ಕೋಲಾರ: ಜಾತಿ ಗಣತಿ ವರದಿ ಬಿಡುಗಡೆಗೆ ಒತ್ತಾಯಿಸಿ ಧರಣಿ
ಕೋಲಾರ, ಮಾ.28: ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಆಧಾರಿತ ಜಾತಿ ಗಣತಿ ವರದಿ ಬಿಡುಗಡೆಗೆ ಒತ್ತಾಯಿಸಿ, ಅರ್ಹರಿಗೆ ಮಾತ್ರ ಮೀಸಲು ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ಹಿಂದುಳಿದ ಜಾತಿಗಳ ಒಕ್ಕೂಟ ಕೋಲಾರದಲ್ಲಿ ಇಂದು ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು.
ವಿಧಾನಸಭೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಶಾಸಕರಾದ ನಝೀರ್ ಅಹ್ಮದ್, ನಂಜೇಗೌಡ, ನಾರಾಯಣಸ್ವಾಮಿ, ರೂಪಾ ಶಶಿಧರ್ ಮತ್ತಿತರರು ಹಾಜರಿದ್ದರು.
ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಜಾತಿವಾರು ಜನಗಣತಿ ಮುಕ್ತಾಯವಾಗಿದ್ದರೂ, ರಾಜ್ಯ ಸರ್ಕಾರ ವರದಿಯನ್ನು ಬಿಡುಗಡೆಗೊಳಿಸಲು ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.
ಹಿಂದುಳಿದವರು ಮೀಸಲಾತಿ ಕೇಳುವುದಕ್ಕೆ ಯಾರ ವಿರೋಧವಿಲ್ಲ, ಮೀಸಲಾತಿ ಅರ್ಹರಿಗೆ ಸಿಗಲಿ, ಅನರ್ಹರಿಗೆ ಸಿಗಬಾರದು ಸಿದ್ದರಾಮಯ್ಯ ಎಂದು ಹೇಳಿದರು.
ಸಿಡಿ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಉತ್ತರ ಕೊಟ್ಟಿದ್ದಾರೆ. ಸಿಡಿ ಯುವತಿ ಭಯದಿಂದ ಅಜ್ಞಾತ ವಾಸದಲ್ಲಿದ್ದು, ಕೂಡಲೇ ಹೊರಬಂದು ದೂರು ಕೊಡಬೇಕು ಎಂದರು.
ಸಿಡಿ ಬಿಡುಗಡೆಯಾಗಿ ಈಗಾಗಲೇ 26 ದಿನಗಳು ಕಳೆದಿದ್ದು, ಯುವತಿಯನ್ನು ಪತ್ತೆ ಹಚ್ಚಲು ಆಗದಿರುವುದು ಪೊಲೀಸರ ವೈಫಲ್ಯ ಎಂದು ಸಿದ್ದರಾಯ್ಯ ಹೇಳಿದರು.