚ್ಯುಟಿ ಕಾಯ್ದೆ ಅನ್ವಯ ಸ್ಥಾಪಿಸಿರುವ ನ್ಯಾಯಾಧಿಕರಣದಲ್ಲಿ ದಾವೆ ಹೂಡಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣ ಗ್ರಾಚ್ಯುಟಿ ವಿಳಂಬ ಮಾಡಿದ್ದಕ್ಕೆ ಬಡ್ಡಿ ಪಾವತಿಸುವಂತೆ ಆದೇಶಿಸಿತ್ತು.

ಈ ಆದೇಶ ಪ್ರಶ್ನಿಸಿ ಎರಡೂ ಸಂಸ್ಥೆಗಳು ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು. ಜತೆಗೆ ಉದ್ಯೋಗ ಕೊನೆಗೊಂಡ ಬಳಿಕ ನೌಕರ ಅರ್ಜಿ ಸಲ್ಲಿಸಲು ವಿಳಂಬ ಮಾಡಿದ್ದಾರೆ. ಹೀಗಾಗಿ ಬಡ್ಡಿ ನೀಡುವ ಅಗತ್ಯವಿಲ್ಲ ಎಂದು ವಾದಿಸಿದ್ದವು. ಈ ವಾದ ಅಲ್ಲಗಳೆದಿರುವ ಹೈಕೋರ್ಟ್ ಕಾಯ್ದೆಯ ನಿಯಮಾನುಸಾರ ಸಂಸ್ಥೆ ತಾನೇ ಮುಂದಾಗಿ ಉದ್ಯೋಗಿ ಕೆಲಸ ಕೊನೆಗೊಳಿಸಿದ 30 ದಿನಗಳಲ್ಲಿ ಗ್ರಾಚ್ಯುಟಿ ಪಾವತಿಸಬೇಕು. ಅದಕ್ಕಾಗಿ ಕೆಲಸ ಬಿಟ್ಟ ವ್ಯಕ್ತಿ ಅರ್ಜಿ ಸಲ್ಲಿಸಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News